August 12, 2026
Wednesday, August 12, 2026
spot_img

ಆನ್‌ಲೈನ್‌ ಗೇಮಿಂಗ್‌ ಚಟಕ್ಕೆ ಬಿದ್ದು ಲಕ್ಷ ಲಕ್ಷ ಹಣ ಕಳೆದುಕೊಂಡು ಆತ್ಮ*ಹತ್ಯೆಗೆ ಶರಣಾದ ಗೃಹಿಣಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಆನ್‌ಲೈನ್‌ ಗೇಮಿಂಗ್‌ ಚಟಕ್ಕೆ ಬಿದ್ದು ಲಕ್ಷಾಂತರ ರೂಪಾಯಿ ಕಳೆದುಕೊಂಡ ಗೃಹಿಣಿಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ನೆಲಮಂಗಲದ ಬೊಮ್ಮನಹಳ್ಳಿಯಲ್ಲಿ ನಡೆದಿದೆ.

28 ವರ್ಷದ ರಂಜಿತಾ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಗೃಹಿಣಿ. ನೆಲಮಂಗಲದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ರಂಜಿತಾ ಕೆಲ ಸಮಯದಿಂದ ಕೆಲಸ ಬಿಟ್ಟಿದ್ದರು. ರಂಜಿತಾ ಹತ್ತು ವರ್ಷದ ಹಿಂದೆಯೇ ಅರುಣ್‌ ಎನ್ನುವವರನ್ನು ವಿವಾಹವಾಗಿದ್ದರು. ಇಬ್ಬರೂ ಗುಲ್ಬರ್ಗಾ ಮೂಲದವರಾಗಿದ್ದು, ನೆಲಮಂಗಲದ ಬಾಡಿಗೆ ಮನೆಯಲ್ಲಿ ವಾಸವಿದ್ದರು.

ಒಂದು ವರ್ಷದಿಂದ ಗೇಮಿಂಗ್‌ ಹುಚ್ಚು

ಕಳೆದ ಒಂದು ವರ್ಷದಿಂದ ಆನ್‌ಲೈನ್‌ ಗೇಮ್ಸ್‌ ಚಟಕ್ಕೆ ಬಿದ್ದ ರಂಜಿತಾ ಅವರಿವರ ಬಳಿ ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡಿದ್ದರು. ಇವರ ಸಾಲವನ್ನು ರಂಜಿತಾ ತಾಯಿ ಹಾಗೂ ಪತಿ ತೀರಿಸಿದ್ದರು. ಬರೋಬ್ಬರಿ 15 ಲಕ್ಷ ರೂ. ಹಣವನ್ನು ಗೇಮಿಂಗ್‌ ಮೇಲೆ ಹಾಕಿದ್ದ ರಂಜಿತಾಗೆ ಮನೆಯವರು ಆಟ ಆಡುವುದನ್ನು ನಿಲ್ಲಿಸುವಂತೆ ಹೇಳಿದ್ದರು. ಗಂಡ ಹಾಗೂ ಅಮ್ಮ ನನಗಾಗಿ 15 ಲಕ್ಷ ರೂ. ಸಾಲ ತೀರಿಸಿದ್ದಾರೆ ಎನ್ನುವುದನ್ನು ಮರೆತು ಮತ್ತೆ ರಂಜಿತಾ ಗೇಮಿಂಗ್‌ಗಾಗಿ ಸಾಲ ಮಾಡಿಕೊಂಡಿದ್ದರು.

ಎರಡು ದಿನಗಳ ಹಿಂದೆ ಕೆಲಸದ ಹಿನ್ನೆಲೆ ಅರುಣ್‌ ಗುಲ್ಬರ್ಗಾಗೆ ತೆರಳಿದ್ದರು. ಈ ವೇಳೆ ಸಾಲದಿಂದ ಮನನೊಂದ ರಂಜಿತಾ ತನ್ನ ಏಳು ವರ್ಷದ ಮಗ ಮನೆಯಲ್ಲಿಯೇ ಇರುವಾಗ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸ್ಥಳಕ್ಕೆ ನೆಲಮಂಗಲ ಗ್ರಾಮಾಂತರ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !