ಮಂಗಳೂರು ಶೈಲಿಯ ಬಂಗುಡೆ ಪುಳಿಮುಂಚಿ ಎಂದರೆ ಖಾರ, ಹುಳಿ ಮತ್ತು ಮಸಾಲೆಯ ಅದ್ಭುತ ಸಂಯೋಜನೆ. ಬಿಸಿಬಿಸಿ ಕುಚಲಕ್ಕಿ ಅನ್ನದ ಜೊತೆ ಈ ಮೀನಿನ ಸಾರು ಸವಿದರೆ ಕರಾವಳಿ ಊಟದ ರುಚಿಯೇ ಬೇರೆ!
ಬೇಕಾಗುವ ಸಾಮಗ್ರಿಗಳು
ಬಂಗುಡೆ ಮೀನು – 4 ರಿಂದ 5
ಬ್ಯಾಡಗಿ ಮೆಣಸಿನಕಾಯಿ – 6
ಗುಂಟೂರು ಮೆಣಸಿನಕಾಯಿ – 4-5
ಧನಿಯಾ – 1 ಟೀಸ್ಪೂನ್
ಜೀರಿಗೆ – ½ ಟೀಸ್ಪೂನ್
ಮೆಂತೆ – ¼ ಟೀಸ್ಪೂನ್
ಹುಣಸೆಹಣ್ಣು – ರುಚಿಗೆ ತಕ್ಕಷ್ಟು
ಈರುಳ್ಳಿ – 1
ಬೆಳ್ಳುಳ್ಳಿ – 7-8 ಎಸಳು
ಅರಿಶಿನ – ½ ಟೀಸ್ಪೂನ್
ತೆಂಗಿನ ಎಣ್ಣೆ – 2 ಟೇಬಲ್‌ಸ್ಪೂನ್
ಉಪ್ಪು – ಅಗತ್ಯವಿರುವಷ್ಟು
ನೀರು – ಅಗತ್ಯವಿರುವಷ್ಟು
ಮಸಾಲೆ ತಯಾರಿಸುವುದು
ಮೊದಲು ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಒಣ ಮೆಣಸಿನಕಾಯಿ, ಧನಿಯಾ, ಜೀರಿಗೆ ಮತ್ತು ಮೆಂತೆಯನ್ನು ಕಡಿಮೆ ಉರಿಯಲ್ಲಿ ಹುರಿಯಿರಿ. ನಂತರ ಇದಕ್ಕೆ ಈರುಳ್ಳಿ, ಬೆಳ್ಳುಳ್ಳಿ, ಹುಣಸೆಹಣ್ಣು ಮತ್ತು ಅರಿಶಿನ ಸೇರಿಸಿ ಸ್ವಲ್ಪ ಹುರಿದುಕೊಳ್ಳಿ.
ಈ ಮಸಾಲೆ ತಣ್ಣಗಾದ ಬಳಿಕ ಸ್ವಲ್ಪ ನೀರು ಹಾಕಿ ನಯವಾದ, ಗಟ್ಟಿಯಾದ ಮಸಾಲೆ ಪೇಸ್ಟ್ ಆಗುವಂತೆ ರುಬ್ಬಿಕೊಳ್ಳಿ.
ಮಣ್ಣಿನ ಪಾತ್ರೆ ಅಥವಾ ದಪ್ಪ ತಳದ ಪಾತ್ರೆಗೆ ತೆಂಗಿನ ಎಣ್ಣೆ ಹಾಕಿ. ರುಬ್ಬಿದ ಮಸಾಲೆಯನ್ನು ಹಾಕಿ ಸ್ವಲ್ಪ ಹುರಿಯಿರಿ. ನಂತರ ಅಗತ್ಯವಿರುವಷ್ಟು ನೀರು ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಕುದಿಯಲು ಬಿಡಿ.
ಸಾರು ಕುದಿಯಲು ಆರಂಭಿಸಿದ ಬಳಿಕ ಸ್ವಚ್ಛಗೊಳಿಸಿದ ಬಂಗುಡೆ ಮೀನು ತುಂಡುಗಳನ್ನು ನಿಧಾನವಾಗಿ ಹಾಕಿ. ಪಾತ್ರೆಯನ್ನು ಚಮಚದಿಂದ ಕಲಸುವ ಬದಲು ನಿಧಾನವಾಗಿ ಅಲ್ಲಾಡಿಸಿ, ಮಸಾಲೆ ಮೀನುಗಳಿಗೆ ಚೆನ್ನಾಗಿ ಹೊಂದಿಕೊಳ್ಳುವಂತೆ ಮಾಡಿ.
ಮುಚ್ಚಳ ಮುಚ್ಚಿ ಮಧ್ಯಮ ಉರಿಯಲ್ಲಿ ಸುಮಾರು 8-10 ನಿಮಿಷ ಬೇಯಿಸಿ. ಮೀನು ಬೆಂದ ಬಳಿಕ ಒಲೆಯಿಂದ ಇಳಿಸಿ.



