ಹೊಸದಿಗಂತ ವರದಿ ಚಿತ್ರದುರ್ಗ:
ರಾಜ್ಯದಲ್ಲಿ ಬರಗಾಲದ ಛಾಯೆ ಆವರಿಸಿರುವ ಹಿನ್ನೆಲೆಯಲ್ಲಿ ಸರ್ಕಾರ ಬರ ನಿರ್ವಹಣೆಗೆ ಆದ್ಯತೆ ನೀಡಿದೆ. ಜಿಲ್ಲೆಯ ರೈತರ ಅನುಕೂಲಕ್ಕಾಗಿ ಬಿತ್ತನೆ ವೈಫಲ್ಯದಡಿ ಸುಮಾರು 167 ಕೋಟಿ ಬೆಳೆ ವಿಮೆ ಸೌಲಭ್ಯ ಒದಗಿಸುವ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಟಿ. ರಘುಮೂರ್ತಿ ಹೇಳಿದರು.
ಜಿಲ್ಲಾಡಳಿತದ ವತಿಯಿಂದ ಆಯೋಜಿಸಿದ್ದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿ ಅವರು ಮಾತನಾಡಿದರು. ಸಚಿವರಾಗಿ ನಿಯುಕ್ತಿಯಾದ ಬಳಿಕ ಜಿಲ್ಲೆಯ ಆರು ತಾಲ್ಲೂಕುಗಳಲ್ಲಿ ಖುದ್ದಾಗಿ ಬೆಳೆಗಳ ಪರಿಸ್ಥಿತಿಯನ್ನು ಪರಿಶೀಲಿಸಿದ್ದೇನೆ. ಸಕಾಲದಲ್ಲಿ ಮಳೆಯಾಗದ ಕಾರಣ ಬಿತ್ತನೆ ಕುಂಠಿತವಾಗಿರುವುದನ್ನು ಗಮನಿಸಿದ್ದು, ಬಿತ್ತನೆ ವೈಫಲ್ಯದಡಿ ವಿಮೆ ಸೌಲಭ್ಯ ಕಲ್ಪಿಸಲು ಸರ್ಕಾರಕ್ಕೆ ವರದಿ ಸಲ್ಲಿಸುವ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ವ್ಯಾಪಕ ಪ್ರಚಾರ ಕೈಗೊಂಡ ಪರಿಣಾಮ ಈ ಬಾರಿ 1.96 ಲಕ್ಷಕ್ಕೂ ಅಧಿಕ ರೈತರು ಬೆಳೆ ವಿಮೆ ಯೋಜನೆಯಡಿ ನೋಂದಣಿ ಮಾಡಿಕೊಂಡಿದ್ದಾರೆ ಎಂದು ಸಚಿವರು ಹೇಳಿದರು.
ತುರವನೂರಿನಲ್ಲಿ ಸ್ವಾತಂತ್ರ್ಯ ಇತಿಹಾಸ ಸಾರುವ ಉದ್ಯಾನ
ತುರವನೂರು ಗ್ರಾಮದ ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಸ್ವಾತಂತ್ರ್ಯ ಉದ್ಯಾನವನ ನಿರ್ಮಿಸಲಾಗುತ್ತಿದೆ. ಕಾಮಗಾರಿ ಅಂತಿಮ ಹಂತದಲ್ಲಿದ್ದು, ಶೀಘ್ರದಲ್ಲೇ ಉದ್ಯಾನವನ್ನು ಸಾರ್ವಜನಿಕರ ಮುಕ್ತ ಬಳಕೆಗೆ ತೆರೆಯಲಾಗುವುದು ಎಂದು ಟಿ. ರಘುಮೂರ್ತಿ ತಿಳಿಸಿದರು.

ತುರವನೂರು ಹಾಗೂ ಮಹಾತ್ಮ ಗಾಂಧೀಜಿ ಅವರ ನಡುವೆ ಭಾವನಾತ್ಮಕ ನಂಟಿತ್ತು. ಈಚಲು ಮರದ ಸತ್ಯಾಗ್ರಹಕ್ಕೆ ತುರವನೂರು ಪ್ರಮುಖ ಕೇಂದ್ರವಾಗಿತ್ತು. ಸ್ವಾತಂತ್ರ್ಯ ಹೋರಾಟದಲ್ಲಿ ಗ್ರಾಮದ ಯುವಕರು ಮತ್ತು ಮಹಿಳೆಯರು ಸೇರಿದಂತೆ ಎಲ್ಲರೂ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಸಾವಿರಾರು ಈಚಲು ಮರಗಳನ್ನು ರಾತ್ರೋರಾತ್ರಿ ಕಡಿದು ಹೋರಾಟ ನಡೆಸಲಾಗಿತ್ತು ಎಂದು ಸಚಿವರು ಸ್ಮರಿಸಿದರು.
ಈ ಹೋರಾಟದ ವಿಚಾರ ಮಹಾತ್ಮ ಗಾಂಧೀಜಿ ಅವರ ಗಮನಕ್ಕೂ ತಲುಪಿತ್ತು. ಅವರು ಸ್ವತಃ ತುರವನೂರಿಗೆ ಬಂದು ಹೋರಾಟದಲ್ಲಿ ಭಾಗವಹಿಸುವ ಇಚ್ಛೆ ವ್ಯಕ್ತಪಡಿಸಿದ್ದರು. ಆದರೆ ಕೊನೆಯ ಹಂತದಲ್ಲಿ ಅವರ ಸಹಚರ ಮಹದೇವ್ ದೇಸಾಯಿ ಅವರು ಗಾಂಧೀಜಿ ಅವರ ಪರವಾಗಿ ತುರವನೂರಿಗೆ ಆಗಮಿಸಿ ಹೋರಾಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರು ಎಂದು ಸಚಿವರು ಹೇಳಿದರು.
100 ದಿನಗಳ ಅಭಿವೃದ್ಧಿ ಕಾರ್ಯಸೂಚಿಗೆ ಒತ್ತು
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರೂಪಿಸಿರುವ 100 ದಿನಗಳ ಅಭಿವೃದ್ಧಿ ಮತ್ತು ಕಾರ್ಯಸೂಚಿಯನ್ನು ಉಲ್ಲೇಖಿಸಿದ ಸಚಿವ ಟಿ. ರಘುಮೂರ್ತಿ, ಅಧಿಕಾರಿಗಳ ಸಹಕಾರದೊಂದಿಗೆ ಜಿಲ್ಲೆಯ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.



