August 14, 2026
Friday, August 14, 2026
spot_img

ಕಾಂಗ್ರೆಸ್‌ನಲ್ಲಿ ಈಗ ದುಃಖದ ವಾತಾವರಣ: ರಾಹುಲ್ ಪ್ರಧಾನಿಯಾಗಿಲ್ಲ, ಶಾಸಕರಿಗೆ ಸಚಿವ ಸ್ಥಾನ ಸಿಗುತ್ತಿಲ್ಲ; ಗೋವಿಂದ ಕಾರಜೋಳ

ಹೊಸದಿಗಂತ ವರದಿ ಚಿತ್ರದುರ್ಗ:

ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ದುಃಖದ ವಾತಾವರಣವಾಗಿದೆ ಎಂದು ಬಿಜೆಪಿ ಸಂಸದ ಗೋವಿಂದ ಎಂ. ಕಾರಜೋಳ ವ್ಯಂಗ್ಯವಾಡಿದರು. ಕೇಂದ್ರ ನಾಯಕರು ರಾಹುಲ್ ಗಾಂಧಿ ಪ್ರಧಾನಿಯಾಗಲಿಲ್ಲ ಎಂದು ಬೇಸರದಲ್ಲಿದ್ದರೆ, ರಾಜ್ಯದ ಶಾಸಕರು ಸಚಿವ ಸ್ಥಾನ ಸಿಗಲಿಲ್ಲ ಎಂದು ಅಸಮಾಧಾನಗೊಂಡಿದ್ದಾರೆ ಎಂದು ಟೀಕಿಸಿದರು.

ಚಿತ್ರದುರ್ಗದ ತಮ್ಮ ನಿವಾಸದಲ್ಲಿ ಶುಕ್ರವಾರ ‘ಹರ್ ಘರ್ ತಿರಂಗಾ’ ಅಭಿಯಾನದ ಅಂಗವಾಗಿ ರಾಷ್ಟ್ರಧ್ವಜ ಹಾರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷ ಮೂರು ತಿಂಗಳಾದರೂ ಆಡಳಿತದತ್ತ ಗಮನ ಹರಿಸುತ್ತಿಲ್ಲ. ದೆಹಲಿ ನಾಯಕರನ್ನು ಓಲೈಸುವುದರಲ್ಲೇ ನಿರತವಾಗಿದ್ದು, ವಿಧಾನಸೌಧದಲ್ಲಿ ಸೂಕ್ತ ಆಡಳಿತ ನಡೆಯುತ್ತಿಲ್ಲ ಎಂದು ಆರೋಪಿಸಿದರು.

ಬರ ನಿರ್ವಹಣೆಗೆ 100 ಕೋಟಿ ಬಿಡುಗಡೆಗೆ ಆಗ್ರಹ

ರಾಜ್ಯದಲ್ಲಿ ಮಳೆ ಕೊರತೆಯಿಂದ ಕೃಷಿಗೆ ತೀವ್ರ ಹಿನ್ನಡೆಯಾಗಿದ್ದು, ಸರ್ಕಾರ ಕೂಡಲೇ ಬರ ಘೋಷಿಸಬೇಕು ಎಂದು ಕಾರಜೋಳ ಒತ್ತಾಯಿಸಿದರು. ಪ್ರತಿಯೊಂದು ಜಿಲ್ಲೆಗೆ ಕುಡಿಯುವ ನೀರು, ಜಾನುವಾರುಗಳ ಮೇವು ಹಾಗೂ ಉದ್ಯೋಗ ಸೃಷ್ಟಿಗಾಗಿ ತಲಾ 100 ಕೋಟಿ ಬಿಡುಗಡೆ ಮಾಡಬೇಕು ಎಂದರು.

ಇದನ್ನೂ ಓದಿ:

ಜಾನುವಾರುಗಳನ್ನು ಸಾಕಲಾಗದೆ ರೈತರು ಅವುಗಳನ್ನು ಮಾರಾಟ ಮಾಡುತ್ತಿದ್ದಾರೆ. ಉದ್ಯೋಗದ ಕೊರತೆಯಿಂದ ಬಡವರು ವಲಸೆ ಹೋಗುತ್ತಿದ್ದಾರೆ. ಸಾಲದ ಬಾಧೆಯಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಸರ್ಕಾರ ಗೋಶಾಲೆಗಳನ್ನು ಆರಂಭಿಸಿ, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ರೈತರ ಮುಂಗಾರು ಸಾಲ ಮನ್ನಾ ಮಾಡುವುದರ ಜೊತೆಗೆ ಬೆಳೆ ವಿಮೆಯ ಸಂಪೂರ್ಣ ಮೊತ್ತವನ್ನು ಸರ್ಕಾರವೇ ಭರಿಸಬೇಕು ಎಂದು ಆಗ್ರಹಿಸಿದರು.

ಹರ್ ಘರ್ ತಿರಂಗಾಗೆ ಕರೆ

ಸ್ವಾತಂತ್ರ್ಯ ಹೋರಾಟಗಾರರ ತ್ಯಾಗದಿಂದ ದೇಶಕ್ಕೆ ಸ್ವಾತಂತ್ರ್ಯ ದೊರೆತಿದ್ದು, 80ನೇ ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ‘ಒಂದು ದೇಶ, ಒಂದು ಕುಟುಂಬ’ ಎಂಬ ಭಾವನೆಯೊಂದಿಗೆ ಮನೆಗಳ ಮೇಲೆ ತ್ರಿವರ್ಣ ಧ್ವಜ ಹಾರಿಸಿ ಹರ್ ಘರ್ ತಿರಂಗಾ ಅಭಿಯಾನ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಎ. ಮುರಳಿ, ಪರಶುರಾಮ್, ನಾಗರಾಜ್ ಬೇದ್ರೆ, ಚೇತನ ಕುಮಾರ್, ರವಿಕುಮಾರ್, ಪ್ರಸನ್ನ, ಹನುಮಂತಪ್ಪ ಹಾಗೂ ಅರುಣ್ ಉಪಸ್ಥಿತರಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !