ಹೊಸದಿಗಂತ ಡಿಜಿಟಲ್ ಡೆಸ್ಕ್:
ದಿ ಹಂಡ್ರೆಡ್ ಲೀಗ್‌ನಲ್ಲಿ ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್ ತಂಡವು ಚಾಂಪಿಯನ್ ಆಗಿ ಹೊರಹೊಮ್ಮುವ ಮೂಲಕ ಹೊಸ ಇತಿಹಾಸ ಬರೆದಿದೆ. ಕ್ರಿಕೆಟ್‌ನ ಕಾಶಿ ಎಂದೇ ಪ್ರಸಿದ್ಧವಾಗಿರುವ ಲಾರ್ಡ್ಸ್ ಮೈದಾನದಲ್ಲಿ ನಡೆದ ರೋಮಾಂಚಕ ಫೈನಲ್ ಹೆಣೆತದಲ್ಲಿ ಟ್ರೆಂಟ್ ರಾಕೆಟ್ಸ್ ತಂಡವನ್ನು 5 ವಿಕೆಟ್‌ಗಳಿಂದ ಮಣಿಸಿದ ಮ್ಯಾಂಚೆಸ್ಟರ್ ಪಡೆ, ಚೊಚ್ಚಲ ಬಾರಿಗೆ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ. ಪಂದ್ಯದಲ್ಲಿ ಟಾಸ್ ಗೆದ್ದ ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್ ನಾಯಕ ಜೋಸ್ ಬಟ್ಲರ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದರು.
ಟ್ರೆಂಟ್ ರಾಕೆಟ್ಸ್ ಸವಾಲಿನ ಮೊತ್ತ
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಟ್ರೆಂಟ್ ರಾಕೆಟ್ಸ್, ನಿಗದಿತ 100 ಎಸೆತಗಳಲ್ಲಿ 8 ವಿಕೆಟ್ ನಷ್ಟಕ್ಕೆ 158 ರನ್ ಕಲೆಹಾಕಿತು. ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳ ಜವಾಬ್ದಾರಿಯುತ ಆಟ ಹಾಗೂ ಆಲ್ ರೌಂಡರ್‌ಗಳ ನೆರವಿನಿಂದ ತಂಡವು ಸ್ಪರ್ಧಾತ್ಮಕ ಮೊತ್ತವನ್ನು ಕಲೆಹಾಕುವಲ್ಲಿ ಯಶಸ್ವಿಯಾಯಿತು.
ಟಿಮ್ ಸೈಫರ್ಟ್ ದಾಖಲೆಯ ಅರ್ಧಶತಕ
159 ರನ್‌ಗಳ ಗುರಿ ಬೆನ್ನಟ್ಟಿದ ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್ ತಂಡಕ್ಕೆ ನ್ಯೂಝಿಲೆಂಡ್‌ನ ಆರಂಭಿಕ ಆಟಗಾರ ಟಿಮ್ ಸೈಫರ್ಟ್ ಬಿರುಸಿನ ಆರಂಭ ನೀಡಿದರು. ಎದುರಾಳಿ ಬೌಲರ್‌ಗಳ ವಿರುದ್ಧ ಆಕ್ರಮಣಕಾರಿ ಆಟವಾಡಿದ ಸೈಫರ್ಟ್, ಕೇವಲ 38 ಎಸೆತಗಳಲ್ಲಿ 7 ಸಿಕ್ಸರ್ ಹಾಗೂ 4 ಬೌಂಡರಿಗಳ ನೆರವಿನಿಂದ 72 ರನ್ ಸಿಡಿಸಿದರು. ಈ ಮೂಲಕ ‘ದಿ ಹಂಡ್ರೆಡ್’ ಫೈನಲ್ ಇತಿಹಾಸದಲ್ಲೇ ಅತ್ಯಂತ ವೇಗದ ಅರ್ಧಶತಕ ಬಾರಿಸಿದ ಹೆಗ್ಗಳಿಕೆಗೆ ಪಾತ್ರರಾದರು.
ಕೊನೆಯ ಓವರ್‌ಗಳ ರೋಚಕ ಘಟ್ಟ
ಮ್ಯಾಂಚೆಸ್ಟರ್ ಸುಲಭವಾಗಿ ಗೆಲ್ಲುವ ಹಂತದಲ್ಲಿದ್ದಾಗ, ಪಾಕಿಸ್ತಾನದ ವೇಗಿ ಮೊಹಮ್ಮದ್ ಅಮೀರ್ (29 ರನ್‌ಗೆ 3 ವಿಕೆಟ್) ಸತತ 6 ಡಾಟ್ ಬಾಲ್‌ಗಳನ್ನು ಎಸೆದು, ಹೆನ್ರಿಕ್ ಕ್ಲಾಸೆನ್ ಹಾಗೂ ಮೈಕೇಲ್ ಬ್ರೇಸ್‌ವೆಲ್ ವಿಕೆಟ್ ಪಡೆದು ಪಂದ್ಯಕ್ಕೆ ದೊಡ್ಡ ಟ್ವಿಸ್ಟ್ ನೀಡಿದರು. ಆದರೆ ಕೊನೆಯ 3 ಎಸೆತಗಳಲ್ಲಿ 3 ರನ್ ಅಗತ್ಯವಿದ್ದಾಗ, ಅನುಭವಿ ಆಟಗಾರ ಲಿಯಾಮ್ ಡಾಸನ್ ಸಿಕ್ಸರ್ ಬಾರಿಸುವ ಮೂಲಕ 98 ಎಸೆತಗಳಲ್ಲಿ 162 ರನ್ ಗಳಿಸಿ ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್ ತಂಡಕ್ಕೆ ಅದ್ಭುತ ಗೆಲುವು ತಂದಿತ್ತರು.
ಈ ಪಂದ್ಯವು ಆಟಗಾರರ ಶ್ರಮ, ತಂತ್ರಗಾರಿಕೆ ಹಾಗೂ ಕ್ರೀಡಾ ಸ್ಫೂರ್ತಿಗೆ ಸಾಕ್ಷಿಯಾಗಿದ್ದು, ಅಭಿಮಾನಿಗಳಿಗೆ ಮೈನವಿರೇಳಿಸುವ ರಸದೌತಣ ನೀಡಿತು.



