ಹೊಸದಿಗಂತ ವರದಿ ಚಿತ್ರದುರ್ಗ:
ಅಖಂಡ ಭಾರತ ನಿರ್ಮಾಣವು ರಾಷ್ಟ್ರಭಕ್ತ ಸಂಘಟನೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಮುಖ ಸಂಕಲ್ಪವಾಗಿದೆ ಎಂದು ವಿಶ್ವ ಹಿಂದೂ ಪರಿಷದ್ ಕರ್ನಾಟಕ ದಕ್ಷಿಣ ಪ್ರಾಂತ ಸಹ ಕಾರ್ಯದರ್ಶಿ ಮಹಿಪಾಲ್ ಹಾಸನ ಹೇಳಿದರು.
ನಗರದಲ್ಲಿ ವಿಶ್ವ ಹಿಂದೂ ಪರಿಷದ್ ಹಾಗೂ ಬಜರಂಗದಳ ವತಿಯಿಂದ ಆಯೋಜಿಸಿದ್ದ ‘ಅಖಂಡ ಭಾರತ ಸಂಕಲ್ಪ ದಿವಸ್’ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಅವರು, ಅಖಂಡ ಭಾರತ ಸಂಕಲ್ಪವು ರಾಜಕೀಯ ಅಧಿಕಾರ ಅಥವಾ ವೈಯಕ್ತಿಕ ಸಂಪತ್ತಿನ ಉದ್ದೇಶ ಹೊಂದಿಲ್ಲ. ಇತಿಹಾಸದಲ್ಲಿ ಕಳೆದುಕೊಂಡಿರುವ ಪ್ರದೇಶಗಳು ಮತ್ತು ದೇಶದ ವಿಭಜನೆಯ ಸಂದರ್ಭ ಎದುರಾದ ನೋವುಗಳನ್ನು ಸ್ಮರಿಸುವ ಉದ್ದೇಶ ಹೊಂದಿದೆ ಎಂದು ಹೇಳಿದರು.
ದೇಶ ವಿಭಜನೆಯ ಇತಿಹಾಸ ಸ್ಮರಿಸಿದ ಮಹಿಪಾಲ್
1947ರಲ್ಲಿ ಭಾರತ ಸ್ವಾತಂತ್ರ್ಯ ಪಡೆದ ಸಂದರ್ಭದಲ್ಲಿ ದೇಶ ವಿಭಜನೆಯಿಂದ ಹಲವು ರೀತಿಯ ನೋವುಗಳನ್ನು ಜನರು ಅನುಭವಿಸಿದರು. ವಿಭಜನೆಯ ಸಂದರ್ಭ ನಡೆದ ಘಟನೆಗಳ ಕುರಿತು ಮುಂದಿನ ಪೀಳಿಗೆಗೆ ಅರಿವು ಮೂಡಿಸುವ ಅಗತ್ಯವಿದೆ ಎಂದರು.
ಇತಿಹಾಸದಲ್ಲಿ ಭಾರತ ಕಳೆದುಕೊಂಡ ಪ್ರದೇಶಗಳು ಹಾಗೂ ಗಡಿ ವಿಚಾರಗಳ ಕುರಿತು ಮಾತನಾಡಿದ ಅವರು, ದೇಶದ ಏಕತೆ ಮತ್ತು ಅಖಂಡತೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಅಗತ್ಯ ಎಂದು ಪ್ರತಿಪಾದಿಸಿದರು.
ಇದನ್ನೂ ಓದಿ:
ಇತಿಹಾಸದ ಸತ್ಯಗಳನ್ನು ತಿಳಿಯಬೇಕು
ದೇಶ ವಿಭಜನೆಯ ಸಂದರ್ಭದಲ್ಲಿ ನಡೆದ ಘಟನೆಗಳನ್ನು ರಾಜಕೀಯ ಕಾರಣಗಳಿಂದ ಮರೆಮಾಚಲಾಗಿದೆ ಎಂಬ ಆರೋಪ ಮಾಡಿದ ಅವರು, ಇತಿಹಾಸದ ವಿವಿಧ ಆಯಾಮಗಳ ಕುರಿತು ಜನರು ತಿಳಿದುಕೊಳ್ಳಬೇಕು ಎಂದರು. ಅಖಂಡ ಭಾರತದ ಪರಿಕಲ್ಪನೆ ಮುಂದಿನ ದಿನಗಳಲ್ಲಿ ಸಾಕಾರಗೊಳ್ಳುವ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಪಂಜಿನ ಮೆರವಣಿಗೆ
ಕಾರ್ಯಕ್ರಮಕ್ಕೂ ಮುನ್ನ ಜಿಲ್ಲಾಧಿಕಾರಿ ಕಚೇರಿ ವೃತ್ತದಿಂದ ಆನೆ ಬಾಗಿಲಿನವರೆಗೆ ಪಂಜಿನ ಮೆರವಣಿಗೆ ನಡೆಯಿತು. ಸಂಸದ ಗೋವಿಂದ ಕಾರಜೋಳ ಹಾಗೂ ಮಾಜಿ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ ಮತ್ತು ಎಸ್.ಕೆ.ಬಸವರಾಜನ್ ಅವರು ಭಾರತಾಂಬೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಅಪಾರ ಸಂಖ್ಯೆಯ ಹಿಂದೂ ಬಾಂಧವರು ಮೆರವಣಿಗೆಯಲ್ಲಿ ಪಾಲ್ಗೊಂಡರು.
ಕಾರ್ಯಕ್ರಮದಲ್ಲಿ ಟೈಗರ್ ತಿಪ್ಪೇಸ್ವಾಮಿ, ವಿಶ್ವ ಹಿಂದೂ ಪರಿಷದ್ ಜಿಲ್ಲಾಧ್ಯಕ್ಷ ಅಶೋಕ್‌ಕುಮಾರ್, ಜಿಲ್ಲಾ ಕಾರ್ಯದರ್ಶಿ ಚನ್ನಕೇಶವ, ವಿಭಾಗ ಸಹ ಸಂಯೋಜಕ ಸಂದೀಪ್, ನಗರ ಉಪಾಧ್ಯಕ್ಷ ಭರತ್, ಬಜರಂಗದಳ ನಗರ ಸಂಯೋಜಕ ದೀಪಕ್‌ರಾಜ್, ಗ್ರಾಮಾಂತರ ಸಂಯೋಜಕ ದರ್ಶನ್ ಹಾಗೂ ವಿದ್ಯಾರ್ಥಿ ಪ್ರಮುಖ ದಿನೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.



