August 15, 2026
Saturday, August 15, 2026
spot_img

ಇಂಡೋನೇಷ್ಯಾದಲ್ಲಿ 7.7 ತೀವ್ರತೆಯ ಭೂಕಂಪ: ನೂರಾರು ಕಟ್ಟಡಗಳು ನೆಲಸಮ, 20 ಜನರ ದುರ್ಮ*ರಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಇಂಡೋನೇಷ್ಯಾದ ಫ್ಲೋರೆಸ್ ದ್ವೀಪದ ಕರಾವಳಿ ಭಾಗದಲ್ಲಿ ಶನಿವಾರ ಮುಂಜಾನೆ ಸಂಭವಿಸಿದ ಭೀಕರ ಭೂಕಂಪಕ್ಕೆ ಕನಿಷ್ಠ 20 ಜನರು ಸಾವನ್ನಪ್ಪಿದ್ದಾರೆ. ರಿಕ್ಟರ್ ಮಾಪಕದಲ್ಲಿ 7.7 ರಷ್ಟು ತೀವ್ರತೆ ದಾಖಲಾಗಿರುವ ಈ ಭೂಕಂಪದಿಂದಾಗಿ ನೂರಾರು ವಸತಿ ಮನೆಗಳು, ಆಸ್ಪತ್ರೆಗಳು ಮತ್ತು ಸಾರ್ವಜನಿಕ ಆಸ್ತಿಪಾಸ್ತಿಗಳು ಸಂಪೂರ್ಣವಾಗಿ ಹಾನಿಗೊಳಗಾಗಿವೆ.

ಕ್ಷಣಾರ್ಧದಲ್ಲಿ ಧರೆಗುರುಳಿದ ಕಟ್ಟಡಗಳು

ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ ಪ್ರಕಾರ, ಇಂಡೋನೇಷ್ಯಾ ಕಾಲಮಾನ ಮುಂಜಾನೆ 5:58 ಕ್ಕೆ ಭೂಮಿ ಕಂಪಿಸಿದೆ. ಈ ಭೂಕಂಪವು ಫ್ಲೋರೆಸ್ ಪ್ರದೇಶದ 10 ಕಿಲೋಮೀಟರ್ ಆಳದಲ್ಲಿ ಸಂಭವಿಸಿದ್ದು, ಇದರ ಕೇಂದ್ರಬಿಂದು ಪೂರ್ವ ನುಸಾ ತೆಂಗಾರ ಪ್ರಾಂತ್ಯದ ಎಂದೆ ನಗರದಿಂದ ಉತ್ತರ-ವಾಯುವ್ಯಕ್ಕೆ 68 ಕಿಮೀ ದೂರದಲ್ಲಿದೆ. ಭೂಕಂಪದ ತೀವ್ರತೆಗೆ ಲಾಬುವಾನ್ ಬಾಜೊದಲ್ಲಿನ ಜಯಕರ್ತ ಹೋಟೆಲ್ ಸೇರಿದಂತೆ ಮೌಮೇರಿಯಲ್ಲಿನ ಬಂದರು ಟರ್ಮಿನಲ್‌ನ ಕಾಯುವ ಕೋಣೆ ಸಂಪೂರ್ಣವಾಗಿ ಕುಸಿದು ಬಿದ್ದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋಗಳಲ್ಲಿ ಕಟ್ಟಡಗಳು ಕುಸಿಯುತ್ತಿರುವುದು ಮತ್ತು ಜನರು ಪ್ರಾಣಭಯದಿಂದ ಓಡುತ್ತಿರುವುದು ಕಂಡುಬಂದಿದೆ.

ಜನರಲ್ಲಿ ಮೂಡಿದ ಭೀತಿ

“ನಾನು ಮಾರುಕಟ್ಟೆಯಲ್ಲಿದ್ದಾಗ ಇದ್ದಕ್ಕಿದ್ದಂತೆ ಭೂಮಿ ಜೋರಾಗಿ ಕಂಪಿಸಲು ಪ್ರಾರಂಭಿಸಿತು. ಜನರು ಗಾಬರಿಯಿಂದ ಓಡುತ್ತಿದ್ದರು. ನಾವು ಪ್ರಾಣ ಉಳಿಸಿಕೊಳ್ಳಲು ಬೆಟ್ಟದ ಪ್ರದೇಶಗಳ ಕಡೆಗೆ ಧಾವಿಸಿದೆವು” ಎಂದು ಸ್ಥಳೀಯ ನಿವಾಸಿಯೊಬ್ಬರು ತಿಳಿಸಿದ್ದಾರೆ. ಇನ್ನು ಆಸ್ಪತ್ರೆಯೊಂದರ ಉದ್ಯೋಗಿ ಮಾತನಾಡಿ, “ಭೂಮಿ ಕಂಪಿಸುತ್ತಿದ್ದಂತೆ ಆಸ್ಪತ್ರೆಯಲ್ಲಿದ್ದ ರೋಗಿಗಳು ಸಹ ಪ್ರಾಣಭಯದಿಂದ ಹೊರಗೆ ಓಡಿ ಬಂದರು. ಆಸ್ಪತ್ರೆಯ ಗೋಡೆಗಳು ಬಿರುಕು ಬಿಟ್ಟಿವೆ” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಸುನಾಮಿ ಆತಂಕ ಮತ್ತು ಮುನ್ನೆಚ್ಚರಿಕೆ

ಭೂಕಂಪ ಸಂಭವಿಸುತ್ತಿದ್ದಂತೆ ಇಂಡೋನೇಷ್ಯಾದ ಹವಾಮಾನ ಮತ್ತು ಭೂವೈಜ್ಞಾನಿಕ ಇಲಾಖೆ (BMKG) ಕರಾವಳಿ ಭಾಗದಲ್ಲಿ ಸುನಾಮಿ ಅಲೆಗಳು ಏಳುವ ಸಾಧ್ಯತೆಯಿದೆ ಎಂದು ಮುನ್ನೆಚ್ಚರಿಕೆ ನೀಡಿತ್ತು. ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆಯ ಅಧಿಕಾರಿ ಅಬ್ದುಲ್ ಮುಹಾರಿ ಅವರು, ಕರಾವಳಿ ತೀರದಿಂದ 2 ಕಿಲೋಮೀಟರ್ ದೂರ ಅಥವಾ 10 ಮೀಟರ್‌ಗಿಂತ ಎತ್ತರವಿರುವ ಬೆಟ್ಟದ ಪ್ರದೇಶಗಳಿಗೆ ತಕ್ಷಣವೇ ಸ್ಥಳಾಂತರಗೊಳ್ಳುವಂತೆ ಜನರಿಗೆ ಸೂಚಿಸಿದ್ದರು. ಆದರೆ, ನಂತರದ ಪರಿಸ್ಥಿತಿಯನ್ನು ಪರಿಶೀಲಿಸಿ ಸುನಾಮಿ ಮುನ್ನೆಚ್ಚರಿಕೆಯನ್ನು ಹಿಂಪಡೆಯಲಾಯಿತು.

ಇದನ್ನೂ ಓದಿ:

ಇಂಡೋನೇಷ್ಯಾದಲ್ಲಿ ಪದೇ ಪದೇ ಭೂಕಂಪ ಏಕೆ?

ಇಂಡೋನೇಷ್ಯಾ ದೇಶವು ಪೆಸಿಫಿಕ್ “ರಿಂಗ್ ಆಫ್ ಫೈರ್” ವಲಯದಲ್ಲಿದೆ. ಇದು ತೀವ್ರವಾದ ಭೂಕಂಪನ ಮತ್ತು ಜ್ವಾಲಾಮುಖಿ ಚಟುವಟಿಕೆಗಳು ನಡೆಯುವ ಪ್ರದೇಶವಾಗಿದೆ. ಹೀಗಾಗಿ ಇಲ್ಲಿನ 17,000 ಕ್ಕೂ ಹೆಚ್ಚು ದ್ವೀಪಗಳಲ್ಲಿ ಪದೇ ಪದೇ ಭೂಕಂಪಗಳು ಸಂಭವಿಸುತ್ತಿರುತ್ತವೆ. ಈ ಹಿಂದೆ 1992 ರಲ್ಲಿ ಫ್ಲೋರೆಸ್ ದ್ವೀಪದಲ್ಲೇ ಸಂಭವಿಸಿದ ಭೂಕಂಪಕ್ಕೆ 2,500 ಜನರು ಸಾವನ್ನಪ್ಪಿದ್ದರು. ಹಾಗೆಯೇ 2004 ರಲ್ಲಿ ಸುಮಾತ್ರಾ ಕರಾವಳಿಯಲ್ಲಿ ಸಂಭವಿಸಿದ 9.1 ತೀವ್ರತೆಯ ಭೀಕರ ಭೂಕಂಪ ಮತ್ತು ಸುನಾಮಿಗೆ ಇಡೀ ವಲಯದಲ್ಲಿ ಸುಮಾರು 2,20,000 ಜನರು ಬಲಿಯಾಗಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !