October 12, 2026
Monday, October 12, 2026
spot_img

ದೇಶ ವಿಭಜನೆಗೆ ಕಾಂಗ್ರೆಸ್ಸೇ ಕಾರಣ, ಅಂದು ಮೋದಿ ಪ್ರಧಾನಿಯಾಗಿದ್ದರೆ ಭಾರತ ಸುರಕ್ಷಿತವಾಗಿರುತ್ತಿತ್ತು: ಯೋಗಿ ಆದಿತ್ಯನಾಥ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಭಾರತದ ವಿಭಜನೆ ಮತ್ತು ಅದರ ನಂತರ ನಡೆದ ಭೀಕರ ಹಿಂಸಾಚಾರಕ್ಕೆ ಕಾಂಗ್ರೆಸ್ ಪಕ್ಷವೇ ನೇರ ಹೊಣೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗಂಭೀರ ಆರೋಪ ಮಾಡಿದ್ದಾರೆ. ಸ್ವಾತಂತ್ರ್ಯದ ಸಮಯದಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅಥವಾ ಪ್ರಧಾನಿ ನರೇಂದ್ರ ಮೋದಿ ಅವರಂತಹ ನಾಯಕರು ದೇಶವನ್ನು ಮುನ್ನಡೆಸಿದ್ದರೆ ಭಾರತದ ಇತಿಹಾಸವೇ ಬೇರೆಯಾಗಿರುತ್ತಿತ್ತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಲಕ್ನೋದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ವಿಭಜನೆಯ ಭೀಕರತೆಯ ಸ್ಮರಣ ದಿನ’ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಯೋಗಿ, ಕಾಂಗ್ರೆಸ್ ಪಕ್ಷವು ದೇಶದ ಹಿತಾಸಕ್ತಿಗಿಂತ ರಾಜಕೀಯ ಅಧಿಕಾರಕ್ಕೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ದೇಶಕ್ಕೆ ದ್ರೋಹ ಬಗೆದಿದೆ. ಆ ವಿಭಜನೆಯ ದುಷ್ಪರಿಣಾಮಗಳನ್ನು ಭಾರತ ಇಂದು ಕೂಡ ಭಯೋತ್ಪಾದನೆ, ನಕ್ಸಲಿಸಂ ಮತ್ತು ಉಗ್ರಗಾಮಿತ್ವದ ರೂಪದಲ್ಲಿ ಅನುಭವಿಸುತ್ತಿದೆ ಎಂದು ಹೇಳಿದರು.

ಅಂದು ಮೋದಿ ಇದ್ದಿದ್ದರೆ ವಿಭಜನೆ ಆಗ್ತಿರಲಿಲ್ಲ

ಸ್ವಾತಂತ್ರ್ಯದ ಸಮಯದಲ್ಲಿ ನರೇಂದ್ರ ಮೋದಿ ಅವರು ಭಾರತದ ಪ್ರಧಾನಿಯಾಗಿದ್ದರೆ, ದೇಶಕ್ಕೆ ಕಿಂಚಿತ್ತೂ ಹಾನಿ ಮಾಡಲು ಯಾರಿಂದಲೂ ಸಾಧ್ಯವಾಗುತ್ತಿರಲಿಲ್ಲ ಎಂದು ಅವರು ಹೇಳಿದರು. ಇದೇ ವೇಳೆ ಸರ್ದಾರ್ ಪಟೇಲ್ ಅವರನ್ನು ಸ್ಮರಿಸಿದ ಯೋಗಿ, ಅಂದು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರಂತಹ ಮಹಾನ್ ನಾಯಕ ಪ್ರಧಾನಿಯಾಗಿದ್ದರೂ ಭಾರತ ತುಂಡಾಗುತ್ತಿರಲಿಲ್ಲ. ಅಂದಿನ ಕಾಂಗ್ರೆಸ್ ಸದಸ್ಯರ ಹೇಡಿತನಕ್ಕೆ ಇಡೀ ದೇಶವೇ ಭಾರಿ ಬೆಲೆ ತೆರಬೇಕಾಯಿತು ಎಂದು ವಾಗ್ದಾಳಿ ನಡೆಸಿದರು.

ಹಿಂದೂ ಹಳ್ಳಿಗಳನ್ನು ಬಲವಂತವಾಗಿ ಪಾಕಿಸ್ತಾನಕ್ಕೆ ನೀಡಲಾಯಿತು

ಹಿಂದೂಗಳು ಹೆಚ್ಚಾಗಿದ್ದ ಸಿಂಧ್, ಪಂಜಾಬ್ ಮತ್ತು ಬಂಗಾಳದಂತಹ ಪ್ರದೇಶಗಳನ್ನು ಪಾಕಿಸ್ತಾನಕ್ಕೆ ಹಸ್ತಾಂತರಿಸಲಾಯಿತು ಎಂದು ಆದಿತ್ಯನಾಥ್ ಆರೋಪಿಸಿದರು. ಬಂಗಾಳವು ಬಂಗಾಳಿಗಳ ಪ್ರಾಬಲ್ಯದ ಪ್ರದೇಶವಾಗಿತ್ತು. ಅಲ್ಲಿನ ಎಲ್ಲಾ ಹಿಂದೂ ಹಳ್ಳಿಗಳನ್ನು ಬಲವಂತವಾಗಿ ಬಾಂಗ್ಲಾದೇಶಕ್ಕೆ ನೀಡಲಾಯಿತು. ದೇಶದ ಜನ ಯಾರನ್ನು ನಂಬಿದ್ದರೋ, ಆ ಕಾಂಗ್ರೆಸ್ ಅಧಿಕಾರದ ಆಸೆಗಾಗಿ ಈ ನಾಚಿಕೆಗೇಡಿನ ಕೆಲಸ ಮಾಡಿತು. ಜನರ ನಂಬಿಕೆಗೆ ದ್ರೋಹ ಮಾಡಿದೆ ಎಂದರು.

ಇದನ್ನೂ ಓದಿ:

ಬಾಂಗ್ಲಾದೇಶದಲ್ಲಿ ಇತ್ತೀಚೆಗೆ ಹಿಂದೂಗಳ ಮೇಲೆ ನಡೆದ ದಾಳಿಗಳ ಬಗ್ಗೆ ಕಾಂಗ್ರೆಸ್ ಮೌನ ವಹಿಸಿರುವುದನ್ನು ಮುಖ್ಯಮಂತ್ರಿಗಳು ತೀವ್ರವಾಗಿ ಖಂಡಿಸಿದರು. ಕೇವಲ ತಮ್ಮ ವೋಟ್ ಬ್ಯಾಂಕ್ ಕಳೆದುಕೊಳ್ಳುವ ಭೀತಿಯಿಂದ ಕಾಂಗ್ರೆಸ್ ಈ ಬಗ್ಗೆ ತುಟಿಬಿಚ್ಚುತ್ತಿಲ್ಲ ಎಂದು ಆರೋಪಿಸಿದರು. ಬಾಂಗ್ಲಾದೇಶದ ಘಟನೆಗಳ ಬಗ್ಗೆ ಪ್ರತಿಕ್ರಿಯಿಸಿದರೆ ಇಲ್ಲಿನ ವೋಟ್ ಬ್ಯಾಂಕ್ ಕೈತಪ್ಪಿ ಹೋಗಬಹುದು ಎಂಬ ಭಯ ಅವರಿಗಿದೆ. ಅವರಿಗೆ ದಲಿತ ಹಿಂದೂಗಳ ಕೊಲೆ ಮುಖ್ಯವಲ್ಲ, ತಮ್ಮ ವೋಟ್ ಬ್ಯಾಂಕ್ ಮಾತ್ರ ಮುಖ್ಯ ಎಂದು ಕಿಡಿಕಾರಿದರು.

ದೇಶದ ಎಲ್ಲಾ ಪ್ರಮುಖ ಸಂಸ್ಥೆಗಳಿಗೆ ಕಾಂಗ್ರೆಸ್ ಕೇವಲ ಒಂದು ರಾಜಕೀಯ ಕುಟುಂಬದ ಹೆಸರನ್ನು ಇಟ್ಟಿದೆ ಎಂದು ಅವರು ಟೀಕಿಸಿದರು.

Must Read