ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶಾದ್ಯಂತ 80ನೇ ಸ್ವಾತಂತ್ರ್ಯ ದಿನಾಚರಣೆಯ ಸಡಗರ ಮನೆಮಾಡಿರುವ ಬೆನ್ನಲ್ಲೇ, ಭಾರತೀಯ ರಕ್ಷಣಾ ಪಡೆಗಳು ಹಾಗೂ ಸಶಸ್ತ್ರ ಪೊಲೀಸ್ ಪಡೆಗಳ ವೀರ ಸಿಬ್ಬಂದಿಯ ಅಪ್ರತಿಮ ಸಾಹಸವನ್ನು ಗೌರವಿಸಲು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು 78 ಶೌರ್ಯ ಪ್ರಶಸ್ತಿಗಳನ್ನು ಘೋಷಿಸಿದ್ದಾರೆ. ಈ ಪೈಕಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ 13 ವೀರ ಯೋಧರಿಗೆ ಮರಣೋತ್ತರ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ.
ಪ್ರಶಸ್ತಿಗಳ ವಿವರ
ಪ್ರೆಸ್ ಇನ್ಫರ್ಮೇಷನ್ ಬ್ಯೂರೋ (PIB) ಬಿಡುಗಡೆ ಮಾಡಿರುವ ಪ್ರಕಟಣೆಯ ಪ್ರಕಾರ, ಈ ಬಾರಿ ಒಟ್ಟು 9 ಕೀರ್ತಿ ಚಕ್ರ ಹಾಗೂ 19 ಶೌರ್ಯ ಚಕ್ರ ಪ್ರಶಸ್ತಿಗಳನ್ನು ಘೋಷಿಸಲಾಗಿದೆ. ಪ್ರಕಟಿಸಲಾದ 9 ಕೀರ್ತಿ ಚಕ್ರಗಳಲ್ಲಿ 7 ಪ್ರಶಸ್ತಿಗಳನ್ನು ವೀರ ಯೋಧರಿಗೆ ಮರಣೋತ್ತರವಾಗಿ ನೀಡಲಾಗುತ್ತಿದೆ. ಒಟ್ಟು 19 ಶೌರ್ಯ ಚಕ್ರಗಳ ಪೈಕಿ ಒಂದು ಪ್ರಶಸ್ತಿಯನ್ನು ಮರಣೋತ್ತರವಾಗಿ ನೀಡಲಾಗಿದೆ. ಇದರೊಂದಿಗೆ ಒಂದು ‘ಬಾರ್ ಟು ಶೌರ್ಯ ಚಕ್ರ’, 5 ‘ಬಾರ್ ಟು ಸೇನಾ ಪದಕ’, 5 ಮರಣೋತ್ತರ ಒಳಗೊಂಡಂತೆ 36 ‘ಸೇನಾ ಪದಕ’, 3 ‘ನವಸೇನಾ ಪದಕ’ ಮತ್ತು 5 ‘ವಾಯುಸೇನಾ ಪದಕ’ ಪ್ರಶಸ್ತಿಗಳನ್ನು ರಾಷ್ಟ್ರಪತಿಗಳು ಅನುಮೋದಿಸಿದ್ದಾರೆ.
ಇದನ್ನೂ ಓದಿ:
ವಿದ್ಯಾರ್ಥಿಗಳೇ ದೇಶದ ಶಿಲ್ಪಿಗಳು
ಸ್ವಾತಂತ್ರ್ಯ ದಿನದ ಮುನ್ನಾದಿನ ದೇಶವನ್ನುದ್ದೇಶಿಸಿ ಮಾತನಾಡಿದ ರಾಷ್ಟ್ರಪತಿಗಳು, ವಿದ್ಯಾರ್ಥಿಗಳೇ ಭಾರತದ ಭವಿಷ್ಯದ ಶಿಲ್ಪಿಗಳು ಎಂದು ಬಣ್ಣಿಸಿದರು. ಇತ್ತೀಚಿನ ದಿನಗಳಲ್ಲಿ ದೇಶಾದ್ಯಂತ ನಡೆದ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಪರೀಕ್ಷಾ ಅಕ್ರಮಗಳ ವಿರುದ್ಧದ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಮಾತನಾಡಿದ ಅವರು, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಕ್ರಮಗಳನ್ನು ಸಂಪೂರ್ಣವಾಗಿ ತಡೆಯಲು ಸರ್ಕಾರ ಕಟ್ಟುನಿಟ್ಟಿನ ಸುಧಾರಣಾ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಭರವಸೆ ನೀಡಿದರು. ಪರೀಕ್ಷಾ ವ್ಯವಸ್ಥೆಯನ್ನು ಯುವಜನರಿಗೆ ಹೆಚ್ಚು ಪಾರದರ್ಶಕ, ಸುರಕ್ಷಿತ ಮತ್ತು ನಂಬಿಕಸ್ಥವನ್ನಾಗಿ ಮಾಡುವುದು ಸರ್ಕಾರದ ಮುಖ್ಯ ಗುರಿಯಾಗಿದೆ ಎಂದು ಮುರ್ಮು ಸ್ಪಷ್ಟಪಡಿಸಿದರು.



