ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಧರಣಿ ಹಾಗೂ ಪ್ರತಿಭಟನೆಗಳಿಗೆ ಹೆಸರುವಾಸಿಯಾಗಿದ್ದ ಜಂತರ್ ಮಂತರ್ ಸ್ಥಳದಲ್ಲಿ ಇನ್ನುಮುಂದೆ ಯಾವುದೇ ರೀತಿಯ ಪ್ರತಿಭಟನೆಯನ್ನು ಮಾಡುವಂತಿಲ್ಲ.
ಹೌದು, ಈ ಐತಿಹಾಸಿಕ ತಾಣವನ್ನು ಪ್ರತಿಭಟನಾ ತಾಣಗಳ ಪಟ್ಟಿಯಿಂದ ಕೈಬಿಡಲಾಗಿದೆ. ಇನ್ಮುಂದೆ ಜಂತರ್ ಮಂತರ್‌ನಲ್ಲಿ ಯಾವುದೇ ರೀತಿಯ ಧರಣಿ, ಪ್ರತಿಭಟನೆ ಅಥವಾ ಮೆರವಣಿಗೆ ನಡೆಸಲು ಅವಕಾಶವಿರುವುದಿಲ್ಲ. ಈ ಸಂಬಂಧ ಕೇಂದ್ರ ಗೃಹ ಸಚಿವಾಲಯ ರಚಿಸಿದ್ದ ಸಮಿತಿಯ ಶಿಫಾರಸಿನ ಮೇರೆಗೆ ದೆಹಲಿ ಪೊಲೀಸ್ ಕಮಿಷನರ್ ಕಚೇರಿಯು ಅಧಿಕೃತ ಆದೇಶ ಹೊರಡಿಸಿದೆ.
ಇದರ ಬದಲಾಗಿ, ರಾಮಲೀಲಾ ಮೈದಾನ, ಬುರಾರಿ ಮೈದಾನ ಹಾಗೂ ಪೂರ್ವ ದೆಹಲಿಯ ಸಿಬಿಡಿ ಮೈದಾನದಲ್ಲಿ ಪ್ರತಿಭಟನೆ ನಡೆಸಬಹುದಾಗಿದೆ. ನೂತನವಾಗಿ ಗುರುತಿಸಲಾಗಿರುವ ಈ ಮೂರು ಮೈದಾನಗಳಲ್ಲಿ ಪ್ರತಿಭಟನೆ ಅಥವಾ ಧರಣಿಗಳನ್ನು ಆಯೋಜಿಸಲು ಅನುಸರಿಸಬೇಕಾದ ವಿವರವಾದ ಪರಿಷ್ಕೃತ ಮಾರ್ಗಸೂಚಿಗಳನ್ನು ಶೀಘ್ರದಲ್ಲೇ ಪ್ರತ್ಯೇಕವಾಗಿ ಬಿಡುಗಡೆ ಮಾಡಲಾಗುವುದು ಎಂದು ದೆಹಲಿ ಪೊಲೀಸ್ ಇಲಾಖೆ ತಿಳಿಸಿದೆ.
ಕಾರಣ ಏನು?
ಸುಪ್ರೀಂ ಕೋರ್ಟ್ ಕೂಡ ಈ ಹಿಂದೆ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುವುದರಿಂದ ಎದುರಾಗುವ ಸಮಸ್ಯೆಗಳನ್ನು ಉಲ್ಲೇಖಿಸಿತ್ತು. ಅಷ್ಟೇ ಅಲ್ಲದೇ ಅಲ್ಲಿ ಬೇರೆ ಜಾಗಗಳನ್ನು ಸೂಚಿಸುವಂತೆ ಸರ್ಕಾರಕ್ಕೆ ಸಲಹೆ ನೀಡಿತ್ತು. ಜಂತರ್ ಮಂತರ್ ಹತ್ತಿರವೇ ಸುಪ್ರೀಂ ಕೋರ್ಟ್, ಸಂಸತ್ ಭವನ ಇರುವ ಕಾರಣ ಸುಲಭವಾಗಿ ತಲುಪಬಹುದಿತ್ತು. ಈ ಭಾಗದಲ್ಲಿ ಸರ್ಕಾರಿ ವಸತಿಗೃಹಗಳಿದ್ದು, ಹಲವು ಸಂಸದರು ವಾಸಿಸುತ್ತಿರುವುದರಿಂದ ಅಲ್ಲಿ ಸದಾ ಪ್ರತಿಭಟನೆ ನಡೆಸುವುದು ಸೂಕ್ತವಲ್ಲ ಎಂದು ಹೇಳಿತ್ತು. ಇಲ್ಲಿ ಪ್ರತಿಭಟನೆ ನಡೆಸುವುದರಿಂದ ಸಾರ್ವಜನಿಕ ಸುರಕ್ಷತೆ, ಕಾನೂನು ಹಾಗೂ ಸುವ್ಯವಸ್ಥೆಗೆ ಧಕ್ಕೆ ಜೊತೆಗೆ ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಗುತ್ತಿತ್ತು. ಜಂತರ್ ಮಂತರ್‌ನಲ್ಲಿ ಹೆಚ್ಚೆಂದರೆ ಸಾವಿರ ಜನರು ಪ್ರತಿಭಟಿಸಬಹುದು. ಆದರೆ ಬೃಹತ್ ಪ್ರತಿಭಟನೆಗಳಿಗೆ ಕರೆ ನೀಡಿದರೆ ಈ ಸಂಖ್ಯೆ ಮೀರಿ ಹೋಗಿ ಭದ್ರತಾ ಲೋಪ ಹಾಗೂ ಟ್ರಾಫಿಕ್ ಜಾಮ್ ಉಂಟಾಗುತ್ತಿತ್ತು.



