ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂಬೈ ಮಹಾನಗರದಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಘಾಟ್‌ಕೋಪರ್‌ನ ಚಿರಾಗ್ ನಗರದಲ್ಲಿರುವ ಗೌಸಿಯಾ ಚಾವ್ಲ್‌ನಲ್ಲಿ ಭೀಕರ ಭೂಕುಸಿತ ಸಂಭವಿಸಿದೆ. ಇಂದು (ಬುಧವಾರ) ಮುಂಜಾನೆ ನಡೆದ ಈ ದುರಂತದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ. ಇನ್ನು 4 ರಿಂದ 5 ಜನರು ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಭೀತಿ ಎದುರಾಗಿದೆ.
ಮುಂಜಾನೆ ನಡೆದ ದುರಂತ:
ಮುಂಬೈ ಮಹಾನಗರ ಪಾಲಿಕೆ (BMC) ನೀಡಿದ ಮಾಹಿತಿ ಪ್ರಕಾರ, ಬುಧವಾರ ಮುಂಜಾನೆ ಸುಮಾರು 3:48 ಕ್ಕೆ ಈ ಘಟನೆ ಸಂಭವಿಸಿದೆ. ಗುಡ್ಡದ ಒಂದು ಭಾಗವು ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದರಿಂದ ಪಕ್ಕದಲ್ಲಿದ್ದ 2 ರಿಂದ 3 ಮನೆಗಳು ಸಂಪೂರ್ಣವಾಗಿ ಧ್ವಂಸಗೊಂಡಿವೆ. ಆ ಸಮಯದಲ್ಲಿ ಮನೆಯಲ್ಲಿ ಮಲಗಿದ್ದ ಜನರು ಮಣ್ಣಿನ ರಾಶಿಯ ಅಡಿಯಲ್ಲಿ ಸಿಲುಕಿಕೊಂಡಿದ್ದಾರೆ ಎನ್ನಲಾಗಿದೆ.
ಸ್ಥಳಕ್ಕೆ ಅಧಿಕಾರಿಗಳ ಭೇಟಿ:
ಘಟನೆ ನಡೆದ ಬೆನ್ನಲ್ಲೇ ಬಿಎಂಸಿ ಮೇಯರ್ ರಿತು ತಾವ್ಡೆ ಮತ್ತು ಹೆಚ್ಚುವರಿ ಮುನ್ಸಿಪಲ್ ಕಮಿಷನರ್ ಅವಿನಾಶ್ ಧಾಕ್ನೆ ಅವರು ದುರಂತ ಸಂಭವಿಸಿದ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದ್ದಾರೆ.
ಮುಂದುವರೆದ ರಕ್ಷಣಾ ಕಾರ್ಯಾಚರಣೆ:
ಸ್ಥಳದಲ್ಲಿ ಮುಂಬೈ ಅಗ್ನಿಶಾಮಕ ದಳ, ಮುಂಬೈ ಪೊಲೀಸ್ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ಜಂಟಿಯಾಗಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ. ಅವಶೇಷಗಳಡಿಯಲ್ಲಿ ಸಿಲುಕಿರುವವರನ್ನು ಪತ್ತೆ ಹಚ್ಚಲು ಜೀವಂತ ವ್ಯಕ್ತಿಗಳನ್ನು ಗುರುತಿಸುವ ಸುಧಾರಿತ ‘ವಿಕ್ಟಿಮ್ ಕ್ಯಾಮೆರಾ’ಗಳನ್ನು ಬಳಸಲಾಗುತ್ತಿದೆ.
ಪೊಲೀಸ್ ಕಮಿಷನರ್ ಮಾಹಿತಿ:
ಘಟನೆ ಕುರಿತು ಸುದ್ಧಿಗಾರರೊಂದಿಗೆ ಮಾತನಾಡಿದ ಡಿಸಿಪಿ ಗಣೇಶ್ ಶಿಂದೆ, ರಕ್ಷಣಾ ಕಾರ್ಯಾಚರಣೆ ಚುರುಕಾಗಿ ನಡೆಯುತ್ತಿದೆ. ಸದ್ಯಕ್ಕೆ ನಿಖರ ಸಂಖ್ಯೆ ಹೇಳಲು ಸಾಧ್ಯವಿಲ್ಲದಿದ್ದರೂ ಇನ್ನೂ ಮೂರರಿಂದ ನಾಲ್ಕು ಜನರು ಮಣ್ಣಿನಡಿ ಸಿಲುಕಿರುವ ಶಂಕೆ ಇದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಘಾಟ್‌ಕೋಪರ್ ಪೊಲೀಸರು ಈ ಬಗ್ಗೆ ಮುಂದಿನ ತನಿಖೆ ನಡೆಸಲಿದ್ದಾರೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:
ಇಬ್ಬರಿಗೆ ಗಂಭೀರ ಗಾಯ:
ಘಟನೆಯಲ್ಲಿ ಗಾಯಗೊಂಡ ಇಬ್ಬರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳನ್ನು ತಲೆಗೆ ಪೆಟ್ಟಾಗಿರುವ ಸೊಹೈಲ್ ಅನ್ಸಾರಿ (18) ಮತ್ತು ಬೆನ್ನಿಗೆ ಪೆಟ್ಟಾಗಿರುವ ಮೊಹಮ್ಮದ್ ಅನ್ಸಾರಿ (14) ಎಂದು ಗುರುತಿಸಲಾಗಿದೆ. ಸದ್ಯ ಇಬ್ಬರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.



