ಹೊಸದಿಗಂತ ವರದಿ ಬೆಳಗಾವಿ:
ಬೆಳಗಾವಿ ತಾಲೂಕಿನ ಸುಕ್ಷೇತ್ರ ದತ್ತ ಮಹಾರಾಜ ಪಂತ ಬಾಳೇಕುಂದ್ರಿ ಗ್ರಾಮದಲ್ಲಿ 80ನೇ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಜೈ ಭೀಮ ಯುವಕ ಮಂಡಳಿ ಹಾಗೂ ಗ್ರಾಮದ ಹಿರಿಯರ ನೇತೃತ್ವದಲ್ಲಿ ಸುರೇಶ್ ಜಾಳೋಜಿ ಹಾಗೂ ಹೊನ್ನಗೌಡ ಪಾಟೀಲ ಅವರು ಧ್ವಜಾರೋಹಣ ನೆರವೇರಿಸಿದರು.
ಈ ವೇಳೆ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಗ್ರಾಮದ ಮುಖಂಡರು, ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅನೇಕ ವೀರ ಹೋರಾಟಗಾರರು ಹಾಗೂ ಮಹನೀಯರು ತಮ್ಮ ಪ್ರಾಣವನ್ನೇ ದೇಶಕ್ಕಾಗಿ ತ್ಯಾಗ ಮಾಡಿ ಸ್ವಾತಂತ್ರ್ಯವನ್ನು ತಂದುಕೊಟ್ಟಿದ್ದಾರೆ. ಅವರ ತ್ಯಾಗ, ಬಲಿದಾನ ಹಾಗೂ ಹೋರಾಟದ ಫಲವಾಗಿ ಇಂದು ನಾವೆಲ್ಲರೂ ಸ್ವತಂತ್ರವಾಗಿ ಬದುಕುವಂತಾಗಿದೆ ಎಂದು ಹೇಳಿದರು.

ಮಾಜಿ ಸೈನಿಕರು ಧ್ವಜಾರೋಹಣದ ಸಂದರ್ಭದಲ್ಲಿ ದೇಶದ ರಕ್ಷಣೆಗಾಗಿ ಬಲಿದಾನ ಮಾಡಿದ ವೀರ ಸೈನಿಕರನ್ನು ಸ್ಮರಿಸಿ, ಅವರ ಸೇವೆ ಮತ್ತು ತ್ಯಾಗವನ್ನು ಮೆಲುಕು ಹಾಕಿದರು. ಭಾರತವು ವಿವಿಧ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸುತ್ತಿದ್ದು, ಆರ್ಥಿಕ ಅಭಿವೃದ್ಧಿ, ಮಹಿಳಾ ಸಬಲೀಕರಣ, ಮಹಿಳಾ ಮೀಸಲಾತಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ದೇಶ ಮುನ್ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಭಾರತ ಇನ್ನಷ್ಟು ಅಭಿವೃದ್ಧಿ ಹೊಂದಲಿದೆ ಎಂದು ಮುಖಂಡರು ಹಾಗೂ ಮಾಜಿ ಸೈನಿಕರು ಅಭಿಪ್ರಾಯಪಟ್ಟರು.
ಜೈ ಭೀಮ ಯುವಕ ಮಂಡಳದ ಸದಸ್ಯರು ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಡಲು ಅಂದಿನ ವೀರ ಹೋರಾಟಗಾರರು ತಮ್ಮ ಜೀವನವನ್ನೇ ತ್ಯಾಗ ಮಾಡಿದ್ದಾರೆ. ಅವರ ಆದರ್ಶ ಮತ್ತು ಹೋರಾಟದ ಮಾರ್ಗದಲ್ಲಿ ಯುವಜನತೆ ಮುನ್ನಡೆಯಬೇಕು ಎಂದು ಅಭಿಪ್ರಾಯ ಪಟ್ಟರು.
ಇದನ್ನೂ ಓದಿ:
ಗ್ರಾಮದಲ್ಲಿ ಕಳೆದ ಎರಡು ವರ್ಷಗಳಿಂದ ಡಾ. ಬಿ.ಆರ್. ಅಂಬೇಡ್ಕರ್ ಅವರ ಮೂರ್ತಿ ಪ್ರತಿಷ್ಠಾಪನೆಗೆ ಸಂಬಂಧಿಸಿದಂತೆ ಉಂಟಾಗಿರುವ ವಿರೋಧಗಳು ಅಂತ್ಯಗೊಳ್ಳಬೇಕು. ಜಾತಿ, ಧರ್ಮದ ಭೇದಭಾವವನ್ನು ಬದಿಗೊತ್ತಿ ಎಲ್ಲರೂ ಭಾರತೀಯರಾಗಿ, ಅಣ್ಣ-ತಮ್ಮಂದಿರಂತೆ ಒಗ್ಗಟ್ಟಿನಿಂದ ಬದುಕಬೇಕು. ಶೀಘ್ರದಲ್ಲೇ ಡಾ. ಅಂಬೇಡ್ಕರ್ ಅವರ ಮೂರ್ತಿ ಪ್ರತಿಷ್ಠಾಪನೆ ನಡೆಯಲಿದೆ ಎಂಬ ವಿಶ್ವಾಸವನ್ನು ಮುಖಂಡರು ವ್ಯಕ್ತಪಡಿಸಿದರು.
ಈ ವೇಳೆ ಪಂತ ಬಾಳೇಕುಂದ್ರಿ ಗ್ರಾಮದ ಪಂಚ ಕಮಿಟಿ ಸದಸ್ಯರು, ಮಾಜಿ ಸೈನಿಕರು, ಹಿಂದೂಪರ ಸಂಘಟನೆಗಳ ಕಾರ್ಯಕರ್ತರು, ಜೈ ಭೀಮ ಯುವಕ ಮಂಡಳದ ಸದಸ್ಯರು ಹಾಗೂ ಗ್ರಾಮದ ಮಹಿಳೆಯರು ಸೇರಿದಂತೆ ಹಲವರು ಪಾಲ್ಗೊಂಡಿದ್ದರು.



