August 11, 2026
Tuesday, August 11, 2026
spot_img

ಕಾರವಾರದಲ್ಲಿ ಘೋರ ದುರಂತ: ಮಗ ಆಸ್ಪತ್ರೆ ಪಾಲು, ತಾಯಿ-ತಂದೆ ಆತ್ಮಹ*ತ್ಯೆಗೆ ಶರಣು

ಹೊಸದಿಗಂತ ವರದಿ ಕಾರವಾರ:

ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಮಗನ ಪರಿಸ್ಥಿತಿ ನೋಡಲಾಗದೆ ತಾಯಿ ನೇಣಿಗೆ ಶರಣಾದರೆ, ಮಗನ ಅಪಘಾತದ ಆಘಾತದಿಂದ ಹೊರಬರುವ ಮೊದಲೇ ಹೆಂಡತಿಯೂ ಆತ್ಮಹತ್ಯೆ ಮಾಡಿಕೊಂಡ ನೋವನ್ನು ಸಹಿಸಲಾರದೇ ಗಾಯಾಳುವಿನ ತಂದೆಯೂ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಶಿರವಾಡದ ಬಂಗಾರಪ್ಪ ನಗರದಲ್ಲಿ ನಡೆದಿದೆ.

ಬಂಗಾರಪ್ಪ ನಗರದ ವೆಂಕಟೇಶ ವಡ್ಡರ(38) ಮತ್ತು ವಿಜಯಾ ವಡ್ಡರ್ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಗಳು. ಇವರ ಹತ್ತು ವರ್ಷದ ಮಗ ಶರತ್ ಒಂದು ವಾರದ ಹಿಂದೆ ಬೈಕಿನಿಂದ ಬಿದ್ದು ತಲೆಗೆ ಗಂಭೀರ ಗಾಯವಾಗಿದ್ದರಿಂದ ಕಾರವಾರದ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಆದರೂ ಆತನ ಸ್ಥಿತಿ ಜೀವಂತ ಶವದಂತೆ ಇರುವುದನ್ನು ಕಂಡ ತಾಯಿ ವಿಜಯಾ ವಡ್ಡರ ಖಿನ್ನತೆಗೆ ಒಳಗಾಗಿ ಅಗಸ್ಟ್ 9 ರಂದು ತಮ್ಮ ಮನೆಯ ಮೇಲ್ಛಾವಣಿಗೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದರು.

ಮಗನ ಚಿಂತಾಜನಕ ಪರಿಸ್ಥಿತಿಯ ನಡುವೆ ಹೆಂಡತಿ ಸಹ ಆತ್ಮಹತ್ಯೆ ಮಾಡಿಕೊಂಡಿರುವುದರಿಂದ ಆಘಾತಗೊಂಡ ವೆಂಕಟೇಶ ವಡ್ಡರ ತಾನೂ ಸಹ ಸಾಯುವುದಾಗಿ ಹೇಳಿ ಆಸ್ಪತ್ರೆಯಿಂದ ಓಡಿ ಹೋಗಿ ಕೋಡಿಭಾಗ ಬಳಿ ಕಾಳಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಅಳ್ವೇವಾಡ ಬಳಿ ಮೃತದೇಹ ಪತ್ತೆಯಾಗಿದೆ.

ಇದನ್ನೂ ಓದಿ:

ಅಪಘಾತದಲ್ಲಿ ಗಂಭೀರ ಗಾಯಗೊಂಡ ಮಗನ ಜೀವ ಉಳಿಸಲು ಆಸ್ಪತ್ರೆಯಲ್ಲಿ ವೈದ್ಯರ ಪ್ರಯತ್ನಗಳು ನಡೆಯುತ್ತಿರುವಾಗಲೇ ತಂದೆ-ತಾಯಿ ಇಬ್ಬರೂ ಸಾವಿನ ಹಾದಿಯನ್ನು ಹುಡುಕಿ ನಡೆದಿರುವುದು ಸ್ಥಳೀಯರು ಶೋಕ ಸಾಗರದಲ್ಲಿ ಮುಳುಗುವಂತೆ ಮಾಡಿದ್ದು, ಗಂಭೀರವಾಗಿ ಗಾಯಗೊಂಡ ಬಾಲಕ ಹೆತ್ತವರಿಲ್ಲದೇ ಸಂಕಷ್ಟಕ್ಕೆ ಸಿಲುಕುವಂತಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !