August 14, 2026
Friday, August 14, 2026
spot_img

ವರ್ಲ್ಡ್ ಪ್ಯಾಡೆಲ್ ಲೀಗ್: ಲಯನ್ಸ್ ಹಾಗೂ ಟೈಗರ್ಸ್ ತಂಡಗಳಿಗೆ ರೋಚಕ ಜಯ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಅಕ್ಷೆಲ್ ವರ್ಲ್ಡ್ ಪೆಡೆಲ್ ಲೀಗ್‌ನ (Akcel World Padel League) ಸ್ಪೈಸ್‌ಜೆಟ್ ಪ್ರಾಯೋಜಿತ ಎರಡನೇ ದಿನದ ಆಟದಲ್ಲಿ ರೋಚಕ ಪಂದ್ಯಗಳು ಮುಂದುವರಿದಿದ್ದು, ಗೇಮ್ ಚೇಂಜರ್ಸ್ ಲಯನ್ಸ್ ಮತ್ತು ಹಬ್‌ಟೌನ್ ಪನೋರಮಾ ಪ್ಯಾಂಥರ್ಸ್ ನಡುವೆ ತೀವ್ರ ಹೋರಾಟದ ಪಂದ್ಯ ನಡೆಯಿತು. ಒತ್ತಡವನ್ನು ಸಮರ್ಥವಾಗಿ ನಿಭಾಯಿಸಿದ ಲಯನ್ಸ್ ತಂಡವು 14-12 ಅಂತರದಿಂದ ಪ್ಯಾಂಥರ್ಸ್ ವಿರುದ್ಧ ರೋಚಕ ಜಯ ಸಾಧಿಸಿತು. ದಿನದ ಮತ್ತೊಂದು ಪಂದ್ಯದಲ್ಲಿ, ಆರಂಭಿಕ ಹಿನ್ನಡೆಯಿಂದ (1-6) ಭರ್ಜರಿಯಾಗಿ ಚೇತರಿಸಿಕೊಂಡ ಖಾನ್ ಟೈಗರ್ಸ್ ತಂಡವು ವೇದಾಂತ ಲಿಯೋಪರ್ಡ್ಸ್ ವಿರುದ್ಧ 14-12 ಅಂತರದಿಂದ ರೋಚಕ ಗೆಲುವು ದಾಖಲಿಸಿ, ಟೂರ್ನಿಯಲ್ಲಿ ತಮ್ಮ ಮೊದಲ ಜಯವನ್ನು ಪಡೆದುಕೊಂಡಿತು.

ಗೇಮ್ ಚೇಂಜರ್ಸ್ ಲಯನ್ಸ್ ವಿರುದ್ಧ ಹಬ್‌ಟೌನ್ ಪನೋರಮಾ ಪ್ಯಾಂಥರ್ಸ್

ಮೊದಲ ಸೆಟ್‌ನಲ್ಲಿ ಲಯನ್ಸ್ ತಂಡದ ಪರ ವಿಶ್ವ ನಂ. 3 ಬೆವಾ ಗೊನ್ಜಾಲೆಜ್ ಮತ್ತು ವಿಶ್ವ ನಂ. 4 ಪೌಲಾ ಜೋಸೆಮರಿಯಾ ಅವರು, ಪ್ಯಾಂಥರ್ಸ್ ತಂಡದ ಮಾರ್ತಾ ಕಪಾರೋಸ್ ಮತ್ತು ಮಾರ್ತಾ ಬರೇರಾ ಅವರನ್ನು ಎದುರಿಸಿದರು. ಉಭಯ ಜೋಡಿಗಳ ನಡುವಿನ ಜಿದ್ದಾಜಿದ್ದಿನ ಹೋರಾಟದ ಬಳಿಕ ಲಯನ್ಸ್ ತಂಡವು 6-2 ಅಂತರದಿಂದ ಮೊದಲ ಸೆಟ್ ಅನ್ನು ತನ್ನದಾಗಿಸಿಕೊಂಡಿತು.

ಎರಡನೇ ಸೆಟ್‌ನಲ್ಲಿ ಪ್ಯಾಂಥರ್ಸ್ ತಂಡದ ಜುವಾನ್ ಟೆಲ್ಲೊ ಮತ್ತು ಎಡ್ವರ್ಡೊ ಅಲೋನ್ಸೊ ಜೋಡಿಯು, ಗೊನ್ಜಾಲೊ ಅಲ್ಫೊನ್ಸೊ ಮತ್ತು ಪೆಡೆಲ್ ದಿಗ್ಗಜ ಸಾನೊ ಗುಟೆರೆಜ್ ಅವರನ್ನು ಎದುರಿಸಿ 6-2 ಅಂತರದಿಂದ ಗೆಲುವು ಸಾಧಿಸುವ ಮೂಲಕ ಪಂದ್ಯವನ್ನು ಸಮಬಲಗೊಳಿಸಿದರು.

ಪಂದ್ಯವು ರೋಚಕ ಹಂತ ತಲುಪಿದಾಗ, ಅಂತಿಮ ಸೆಟ್‌ನಲ್ಲಿ ಪ್ಯಾಂಥರ್ಸ್‌ನ ಎನ್ರಿಕೆ ಗೊಯೆನಾಗಾ ಮತ್ತು ರಾಮಾ ವೆನ್ಜುಯೆಲಾ 4-1 ರ ಮುನ್ನಡೆ ಸಾಧಿಸಿ ಮೇಲುಕೈ ಸಾಧಿಸಿದ್ದರು. ಆದರೆ, ಫೆಡೆರಿಕೋ ಮೌರಿನೊ ಮತ್ತು ಟಿಯೊಡೊರೊ ಜಪಾಟಾ ದಿಟ್ಟ ಹೋರಾಟ ನಡೆಸಿ ನಿರ್ಣಾಯಕ ಸೆಟ್ ಅನ್ನು 6-4 ಅಂತರದಿಂದ ಗೆಲ್ಲುವ ಮೂಲಕ ಲಯನ್ಸ್ ತಂಡಕ್ಕೆ ರೋಚಕ ಜಯ ತಂದುಕೊಟ್ಟರು.

ಮಾರ್ತಾ ಒರ್ಟೆಗಾ ಮತ್ತು ವೆರೋನಿಕಾ ವಿರ್ಸೆಡಾ ಅವರು ರಕೆಲ್ ಯುಜೆನಿಯೊ ಮತ್ತು ಮಾರ್ಟಿನಾ ಫಾಸಿಯೊ ವಿರುದ್ಧ ಮೊದಲ ಸೆಟ್ ಅನ್ನು 6-1 ಅಂತರದಿಂದ ಗೆದ್ದು ಲಿಯೋಪರ್ಡ್ಸ್ ತಂಡಕ್ಕೆ ಬಲವಾದ ಆರಂಭ ಒದಗಿಸಿದರು. ಆದರೆ ಎರಡನೇ ಸೆಟ್‌ನಲ್ಲಿ ಸಂಪೂರ್ಣ ಪ್ರಾಬಲ್ಯ ಮೆರೆದ ಟೈಗರ್ಸ್ ಪರ ಜಾವಿ ಗಾರ್ಸಿಯಾ ಮತ್ತು ಜೊಫ್ರೆ ಜೋಡಿಯು, ನುನೊ ಡೀಯುಸ್ ಮತ್ತು ಮಿಗುಯೆಲ್ ಡೀಯುಸ್ ವಿರುದ್ಧ 6-0 ಅಂತರದ ಭರ್ಜರಿ ಜಯ ಸಾಧಿಸಿ ಪಂದ್ಯವನ್ನು ಸಮಬಲಗೊಳಿಸಿದರು.

ಗೆಲುವು ಯಾರಿಗೆ ಒಲಿಯಲಿದೆ ಎಂಬ ಕುತೂಹಲ ಮೂಡಿದ್ದ ನಿರ್ಣಾಯಕ ಸೆಟ್‌ನಲ್ಲಿ, ಅರಿಸ್ ಪಟಿನಿಯೊಟಿಸ್ ಮತ್ತು ಲುಕಾಸ್ ಕ್ಯಾಂಪಾಗ್ನೊಲೊ ಅವರು ಫ್ರಾನ್ಸಿಸ್ಕೊ ಗ್ವೆರೆರೊ ಮತ್ತು ಜಾವಿ ರೂಯಿಜ್ ವಿರುದ್ಧ ಟೈ-ಬ್ರೇಕ್‌ನಲ್ಲಿ 7-6 ಅಂತರದಿಂದ ಜಯಗಳಿಸಿ, ಅತ್ಯುತ್ತಮ ಪುನರಾಗಮನದೊಂದಿಗೆ ಟೈಗರ್ಸ್‌ಗೆ 14-12 ರ ಸ್ಮರಣೀಯ ಗೆಲುವು ತಂದುಕೊಟ್ಟರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !