August 14, 2026
Friday, August 14, 2026
spot_img

ಕಲಬುರಗಿಯ ‘ಬಿ’ ರೌಡಿಶೀಟರ್‌ ಒಂದು ವರ್ಷ ಗಡಿಪಾರು: ಮುರುಡೇಶ್ವರಕ್ಕೆ ಶಿಫ್ಟ್‌

ಹೊಸದಿಗಂತ ವರದಿ ಕಲಬುರಗಿ:

ನಗರದ ಫರಹತಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯ ‘ಬಿ’ ರೌಡಿಶೀಟರ್ ಗಜಾನನ ಅರುಣಕುಮಾರ ದೇಶಪಾಂಡೆ (37) ಎಂಬಾತನನ್ನು ಒಂದು ವರ್ಷದ ಅವಧಿಗೆ ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಗೆ ಗಡಿಪಾರು ಮಾಡಿ ಆದೇಶಿಸಲಾಗಿದೆ.

ರಿಯಲ್ ಎಸ್ಟೇಟ್ ಉದ್ಯಮ ನಡೆಸುತ್ತಿರುವ ಗಜಾನನ ದೇಶಪಾಂಡೆ ವಿರುದ್ಧ ಕಲಬುರಗಿ ನಗರ ಹಾಗೂ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಟ್ಟು ಏಳು ಪ್ರಕರಣಗಳು ದಾಖಲಾಗಿವೆ. 2013ರಿಂದ 2026ರವರೆಗೆ ಭಾರತೀಯ ದಂಡ ಸಂಹಿತೆ, ಭಾರತೀಯ ನ್ಯಾಯ ಸಂಹಿತೆ-2023 ಹಾಗೂ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ವಿವಿಧ ಕಲಂಗಳಡಿ ಪ್ರಕರಣಗಳು ದಾಖಲಾಗಿವೆ.

ಆರೋಪಿತನು ದರೋಡೆ, ಕೊಲೆ, ಕೊಲೆ ಯತ್ನ, ಮಾರಕಾಸ್ತ್ರಗಳಿಂದ ಗಲಭೆ, ಅಕ್ರಮ ಕೂಟ ರಚನೆ, ಸಾರ್ವಜನಿಕ ಸ್ಥಳಗಳಲ್ಲಿ ಮಾರಣಾಂತಿಕ ಹಲ್ಲೆ ಸೇರಿದಂತೆ ಹಲವು ಗಂಭೀರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಅಲ್ಲದೆ, ತನ್ನ ಚಟುವಟಿಕೆಗಳಿಂದ ಸಾರ್ವಜನಿಕ ಶಾಂತಿ ಮತ್ತು ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟುಮಾಡುತ್ತಿರುವುದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್.ಡಿ., ಐಪಿಎಸ್ ಅವರ ನಿರ್ದೇಶನದ ಮೇರೆಗೆ ಫರಹತಾಬಾದ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಹುಸೇನ್ ಭಾಷಾ ಅವರು ಕರ್ನಾಟಕ ಪೊಲೀಸ್ ಕಾಯ್ದೆ-1963ರ ಕಲಂ 55(ಎ) ಮತ್ತು 55(ಬಿ) ಅಡಿಯಲ್ಲಿ ಗಡಿಪಾರಿಗೆ ಪ್ರಸ್ತಾವನೆ ಸಲ್ಲಿಸಿದ್ದರು.

ಈ ಹಿನ್ನೆಲೆಯಲ್ಲಿ ಉಪ ಪೊಲೀಸ್ ಆಯುಕ್ತರು (ಕಾನೂನು ಮತ್ತು ಸುವ್ಯವಸ್ಥೆ) ಹಾಗೂ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿ ಶಾಲೂ ಐಪಿಎಸ್ ಅವರು ವಿಚಾರಣೆ ನಡೆಸಿ, ಗಜಾನನ ದೇಶಪಾಂಡೆಯನ್ನು 2026ರ ಆಗಸ್ಟ್ 3ರಿಂದ 2027ರ ಆಗಸ್ಟ್ 2ರವರೆಗೆ ಒಂದು ವರ್ಷದ ಅವಧಿಗೆ ಮುರುಡೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಗೆ ಗಡಿಪಾರು ಮಾಡಿ ಆದೇಶ ಹೊರಡಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !