August 12, 2026
Wednesday, August 12, 2026
spot_img

ಮತದಾರರ ಪಟ್ಟಿಯಲ್ಲಿ ಬಿಗ್ ಸ್ಕ್ಯಾನ್: ಕರ್ನಾಟಕದಲ್ಲಿ 1.08 ಕೋಟಿ ಹೆಸರುಗಳಿಗೆ ‘SIR’ ಶಾಕ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆ ವೇಗ ಪಡೆದುಕೊಂಡಿದ್ದು, ಕೋಟ್ಯಂತರ ಮತದಾರರ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ. ಮನೆಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿರುವ ಚುನಾವಣಾ ಅಧಿಕಾರಿಗಳು, ಲಭ್ಯವಾಗದವರು, ಸ್ಥಳಾಂತರಗೊಂಡವರು, ಮೃತಪಟ್ಟವರು ಹಾಗೂ ಒಂದಕ್ಕಿಂತ ಹೆಚ್ಚು ಕಡೆ ಹೆಸರು ಹೊಂದಿರುವವರನ್ನು ಪ್ರತ್ಯೇಕ ವರ್ಗಗಳಲ್ಲಿ ಗುರುತಿಸಿದ್ದಾರೆ. ಈ ಪ್ರಕ್ರಿಯೆಯಲ್ಲಿ ರಾಜ್ಯದ 1.08 ಕೋಟಿಗೂ ಹೆಚ್ಚು ಮತದಾರರು ASDDO ವರ್ಗಕ್ಕೆ ಸೇರಿರುವುದು ಇದೀಗ ಗಮನ ಸೆಳೆದಿದೆ.

1.08 ಕೋಟಿ ಮತದಾರರು ASDDO ವರ್ಗದಲ್ಲಿ

ಸುದ್ದಿಗೋಷ್ಠಿ ನಡೆಸಿದ ಕರ್ನಾಟಕ ಮುಖ್ಯ ಚುನಾವಣಾ ಆಯುಕ್ತ ಅನ್ಬುಕುಮಾರ್, ರಾಜ್ಯದಲ್ಲಿ ಒಟ್ಟು ಸುಮಾರು 5.54 ಕೋಟಿ ಮತದಾರರಿದ್ದು, ಈ ಪೈಕಿ 1,08,75,304 ಮತದಾರರನ್ನು ASDDO ವರ್ಗದಲ್ಲಿ ಗುರುತಿಸಲಾಗಿದೆ ಎಂದು ಹೇಳಿದರು.

ಎನ್ಯೂಮರೇಷನ್ ಫಾರಂ ವಿತರಣೆ ಪೂರ್ಣ

ರಾಜ್ಯದಲ್ಲಿ ಮತದಾರರಿಗೆ ಎನ್ಯೂಮರೇಷನ್ ಫಾರಂ ವಿತರಿಸುವ ಕಾರ್ಯವನ್ನು ಶೇ.100ರಷ್ಟು ಪೂರ್ಣಗೊಳಿಸಲಾಗಿದೆ. ಒಟ್ಟು 5,54,32,314 ಫಾರಂಗಳನ್ನು ವಿತರಿಸಲಾಗಿದ್ದು, ಈ ಪೈಕಿ 4,45,57,010 ಫಾರಂಗಳನ್ನು ಡಿಜಿಟಲೀಕರಣ ಮಾಡಲಾಗಿದೆ. ಅಂದರೆ ಶೇ.80.38ರಷ್ಟು ಫಾರಂಗಳು ಡಿಜಿಟಲ್ ಪ್ರಕ್ರಿಯೆಗೆ ಒಳಪಟ್ಟಿವೆ.

ಸ್ಥಳಾಂತರಗೊಂಡವರು, ಮೃತರ ವಿವರ

ASDDO ಪಟ್ಟಿಯಲ್ಲಿ 65,73,976 ಮತದಾರರು ಶಾಶ್ವತವಾಗಿ ಸ್ಥಳಾಂತರಗೊಂಡವರು, 16,36,673 ಮಂದಿ ಮೃತಪಟ್ಟವರು ಎಂದು ಗುರುತಿಸಲಾಗಿದೆ. ಎರಡು ಕಡೆ ಮತದಾರರ ಪಟ್ಟಿಯಲ್ಲಿ ಹೆಸರು ಹೊಂದಿರುವ 7,01,412 ಮಂದಿಯನ್ನೂ ಗುರುತಿಸಲಾಗಿದೆ. ಇನ್ನು 4,14,486 ಮತದಾರರನ್ನು ಇತರೆ ವರ್ಗದಲ್ಲಿ ಸೇರಿಸಲಾಗಿದೆ ಎಂದು ಆಯುಕ್ತರು ವಿವರಿಸಿದ್ದಾರೆ.

ಇದನ್ನೂ ಓದಿ:

ಹೆಸರು ಬಿಟ್ಟಿದ್ದರೆ ಫಾರಂ-6 ಸಲ್ಲಿಸಿ

ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಯಾವುದೇ ಗೊಂದಲ ಅಥವಾ ಹೆಸರು ಕಾಣೆಯಾಗಿರುವುದು ಕಂಡುಬಂದರೆ, ಸಂಬಂಧಪಟ್ಟ BLO (ಮತಗಟ್ಟೆ ಮಟ್ಟದ ಅಧಿಕಾರಿ) ಅವರನ್ನು ಸಂಪರ್ಕಿಸುವಂತೆ ಅನ್ಬುಕುಮಾರ್ ಮನವಿ ಮಾಡಿದ್ದಾರೆ. ಹೊಸ ವಿಳಾಸಕ್ಕೆ ಸ್ಥಳಾಂತರಗೊಂಡವರು ಅಗತ್ಯ ಪ್ರಕ್ರಿಯೆಯಂತೆ ಮಾಹಿತಿ ಸಲ್ಲಿಸಬಹುದು.

ಆಗಸ್ಟ್ 24ರಂದು ಮೊದಲ ಪಟ್ಟಿ ಪ್ರಕಟ

SIR ಪ್ರಕ್ರಿಯೆಯ ಮೊದಲ ಮತದಾರರ ಪಟ್ಟಿ ಆಗಸ್ಟ್ 24ರಂದು ಪ್ರಕಟವಾಗಲಿದೆ. ಹೊಸದಾಗಿ ಮತದಾರರಾಗಲು ಅರ್ಹರಾಗಿರುವವರು ಆನ್‌ಲೈನ್ ಮೂಲಕ ಫಾರಂ-6 ಸಲ್ಲಿಸಬಹುದು. 2026ರ ಅಕ್ಟೋಬರ್ 1ರಂದು 18 ವರ್ಷ ಪೂರ್ಣಗೊಳಿಸುವವರೂ ಮತದಾರರ ಪಟ್ಟಿಗೆ ಸೇರ್ಪಡೆಗಾಗಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಮುಖ್ಯ ಚುನಾವಣಾ ಆಯುಕ್ತರು ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !
Skip to toolbar