ಹೊಸದಿಗಂತ ವರದಿ ಬೆಳಗಾವಿ:
ಭಾರತೀಯ ಜನತಾ ಪಕ್ಷದ ಬೆಳಗಾವಿ ಗ್ರಾಮೀಣ ಮಂಡಲದ ವತಿಯಿಂದ ಆಯೋಜಿಸಲಾಗಿದ್ದ ಭವ್ಯ ತಿರಂಗಾ ಯಾತ್ರೆಯ ಅಂಗವಾಗಿ ಹಿಂಡಲಗಾ ಗ್ರಾಮದಲ್ಲಿ ಅದ್ದೂರಿಯಾಗಿ ತಿರಂಗಾ ರ್ಯಾಲಿ ಆಯೋಜಿಸಲಾಯಿತು.

ರ್ಯಾಲಿಯಲ್ಲಿ ಬಿಜೆಪಿ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಗ್ರಾಮದ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಕೈಯಲ್ಲಿ ರಾಷ್ಟ್ರಧ್ವಜ ಹಿಡಿದು “ಭಾರತ್ ಮಾತಾ ಕೀ ಜೈ” ಹಾಗೂ “ವಂದೇ ಮಾತರಂ” ಘೋಷಣೆಗಳನ್ನು ಮೊಳಗಿಸುತ್ತಾ ಸಾಗಿದ ರ್ಯಾಲಿಯಿಂದ ಇಡೀ ಹಿಂಡಲಗಾ ಗ್ರಾಮ ದೇಶಭಕ್ತಿಯ ವಾತಾವರಣದಿಂದ ಕಂಗೊಳಿಸಿತು.

ಈ ಸಂದರ್ಭದಲ್ಲಿ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ಬೆಳಗಾವಿ ಗ್ರಾಮೀಣ ಮಂಡಲದ ಅಧ್ಯಕ್ಷ ಯುವರಾಜ ಜಾಧವ, “ಭಾರತದಂತಹ ಪುಣ್ಯಭೂಮಿಯಲ್ಲಿ ಜನಿಸಿರುವುದೇ ನಮ್ಮೆಲ್ಲರ ಭಾಗ್ಯ. ತಿರಂಗಾ ಪ್ರತಿಯೊಬ್ಬ ಭಾರತೀಯನ ಹೆಮ್ಮೆ ಹಾಗೂ ಸ್ವಾಭಿಮಾನದ ಸಂಕೇತವಾಗಿದೆ. ತ್ರಿವರ್ಣ ಧ್ವಜವನ್ನು ಕೈಯಲ್ಲಿ ಹಿಡಿದಾಗ ದೇಶಾಭಿಮಾನ ಮತ್ತಷ್ಟು ಇಮ್ಮಡಿಯಾಗುತ್ತದೆ. ಭಾರತೀಯರಾದ ನಾವೆಲ್ಲರೂ ಇಂತಹ ಪವಿತ್ರ ಕಾರ್ಯಗಳಲ್ಲಿ ಭಾಗವಹಿಸುವುದು ನಮ್ಮ ಕರ್ತವ್ಯವಾಗಿದೆ,” ಎಂದು ಹೇಳಿದರು.
ದೇಶದ ಏಕತೆ, ಅಖಂಡತೆ ಹಾಗೂ ರಾಷ್ಟ್ರಭಕ್ತಿಯ ಸಂದೇಶ ಸಾರುವ ತಿರಂಗಾ ಯಾತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ ಎಲ್ಲಾ ಬಿಜೆಪಿ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ನಾಗರಿಕರಿಗೆ ಯುವರಾಜ ಜಾಧವ ಅವರು ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸಿದರು.



