August 11, 2026
Tuesday, August 11, 2026
spot_img

ಸ್ಟಾರ್ ಹೊಟೇಲ್ ಆಯ್ತು, ಈಗ ಕ್ವಿಕ್ ಡೆಲಿವರಿ ಆ್ಯಪ್ ಸರದಿ: ಜೆಪ್ಟೋ ಗೋಡೌನ್ ನೋಡಿ ಅಧಿಕಾರಿಗಳೇ ಶಾಕ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ರಾಜ್ಯದಲ್ಲಿ ಆಹಾರ ಸುರಕ್ಷತಾ ಅಧಿಕಾರಿಗಳ ಭರ್ಜರಿ ಬೇಟೆ ಮುಂದುವರಿದಿದೆ. ಹೈಫೈ ಸ್ಟಾರ್ ಹೊಟೇಲ್‌ಗಳ ಮೇಲಿನ ದಾಳಿಯ ಬೆನ್ನಲ್ಲೇ, ಇದೀಗ ಕೇವಲ 10 ನಿಮಿಷಗಳಲ್ಲಿ ಸಾಮಗ್ರಿಗಳನ್ನು ಮನೆ ಬಾಗಿಲಿಗೆ ತಲುಪಿಸುವ ಪ್ರಮುಖ ಕ್ವಿಕ್ ಡೆಲಿವರಿ ಸಂಸ್ಥೆಯಾದ ‘ಜೆಪ್ಟೋ’ (Zepto) ಸರದಿಯಾಗಿದೆ. ಹೊಸಕೋಟೆಯಲ್ಲಿರುವ ಜೆಪ್ಟೋ ಸಂಸ್ಥೆಯ ಬೃಹತ್ ವೇರ್‌ಹೌಸ್ಮೇಲೆ ಆಹಾರ ಇಲಾಖೆಯ ಅಧಿಕಾರಿಗಳು ಧಿಡೀರ್ ದಾಳಿ ನಡೆಸಿದ್ದಾರೆ.

ಗೋದಾಮಿನಲ್ಲಿ ಕಂಡಿದ್ದೇನು? ಸ್ವಚ್ಛತೆ ಮಾಯ!

ಸಾರ್ವಜನಿಕರಿಗೆ ನಿತ್ಯವೂ ತರಕಾರಿ, ದಿನಸಿ ಹಾಗೂ ತಿಂಡಿ-ತಿನಿಸುಗಳನ್ನು ಪ್ಯಾಕ್ ಮಾಡಿ ಕಳುಹಿಸುವ ಜೆಪ್ಟೋದ ಈ ಮುಖ್ಯ ಗೋದಾಮಿನಲ್ಲಿ ಕನಿಷ್ಠ ಸ್ವಚ್ಛತೆಯೂ ಇಲ್ಲದಿರುವುದು ಅಧಿಕಾರಿಗಳ ತಪಾಸಣೆ ವೇಳೆ ಬೆಳಕಿಗೆ ಬಂದಿದೆ. ಆಹಾರ ಪದಾರ್ಥಗಳನ್ನು ಸಂಗ್ರಹಿಸಿಡುವ ಜಾಗದಲ್ಲಿ ಅಶುಚಿತ್ವ ಎದ್ದುಕಾಣುತ್ತಿದ್ದು, ನಿಯಮಗಳನ್ನು ಗಾಳಿಗೆ ತೂರಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದೆ. ಇದೇ ವೇಳೆ ಥಣಿಸಂದ್ರ ಪ್ರದೇಶದಲ್ಲಿರುವ ಜೆಪ್ಟೋ ಕೇಂದ್ರದ ಮೇಲೂ ಪ್ರತ್ಯೇಕ ತಪಾಸಣೆ ನಡೆಸಲಾಗಿದ್ದು, ಅಲ್ಲಿಯೂ ಸ್ವಚ್ಛತೆ ಕಾಪಾಡದ ಕಾರಣಕ್ಕಾಗಿ ಸಂಸ್ಥೆಗೆ ಬರೋಬ್ಬರಿ 25,000 ರೂಪಾಯಿ ದಂಡ ವಿಧಿಸಲಾಗಿದೆ.

ಕ್ವಿಕ್ ಡೆಲಿವರಿ ಆ್ಯಪ್‌ಗಳಿಗೆ ಬಿಗ್ ಶಾಕ್

ನಿಮಿಷಗಳಲ್ಲಿ ಆರ್ಡರ್ ತಲುಪಿಸುವ ಭರಾಟೆಯಲ್ಲಿ ಗ್ರಾಹಕರ ಆರೋಗ್ಯದ ಜತೆ ಆಟವಾಡುತ್ತಿರುವುದು ಈ ದಾಳಿಯಿಂದ ಸಾಬೀತಾದಂತಾಗಿದೆ. ದಾಳಿ ನಡೆಸಿದ ಆಹಾರ ಸುರಕ್ಷತಾ ಇಲಾಖೆಯ ಅಧಿಕಾರಿಗಳ ತಂಡವು ಗೋದಾಮಿನ ಪ್ರತಿಯೊಂದು ವಿಭಾಗವನ್ನು ಕೂಲಂಕಷವಾಗಿ ಪರಿಶೀಲಿಸಿದ್ದು, ಅಶುಚಿಗೊಂಡಿದ್ದ ಪರಿಸರವನ್ನು ಕಂಡು ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ನಿಯಮ ಉಲ್ಲಂಘನೆ ಮಾಡಿರುವ ಜೆಪ್ಟೋ ಸಂಸ್ಥೆಗೆ ಇಲಾಖೆಯು ನೋಟಿಸ್ ಜಾರಿ ಮಾಡಿ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !