ಹೊಸದಿಗಂತ ವರದಿ ಮಡಿಕೇರಿ:
ಸರ್ಕಾರದ ಹತ್ತು ಹಲವು ಕಾರ್ಯಕ್ರಮಗಳು ಮತ್ತು ಯೋಜನೆಗಳ ಮೂಲಕ ಸ್ವಾತಂತ್ರ್ಯದ ಅಮೃತ ಕಾಲವನ್ನು ಸಮಾನತೆ, ಸೌಹಾರ್ದತೆ, ಅಭಿವೃದ್ಧಿ ಮತ್ತು ಮಾನವೀಯತೆಯ ಹೊಸ ಯುಗವನ್ನಾಗಿ ಪರಿವರ್ತಿಸೋಣ ಎಂದು ರಾಜ್ಯದ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪಿ.ಎಂ ನರೇಂದ್ರಸ್ವಾಮಿ ಕರೆ ನೀಡಿದರು.
ನಗರದ ಕೋಟೆ ಆವರಣದಲ್ಲಿ ನಡೆದ 80ನೇ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ, ನಾಡಿನ ಜನತೆ ಸ್ವಾತಂತ್ರ್ಯೋತ್ವದ ಶುಭಾಶಯ ಕೋರಿ ಮಾತನಾಡಿದ ಅವರು, ಸ್ವಾತಂತ್ರ್ಯೋತ್ಸವ ಎಂಬುದು ಸ್ವಾತಂತ್ರ್ಯಕ್ಕಾಗಿ ತಮ್ಮ ಬದುಕನ್ನೇ ಅರ್ಪಿಸಿದ ಅಸಂಖ್ಯಾತ ಮಹನೀಯರ ತ್ಯಾಗ, ಬಲಿದಾನ ಮತ್ತು ಕನಸುಗಳನ್ನು ಸ್ಮರಿಸುವ ಪವಿತ್ರ ದಿನವಾಗಿದೆ ಎಂದು ಹೇಳಿದರು.
ದೇಶದಿಂದ ಬ್ರಿಟಿಷರನ್ನು ಹೊರಹಾಕಲು ಹೋರಾಟ ನಡೆಸಿದ ಮಹನೀಯರನ್ನು ಸ್ಮರಿಸಿದ ಸಚಿವರು, ಕೊಡಗಿನ ಗುಡ್ಡೆಮನೆ ಅಪ್ಪಯ್ಯಗೌಡರ ಧೈರ್ಯ, ಪಂದ್ಯಂಡ ಬೆಳ್ಯಪ್ಪನವರ ಗಾಂಧೀ ಚಿಂತನೆ, ಸಿ.ಎಂ. ಪೂಣಚ್ಚನವರ ರಾಷ್ಟ್ರೀಯ ಬದ್ಧತೆ, ಕೆ.ಎಂ. ಕಾರ್ಯಪ್ಪ ಮತ್ತು ಕೆ.ಎಸ್. ತಿಮ್ಮಯ್ಯ ಅವರ ದೇಶಸೇವೆ ನಮ್ಮ ಮುಂದಿನ ಪಯಣಕ್ಕೆ, ಇಡೀ ನಾಡಿನ ಸೌಹಾರ್ದ ಪರಂಪರೆ ಮತ್ತು ಪ್ರಗತಿಗೆ ದಾರಿದೀಪವಾಗಲಿ ಎಂದು ಆಶಿಸಿದರು.
ಕೊಡಗು ಎಂದರೆ ಕೇವಲ ಪ್ರಕೃತಿಯ ಸೌಂದರ್ಯವಲ್ಲ. ಇದು ಶೌರ್ಯ, ತ್ಯಾಗ, ದೇಶಪ್ರೇಮ ಮತ್ತು ಸಂಸ್ಕೃತಿಯ ಸಂಗಮವಾಗಿದೆ. ಪಶ್ಚಿಮ ಘಟ್ಟಗಳ ಹಸಿರು ಹೊದಿಕೆಯ ನಡುವೆ ಕಾವೇರಿ ಹುಟ್ಟುವ ಈ ಪುಣ್ಯಭೂಮಿ, ಭಾರತದ ಸ್ವಾತಂತ್ರ್ಯ ಹೋರಾಟಕ್ಕೂ ತನ್ನದೇ ಆದ ಅಮೂಲ್ಯ ಕೊಡುಗೆಯನ್ನು ನೀಡಿದೆ ಎಂದು ನೆನಪಿಸಿದರು.
ಸ್ವಾತಂತ್ರ್ಯ ಹೋರಾಟದ ಜೊತೆಗೆ ದೇಶದ ಗಡಿಗಳನ್ನು ಕಾಯುವ ಸೇನಾ ಪರಂಪರೆಯಲ್ಲಿಯೂ ಕೊಡಗು ಮುಂಚೂಣಿಯಲ್ಲಿದೆ. ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಮತ್ತು ಜನರಲ್ ಕೆ.ಎಸ್. ತಿಮ್ಮಯ್ಯ ಭಾರತದ ಸೇನಾ ಇತಿಹಾಸದಲ್ಲಿ ಚಿರಸ್ಥಾಯಿಯಾಗಿ ಉಳಿದಿರುವ ಎರಡು ಮಹಾನ್ ಹೆಸರುಗಳು ಎಂದು ಅವರು ಹೇಳಿದರು.
ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಕೊಡಗು, ಸ್ವಾತಂತ್ರ್ಯವನ್ನು ರಕ್ಷಿಸಲು ಯೋಧರನ್ನೂ ಕೊಟ್ಟಿದೆ ಹಾಗೂ ಕೊಡುತ್ತಿದೆ. ಇದೇ ಕೊಡಗಿನ ಮಣ್ಣಿನ ವೈಶಿಷ್ಟ್ಯ. ಹಾಗೆಯೇ, ನಮ್ಮ ಕೊಡಗು ಎಲ್ಲಾ ಧರ್ಮ, ಭಾಷೆ, ಜಾತಿ, ಸಮುದಾಯದ ಬೇಧಗಳನ್ನು ಮೀರಿ ಎಲ್ಲರೂ ಒಂದಾಗಿ, ಎಲ್ಲರನ್ನೂ ಒಳಗೊಂಡಿರುವ ಸೌಹಾರ್ದದ ತಪ್ಪಲಾಗಿದೆ. ಆದ್ದರಿಂದ ಕೊಡಗಿನ ಪ್ರಕೃತಿಯನ್ನು ಸಂರಕ್ಷಿಸುತ್ತಲೇ ಪ್ರವಾಸೋದ್ಯಮ, ಕೃಷಿ, ಕಾಫಿ, ತೋಟಗಾರಿಕೆ ಮತ್ತು ಸ್ಥಳೀಯ ಉದ್ಯೋಗಗಳನ್ನು ಬೆಳೆಸುವುದು ನಮ್ಮ ಆದ್ಯತೆಯಾಗಿದೆ ಎಂದು ಸಚಿವರು ನುಡಿದರು.
ಕೊಡಗಿನ ಆರ್ಥಿಕತೆಯ ಬೆನ್ನೆಲುಬಾಗಿರುವ ಕಾಫಿ ಬೆಳೆಗಾರರು ಮತ್ತು ಕೃಷಿಕರ ಬದುಕು ಬಲವಾಗಬೇಕು. ಹವಾಮಾನ ಬದಲಾವಣೆ, ಅತಿವೃಷ್ಟಿ, ಅನಿಶ್ಚಿತ ಮಳೆ, ಬೆಲೆ ಏರಿಳಿತ ಮತ್ತು ವನ್ಯಜೀವಿ ಸಂಘರ್ಷದಂತಹ ಸವಾಲುಗಳಿಗೆ ವೈಜ್ಞಾನಿಕ ಪರಿಹಾರ ಕಂಡುಕೊಳ್ಳಬೇಕು ಎಂದ ಸಚಿವರು, ಕೊಡಗಿನ ಕೃಷಿಯನ್ನು ಕೇವಲ ಉತ್ಪಾದನೆಯಾಗಿ ನೋಡುವುದಲ್ಲ; ಮೌಲ್ಯವರ್ಧನೆ, ಸಂಸ್ಕರಣೆ, ಬ್ರ್ಯಾಂಡಿಂಗ್, ರಫ್ತು ಮತ್ತು ಪ್ರವಾಸೋದ್ಯಮದೊಂದಿಗೆ ಸಂಪರ್ಕಿಸುವ ಹೊಸ ಆರ್ಥಿಕತೆಯಾಗಿ ರೂಪಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ಕೊಡಗು ಕಾಫಿ ಜಾಗತಿಕ ಸಂಕೇತವಾಗಲಿ:
ಕೊಡಗಿನ ಕಾಫಿ ವಿಶ್ವದ ಮಾರುಕಟ್ಟೆಯಲ್ಲಿ ಇನ್ನಷ್ಟು ಬಲವಾಗಿ ಗುರುತಿಸಿಕೊಳ್ಳಬೇಕು. ʼಕೊಡಗು ಕಾಫಿʼ ಎಂಬ ಹೆಸರೇ ಜಾಗತಿಕ ಗುಣಮಟ್ಟದ ಸಂಕೇತವಾಗುವ ದಿನವನ್ನು ನಾವು ನಿರ್ಮಿಸೋಣ ಎಂದರು.
ಕೊಡಗಿನ ಪ್ರವಾಸೋದ್ಯಮದ ಬಗ್ಗೆಯೂ ಪ್ರಸ್ತಾಪಿಸಿದ ನರೇಂದ್ರಸ್ವಾಮಿ ಅವರು, ಕೇವಲ ಪ್ರವಾಸಿಗರ ಸಂಖ್ಯೆಯನ್ನು ಹೆಚ್ಚಿಸುವುದಷ್ಟೇ ನಮ್ಮ ಗುರಿಯಾಗಬಾರದು. ಪರಿಸರ ಸ್ನೇಹಿ ಪ್ರವಾಸೋದ್ಯಮ, ಆಧ್ಯಾತ್ಮಿಕ ಪ್ರವಾಸೋದ್ಯಮ, ಸಾಹಸ ಪ್ರವಾಸೋದ್ಯಮ, ಗ್ರಾಮೀಣ ಪ್ರವಾಸೋದ್ಯಮ, ಕಾಫಿ ಪ್ರವಾಸೋದ್ಯಮ ಮತ್ತು ಸಾಂಸ್ಕೃತಿಕ ಪ್ರವಾಸೋದ್ಯಮಗಳನ್ನು ಸಮಗ್ರವಾಗಿ ಬೆಳೆಸಬೇಕೆಂಬುದೇ ನನ್ನ ಗುರಿಯಾಗಿದೆ ಎಂದು ಹೇಳಿದರು.
ಮಾನವ-ವನ್ಯಜೀವಿ ಸಂಘರ್ಷ:
ಮಾನವ–ವನ್ಯಜೀವಿ ಸಂಘರ್ಷವನ್ನು ಕಡಿಮೆ ಮಾಡಲು ವೈಜ್ಞಾನಿಕ ಪರಿಹಾರಗಳು, ತ್ವರಿತ ಪರಿಹಾರಧನ, ಸುರಕ್ಷತಾ ಕ್ರಮಗಳು ಮತ್ತು ಅರಣ್ಯ ಸಂರಕ್ಷಣೆಯನ್ನು ಸಮನ್ವಯಗೊಳಿಸಬೇಕು. ಅರಣ್ಯವೂ ಉಳಿಯಬೇಕು; ಅರಣ್ಯದಂಚಿನ ಜನರೂ ನೆಮ್ಮದಿಯಿಂದ ಬದುಕಬೇಕೆಂಬುದೇ ನಮ್ಮ ಪರಿಸರ ನ್ಯಾಯದ ಸಂಕಲ್ಪವಾಗಿದ್ದು, ಈ ಸಂಕಲ್ಪದ ಜೊತೆಗೇ ಸರ್ಕಾರ ಕೊಡಗಿನ ಸರ್ವರ ಅಭಿವೃದ್ಧಿಗೆ ಮತ್ತು ಸಮಗ್ರ ಪ್ರಗತಿಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಈಗಾಗಲೇ ಜಾರಿಗೊಳಿಸಿದೆ ಎಂದು ಸಚಿವರು ತಿಳಿಸಿದರು.
ಇದನ್ನೂ ಓದಿ:
ಗ್ಯಾರಂಟಿ ಯೋಜನೆಗಳು, ಪರಿಶಿಷ್ಟ ಪಂಗಡಗಳ ಕಲ್ಯಾಣ, ನಗರಾಭಿವೃದ್ಧಿ ಮತ್ತು ಕೆರೆ ಪುನಶ್ಚೇತನ, ಆರೋಗ್ಯ ಮೂಲಸೌಕರ್ಯ, ಕೃಷಿ ಮತ್ತು ತೋಟಗಾರಿಕೆ, ಕುಡಿಯುವ ನೀರು – ಜಲ ಜೀವನ್ ಮಿಷನ್, ರಸ್ತೆ ಮತ್ತು ಮೂಲಸೌಕರ್ಯ, ಪಂಚಾಯತ್ ರಾಜ್ ಮತ್ತು ಗ್ರಾಮೀಣ ಮೂಲಸೌಕರ್ಯ, ಸ್ವಚ್ಛ ಭಾರತ ಮತ್ತು ತ್ಯಾಜ್ಯ ನಿರ್ವಹಣೆ, ಗ್ರಾಮೀಣ ಉದ್ಯೋಗ, ವಸತಿ, ಕ್ರೀಡೆ ಮತ್ತು ಶಿಕ್ಷಣ ಮೂಲಸೌಕರ್ಯ ಮುಂತಾದ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಸಚಿವರು ಸವಿಸ್ತಾರವಾಗಿ ಮಾತನಾಡಿದರು.
ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂಥರ್ ಗೌಡ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷ ಎಸ್.ಆರ್.ಮೆಹರೋಜ್ ಖಾನ್, ಮಡಿಕೇರಿ ನಗರಸಭೆ ಅಧ್ಯಕ್ಷೆ ಕಲಾವತಿ ಪಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷ ಟಿ.ಎಂ.ಧರ್ಮಜ ಉತ್ತಪ್ಪ, ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆನಂದ್ ಪ್ರಕಾಶ್ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ ಇತರರು ಹಾಜರಿದ್ದರು.
ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆದವು.



