August 17, 2026
Monday, August 17, 2026
spot_img

‘ದಿಮಾಗಿ ನಕ್ಸಲ್’ ವಿವಾದ: ಪ್ರಧಾನಿ ಮೋದಿ ಹೇಳಿಕೆ ಸಮರ್ಥಿಸಿ ಮನ್ಮೋಹನ್ ಸಿಂಗ್ ಭಾಷಣ ನೆನಪಿಸಿದ ಕಿರಣ್ ರಿಜಿಜು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬಳಸಿದ್ದ “ದಿಮಾಗಿ ನಕ್ಸಲ್” ಎಂಬ ಪದದ ಕುರಿತು ರಾಜಕೀಯ ವಲಯದಲ್ಲಿ ಭಾರಿ ಚರ್ಚೆ ಆರಂಭವಾಗಿದೆ. ವಿರೋಧ ಪಕ್ಷಗಳ ಟೀಕೆಗೆ ತಿರುಗೇಟು ನೀಡಿರುವ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು, ಪ್ರಧಾನಿ ಮೋದಿ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಇದಕ್ಕಾಗಿ ಅವರು ಮಾಜಿ ಪ್ರಧಾನಿ ಡಾ. ಮನ್ಮೋಹನ್ ಸಿಂಗ್ ಅವರ 20 ವರ್ಷಗಳ ಹಳೆಯ ಹೇಳಿಕೆಯೊಂದನ್ನು ಉಲ್ಲೇಖಿಸಿದ್ದಾರೆ.

ಸಂಸದೀಯ ವ್ಯವಹಾರಗಳ ಸಚಿವ ಕಿರೆನ್ ರಿಜಿಜು ಅವರು ಸಾಮಾಜಿಕ ಜಾಲತಾಣವಾದ ‘X’ ನಲ್ಲಿ ಪೋಸ್ಟ್‌ ಒಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ, ನಕ್ಸಲಿಸಂ ಎಂಬುದು ನಮ್ಮ ದೇಶ ಎದುರಿಸುತ್ತಿರುವ ಅತ್ಯಂತ ದೊಡ್ಡ ಆಂತರಿಕ ಭದ್ರತಾ ಸವಾಲಾಗಿದೆ ಎಂದು ಮನ್ಮೋಹನ್ ಸಿಂಗ್ ಅವರು ಈ ಹಿಂದೆ ಹೇಳಿದ್ದ ಭಾಷಣವನ್ನು ರಿಜಿಜು ನೆನಪಿಸಿದ್ದಾರೆ. ಇದಕ್ಕಾಗಿ ಕಾಂಗ್ರೆಸ್ ಪಕ್ಷವು ಮಾಜಿ ಪ್ರಧಾನಿ ಡಾ. ಮನ್ಮೋಹನ್ ಸಿಂಗ್ ಅವರ ಕುಟುಂಬದ ಕ್ಷಮೆಯಾಚಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಪ್ರಧಾನಿ ಮೋದಿ ಹೇಳಿದ್ದೇನು?

ಸ್ವಾತಂತ್ರ್ಯ ದಿನದಂದು ಕೆಂಪುಕೋಟೆಯಿಂದ ಭಾಷಣ ಮಾಡಿದ್ದ ಪ್ರಧಾನಿ ಮೋದಿ, ಕಾಡಿನಲ್ಲಿ ಶಸ್ತ್ರಾಸ್ತ್ರ ಹಿಡಿದಿದ್ದ ನಕ್ಸಲರನ್ನು ದೇಶದಲ್ಲಿ ಮಟ್ಟ ಹಾಕಲಾಗಿದೆ. ಆದರೆ ದೇಶದ ವಿವಿಧ ಭಾಗಗಳಲ್ಲಿ ‘ದಿಮಾಗಿ ನಕ್ಸಲರು’ ಇದ್ದಾರೆ. ಅವರು ಯುವಕರನ್ನು ತಪ್ಪು ದಾರಿಗೆಳೆಯಲು ಮತ್ತು ಹಿಂಸಾಚಾರಕ್ಕೆ ಪ್ರಚೋದಿಸಲು ಕಾಯುತ್ತಿದ್ದಾರೆ. ಅಂತಹವರನ್ನು ಗುರುತಿಸಿ ಒಂಟಿಯಾಗಿಸಬೇಕಾಗಿದೆ ಎಂದು ಹೇಳಿದ್ದರು.

ಇದನ್ನೂ ಓದಿ:

ವಿರೋಧ ಪಕ್ಷಗಳ ಆಕ್ರೋಶ:

ಪ್ರಧಾನಿಯವರ ಈ ಹೇಳಿಕೆಯನ್ನು ವಿರೋಧ ಪಕ್ಷಗಳು ತೀವ್ರವಾಗಿ ಖಂಡಿಸಿವೆ. ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಮಾತನಾಡಿ, ಗೃಹ ಸಚಿವಾಲಯದ ಪ್ರಕಾರ ‘ಅರ್ಬನ್ ನಕ್ಸಲ್’ ಅಥವಾ ‘ದಿಮಾಗಿ ನಕ್ಸಲ್’ ಎಂಬುದಕ್ಕೆ ಯಾವುದೇ ಅಧಿಕೃತ ವ್ಯಾಖ್ಯಾನವಿಲ್ಲ. ಪ್ರಧಾನಿಯವರು ಕೇವಲ ತಮ್ಮ ರಾಜಕೀಯ ವಿರೋಧಿಗಳನ್ನು ಗುರಿಯಾಗಿಸಲು ಈ ಪದ ಬಳಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಮತ್ತೊಂದೆಡೆ ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಕೂಡ ಟ್ವೀಟ್ ಮಾಡಿದ್ದು, ʼಹೌದು, ನಾನು ದಿಮಾಗಿ ನಕ್ಸಲ್. ಏಕೆಂದರೆ ನಾನು ದೇಶಪ್ರೇಮಿ, ಅದಕ್ಕಾಗಿ ನನಗೆ ಹೆಮ್ಮೆಯಿದೆʼ ಎಂದು ತಿರುಗೇಟು ನೀಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !