November 26, 2026
Thursday, November 26, 2026
spot_img

ಹೆಚ್ಚಿನ ಬಡ್ಡಿ ಆಮಿಷ: 133 ರೂ. ಕೋಟಿ ವಂಚನೆ, ತಾಯಿ-ಮಗನ ವಿರುದ್ಧ ಕೇಸ್

ಹೊಸದಿಗಂತ ವರದಿ ಬೆಳಗಾವಿ :

ಬೆಳಗಾವಿ ಜಿಲ್ಲೆಯಲ್ಲಿ ಹೆಚ್ಚಿನ ಬಡ್ಡಿ ನೀಡುವ ಆಮಿಷವೊಡ್ಡಿ ಸಾವಿರಾರು ಹೂಡಿಕೆದಾರರಿಗೆ ಸುಮಾರು 133 ಕೋಟಿ ರೂ. ವಂಚಿಸಿರುವ ತಾಯಿ-ಮಗನ ಪ್ರಕರಣ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ.

ನಿಪ್ಪಾಣಿಯ ನಂದಾ ಪಾಟೀಲ್ ಹಾಗೂ ಪುತ್ರ ಪ್ರಸಾದ್ ಪಾಟೀಲ್ ಪ್ರಮುಖ ಆರೋಪಿಗಳಾಗಿದ್ದು, ಮಹಾರಾಷ್ಟ್ರ ಮತ್ತು ಕರ್ನಾಟಕದ ಗಡಿಭಾಗದ ಸಾವಿರಾರು ಜನರು ಇವರ ಆಮಿಷಕ್ಕೆ ಬಲಿಯಾಗಿದ್ದಾರೆ.

ನಿಪ್ಪಾಣಿಯಲ್ಲಿ ಕಚೇರಿ ತೆರೆದಿದ್ದ ಆರೋಪಿಗಳು ನಂದಾ ಟ್ರೇಡರ್ಸ್ ಹಾಗೂ ಲೂನಾರ್ಸ್ ಎಜುಕೇಷನ್ ಆ್ಯಂಡ್ ಟ್ರೈನಿಂಗ್ ಆ್ಯಂಡ್ ಸೆಲ್ಯೂಷನ್ ಪ್ರೈವೇಟ್ ಲಿಮಿಟೆಡ್ ಹೆಸರಿನಲ್ಲಿ ಹೂಡಿಕೆ ಸಂಗ್ರಹಿಸುತ್ತಿದ್ದರು.

ಒಂದು ಲಕ್ಷ ರೂ. ಹೂಡಿಕೆ ಮಾಡಿದರೆ ಮಾಸಿಕ ಶೇ.3ರಷ್ಟು ಬಡ್ಡಿ ನೀಡುವುದಾಗಿ ಭರವಸೆ ನೀಡಿದ್ದರು. ಆರಂಭದಲ್ಲಿ ನಂಬಿಕೆ ಗಳಿಸಿದ್ದ ಆರೋಪಿಗಳು ಬಳಿಕ ಹೂಡಿಕೆದಾರರು ಅಸಲು ಹಣ ವಾಪಸ್ ಕೇಳಿದಾಗ ಬೆದರಿಕೆ ಹಾಕುತ್ತಿದ್ದರು ಎನ್ನಲಾಗಿದೆ.

ಇದನ್ನೂ ಓದಿ:

ಹೂಡಿಕೆದಾರರ ಹಣದಲ್ಲೇ ಜಮೀನು, ಆಸ್ತಿ ಖರೀದಿಸಿ ಐಷಾರಾಮಿ ಜೀವನ ನಡೆಸುತ್ತಿದ್ದ ಆರೋಪಿಗಳು ಬೆಳಗಾವಿ, ಪುಣೆ, ನಾಸಿಕ್ ಹಾಗೂ ಮುಂಬೈನಲ್ಲಿ ಆಸ್ತಿ ಹೊಂದಿದ್ದಾರೆ ಎನ್ನಲಾಗಿದೆ. ವಂಚನೆಗೊಳಗಾದವರಲ್ಲಿ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ನಂದಾ, ಪ್ರಸಾದ್ ಹಾಗೂ ಸೌರಬ್ ಮಾಳಿ ಸೇರಿದಂತೆ 12 ಜನರ ವಿರುದ್ಧ ನಿಪ್ಪಾಣಿಯ ಬಸವೇಶ್ವರ ಪೊಲೀಸ್ ಚೌಕಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿಗಳು ನಾಪತ್ತೆಯಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Must Read

Skip to toolbar