ಹೊಸದಿಗಂತ ವರದಿ ಚಿತ್ರದುರ್ಗ:
ಕಾಲೇಜು ವಿದ್ಯಾರ್ಥಿಗಳಿಗೆ ರಾಷ್ಟ್ರಧ್ವಜ, ರಾಷ್ಟ್ರಗೀತೆಯ ಬಗ್ಗೆ ಅರಿವು ಮೂಡಿಸಲು ಉಪನ್ಯಾಸಕರಿಗೆ ರಾಷ್ಟ್ರಧ್ವಜದ ಮಾಹಿತಿ ಅಗತ್ಯವಾಗಿದೆ ಎಂದು ಭಾರತ ಸೇವಾದಳ ಜಿಲ್ಲಾ ಕೋಶಧ್ಯಕ್ಷ ಶಿವಣ್ಣನವರು ಅಭಿಪ್ರಾಯಪಟ್ಟರು.
ಚಿತ್ರದುರ್ಗ ನಗರದ ಭಾರತ ಸೇವಾದಳ ಭವನದಲ್ಲಿ ಪದವಿ ಪೂರ್ವ ಶಾಲಾ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನಡೆದ ಉಪನ್ಯಾಸಕರ ರಾಷ್ಟ್ರಧ್ವಜ ರಾಷ್ಟ್ರಗೀತೆ ಮಾಹಿತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಯುವಕರಲ್ಲಿ ದೇಶಭಕ್ತಿಯ ಭಾವನೆ ಕುಂಠಿತವಾಗಿದ್ದು, ಆಪತ್ತಿನ ಕಾಲದಲ್ಲಿ ಸೇವೆಯ ಸಹಾಯವನ್ನು ಮಾಡುವುದನ್ನು ಮರೆತಿದ್ದಾರೆ. ಅವರಿಗೆ ದೇಶಭಕ್ತಿ ಮೂಡಿಸೋದು ಅಗತ್ಯವಾಗಿದ್ದು, ರಾಷ್ಟ್ರಧ್ವಜ ಅದಕ್ಕೆ ಪೂರಕವಾಗಿದೆ ಎಂದು ತಿಳಿಸಿದರು.
ತಾಲೂಕು ಅಧ್ಯಕ್ಷ ಕಾಟಮಲ್ಲಪ್ಪನವರು ಮಾತನಾಡಿ, ಶಾಲಾ ಕಾಲೇಜುಗಳಲ್ಲಿ ಆಚರಿಸುವ ರಾಷ್ಟ್ರೀಯ ಹಬ್ಬಗಳು ವಿದ್ಯಾರ್ಥಿಗಳಲ್ಲಿ ದೇಶಪ್ರೇಮ ಮೂಡಿಸುವಂತಾಗಬೇಕು ಎಂದು ತಿಳಿಸಿದರು.
ವಲಯ ಸಂಘಟಕರಾದ ಎಂ.ಅಣ್ಣಯ್ಯ ಪ್ರಸ್ತಾವಿಕವಾಗಿ ಮಾತನಾಡಿ, ರಾಷ್ಟ್ರದ ಇತಿಹಾಸ ಧ್ವಜ ಸಂಹಿತೆ ಕಾಲೇಜುಗಳಲ್ಲಿ ನಡೆಸುವ ಧ್ವಜಾರೋಹಣ ವಿಧಿ ವಿಧಾನದ ಬಗ್ಗೆ ಮಾಹಿತಿ ನೀಡಿದರು. ರಾಷ್ಟ್ರಧ್ವಜವನ್ನು ಕಟ್ಟುವ ಬಗ್ಗೆ ಇಳಿಸುವ ಬಗ್ಗೆ ತರಬೇತಿ ನೀಡಿದರು.
ಇದನ್ನೂ ಓದಿ:
ಹಿರಿಯ ಕಾರ್ಯಕರ್ತರಾದ ಎನ್.ಕೆ ರಾಜಪ್ಪ, ಸರ್ವರನ್ನು ಸ್ವಾಗತಿಸಿ ವಂದಿಸಿದರು. ಕಾರ್ಯಕ್ರಮದಲ್ಲಿ ವಿವಿಧ ತಾಲೂಕುಗಳಿಂದ ಆಗಮಿಸಿದ ಪದವಿ ಪೂರ್ವ ಉಪನ್ಯಾಸಕರು ಭಾಗವಹಿಸಿದ್ದರು.



