August 14, 2026
Friday, August 14, 2026
spot_img

ರಾಕಸಕೊಪ್ಪ ಜಲಾಶಯಕ್ಕೆ ಮಹಾನಗರ ಪಾಲಿಕೆಯಿಂದ ಗಂಗಾಪೂಜೆ: ಎಪ್ರಿಲ್ ತಿಂಗಳವರೆಗೆ ಕುಡಿಯುವ ನೀರಿಗೆ ತೊಂದರೆ ಇಲ್ಲ ಎಂದ ಮೇಯರ್

ಹೊಸದಿಗಂತ ವರದಿ ಬೆಳಗಾವಿ:

ಇಲ್ಲಿನ ಮಹಾನಗರ ಪಾಲಿಕೆಯ ನೇತೃತ್ವದಲ್ಲಿ ರಾಕಸಕೊಪ್ಪ ಜಲಾಶಯಕ್ಕೆ ಮೇಯರ್ ಪ್ರೀತಿ ಕಾಮಕರ, ಉಪಮೇಯರ್ ಹಣಮಂತ ಕೊಂಗಾಲಿ ಪಾಲಿಕೆಯ ಆಯುಕ್ತ ಎಂ. ಕಾರ್ತಿಕ್ ಸೇರಿದಂತೆ ಪಾಲಿಕೆಯ ಅಧಿಕಾರಿಗಳು ಗಂಗಾಪೂಜೆ ಸಲ್ಲಿಸಿದರು.

1958 ರಲ್ಲಿ ಬೆಳಗಾವಿ ಪುರಸಭೆಯ ಅಂದಿನ ಸದಸ್ಯರು ಬ್ಯಾಂಕ್‌ನಿಂದ ₹58 ಲಕ್ಷ ಸಾಲ ಪಡೆದು ರಾಕಸಕೊಪ್ಪ ಜಲಾಶಯವನ್ನು ನಿರ್ಮಿಸಿದ್ದರು. 1965 ರಲ್ಲಿ ರಾಕಸಕೊಪ್ಪ ಜಲಾಶಯದ ಕಾಮಗಾರಿ ಪೂರ್ಣಗೊಂಡು ಬೆಳಗಾವಿ ನಗರ ಜನತೆಗೆ ಕುಡಿಯುವ ನೀರು ಪೂರೈಕೆಗೆ ಸಿದ್ದವಾಯಿತು.

ಅಂದಿನಿಂದ ಇಂದಿನವರೆಗೂ ಈ ಜಲಾಶಯವು ಬೆಳಗಾವಿ ನಗರದ ಜನತೆಗೆ ಕುಡಿಯುವ ನೀರಿನ ಪ್ರಮುಖ ಜೀವನಾಡಿಯಾಗಿ ಕಾರ್ಯನಿರ್ವಹಿಸುತ್ತಿದೆ. ಪ್ರತಿ ವರ್ಷದಂತೆ ಈ ಬಾರಿಯೂ ಪಾಲಿಕೆಯ ವತಿಯಿಂದ ಜಲಾಶಯಕ್ಕೆ ಗಂಗಾ ಪೂಜೆ ನೇರವೆರಿಸಲಾಯಿತು.

ಇದೇ ವೇಳೆ ಮಾದ್ಯಮಗಳೊಂದಿಗೆ ಮಾತನಾಡಿದ ಮೇಯರ್ ಪ್ರೀತಿ ಕಾಮಕರ, “ಮೇ, ಎಪ್ರಿಲ್ ತಿಂಗಳವರೆಗೆ ಬೆಳಗಾವಿ ಜನತೆಗೆ ಕುಡಿಯುವ ನೀರಿನ ಯಾವುದೇ ತೊಂದರೆ ಉಂಟಾಗುವುದಿಲ್ಲ. ಸಾರ್ವಜನಿಕರು ನೀರನ್ನು ಮಿತವಾಗಿ ಹಾಗೂ ಜವಾಬ್ದಾರಿಯಿಂದ ಬಳಸಬೇಕು” ಎಂದು ಮನವಿ ಮಾಡಿದರು.

ಉಪಮೇಯರ್ ಹಣಮಂತ ಕೊಂಗಾಲಿ ಮಾತನಾಡಿ, ಪ್ರತಿದಿನ ಸುಮಾರು 40 ಎಂಎಲ್‌ಡಿ ನೀರನ್ನು ರಾಕಸಕೊಪ್ಪ ಹಾಗೂ ಹಿಡಕಲ್ ಜಲಾಶಯಗಳಿಂದ 60 ಎಂಎಲ್‌ಡಿ ರಷ್ಟು ನೀರು ಬೆಳಗಾವಿ ನಗರಕ್ಕೆ ಪೂರೈಸಲಾಗುತ್ತಿದೆ. ಮುಂದಿನ ಮಾರ್ಚ್–ಏಪ್ರಿಲ್‌ವರೆಗೂ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಭರವಸೆ ನೀಡಿದರು.

ಬಿಳಿಕ ಮಹಾನಗರ ಪಾಲಿಕೆ ಆಯುಕ್ತ ಎಂ. ಕಾರ್ತಿಕ್ ಮಾತನಾಡಿ, ರಾಕಸಕೊಪ್ಪ ಜಲಾಶಯದಿಂದ ಪ್ರಸ್ತುತ ಶೇ.50 ರಷ್ಟು ನೀರನ್ನು ಬಳಸಿಕೊಳ್ಳಲಾಗುತ್ತಿದೆ. ಜಲಾಶಯವನ್ನು ಇನ್ನಷ್ಟು ಅಭಿವೃದ್ಧಿಪಡಿಸುವ ಕುರಿತು ಪಾಲಿಕೆ ಮಟ್ಟದಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಒಟ್ಟು 58 ವಾರ್ಡ್‌ಗಳಿದ್ದು, ಆಯಾ ಪ್ರದೇಶಗಳ ಜನತೆಗೆ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ನಗರದಾದ್ಯಂತ ಸುಮಾರು 80 ಸಾವಿರ ಕುಡಿಯುವ ನೀರಿನ ಸಂಪರ್ಕಗಳನ್ನು ನೀಡಲಾಗಿದೆ ಎಂದು ಹೇಳಿದರು.

ಬೆಳಗಾವಿ ನಗರಕ್ಕೆ ಕುಡಿಯುವ ನೀರಿನ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ಜಲಾಶಯಗಳ ಸಂರಕ್ಷಣೆ ಹಾಗೂ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಹೇಳಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !