August 17, 2026
Monday, August 17, 2026
spot_img

ಬೆಳಗಾವಿಯಲ್ಲಿ ನಾಗರಪಂಚಮಿ ಸಂಭ್ರಮ: ಉಮಾರಾಮೇಶ್ವರ ದೇವಸ್ಥಾನದಲ್ಲಿ ಶ್ರೀ ವಾಸುಕಿ ಪ್ರಾಣ ಪ್ರತಿಷ್ಠಾಪನೆ

ಹೊಸದಿಗಂತ ವರದಿ ಬೆಳಗಾವಿ:

ಬೆಳಗಾವಿ ತಾಲೂಕಿನ ಸುಕ್ಷೇತ್ರ ದತ್ತ ಮಹಾರಾಜರ ಪಂತ ಬಾಳೇಕುಂದ್ರಿ ಗ್ರಾಮದಲ್ಲಿ, ನಾಗರಪಂಚಮಿ ಹಬ್ಬದ ಅಂಗವಾಗಿ ಕದಲಿಪುರ ಉಮಾರಾಮೇಶ್ವರ ದೇವಸ್ಥಾನದಲ್ಲಿ, ಶ್ರೀ ವಾಸುಕಿ ಪ್ರತಿಷ್ಠಾಪನೆ ಹಾಗೂ ಪ್ರಾಣ ಪ್ರತಿಷ್ಠಾಪನೆ ಪೂಜಾ ಕಾರ್ಯಕ್ರಮವನ್ನು ಸೋಮವಾರ ಭಕ್ತಿಭಾವ ಹಾಗೂ ಧಾರ್ಮಿಕ ಶ್ರದ್ಧೆಯಿಂದ ನೆರವೇರಿಸಲಾಯಿತು.

ನಾಗರಪಂಚಮಿ ಪ್ರಯುಕ್ತ ದೇವಸ್ಥಾನದಲ್ಲಿ ಬೆಳಗ್ಗೆಯಿಂದಲೇ ವಿಶೇಷ ಪೂಜಾ ಕೈಂಕರ್ಯಗಳು ಹಾಗೂ ವಿವಿಧ ಧಾರ್ಮಿಕ ವಿಧಿವಿಧಾನಗಳು ಜರುಗಿದವು. ಶ್ರೀ ವಾಸುಕಿ ದೇವರ ಪ್ರತಿಷ್ಠಾಪನೆ ಹಾಗೂ ಪ್ರಾಣ ಪ್ರತಿಷ್ಠಾಪನೆಯ ಅಂಗವಾಗಿ ಅರ್ಚಕರು ಶಾಸ್ತ್ರೋಕ್ತವಾಗಿ ಪೂಜಾ ವಿಧಿಗಳನ್ನು ನೆರವೇರಿಸಿದರು. ದೇವಸ್ಥಾನಕ್ಕೆ ಆಗಮಿಸಿದ ಭಕ್ತರು ವಿಶೇಷ ಪೂಜೆಯಲ್ಲಿ ಪಾಲ್ಗೊಂಡು ನಾಗದೇವರಿಗೆ ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ದೇವಸ್ಥಾನದ ಆವರಣದಲ್ಲಿ ಧಾರ್ಮಿಕ ವಾತಾವರಣ ನಿರ್ಮಾಣವಾಗಿದ್ದು, ಭಕ್ತರು ಶ್ರೀ ಉಮಾರಾಮೇಶ್ವರ ದೇವರು ಹಾಗೂ ಶ್ರೀ ವಾಸುಕಿ ದೇವರ ದರ್ಶನ ಪಡೆದು ಪುನೀತರಾದರು. ನಾಗದೇವರ ಆರಾಧನೆಯ ಮೂಲಕ ಕುಟುಂಬ ಹಾಗೂ ಗ್ರಾಮದಲ್ಲಿ ಸುಖ, ಶಾಂತಿ, ಆರೋಗ್ಯ ಮತ್ತು ಸಮೃದ್ಧಿ ನೆಲೆಸಲಿ ಎಂಬ ಸಂಕಲ್ಪದೊಂದಿಗೆ ಪೂಜಾ ಕಾರ್ಯಕ್ರಮಗಳು ನೆರವೇರಿದವು.

ನಾಗರಪಂಚಮಿ ಹಬ್ಬವು ನಾಗದೇವರ ಆರಾಧನೆಗೆ ವಿಶೇಷ ಮಹತ್ವ ಹೊಂದಿದ್ದು, ಪ್ರಕೃತಿ, ಜೀವಜಾಲ ಹಾಗೂ ನಾಗದೇವರ ಮೇಲಿನ ಗೌರವವನ್ನು ಪ್ರತಿಬಿಂಬಿಸುತ್ತದೆ. ಈ ಹಿನ್ನೆಲೆಯಲ್ಲಿ ಶ್ರೀ ಉಮಾರಾಮೇಶ್ವರ ದೇವಸ್ಥಾನದಲ್ಲಿ ನಡೆದ ಶ್ರೀ ವಾಸುಕಿ ಪ್ರತಿಷ್ಠಾಪನೆ ಹಾಗೂ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮವು ಭಕ್ತರಲ್ಲಿ ವಿಶೇಷ ಆಧ್ಯಾತ್ಮಿಕ ಭಾವನೆ ಮೂಡಿಸಿತು.

ಇದನ್ನೂ ಓದಿ:

ಗ್ರಾಮದ ಸಮಸ್ತ ಜನತೆಗೆ ನಾಗದೇವರ ಕೃಪೆಯಿಂದ ಆರೋಗ್ಯ, ಆಯುಷ್ಯ, ಸುಖ, ಸಮೃದ್ಧಿ ಹಾಗೂ ಶ್ರೇಯಸ್ಸು ದೊರೆಯಲಿ ಎಂದು ಈ ಸಂದರ್ಭದಲ್ಲಿ ಪ್ರಾರ್ಥಿಸಲಾಯಿತು. ಅಲ್ಲದೆ, “ಶ್ರೀ ಉಮಾರಾಮೇಶ್ವರ ದೇವರ ಕೃಪೆ ಸದಾ ಎಲ್ಲರ ಮೇಲಿರಲಿ” ಎಂಬ ಆಶಯದೊಂದಿಗೆ ನಾಗರಪಂಚಮಿ ಆಚರಣೆಯನ್ನು ಭಕ್ತಿಪೂರ್ವಕವಾಗಿ ನೆರವೇರಿಸಲಾಯಿತು. ಬಳಿಕ ಮಧ್ಯಾಹ್ನದ ವೇಳೆ ಸಮಸ್ಥ ಗ್ರಾಮಸ್ಥರಿಗೆ ಮಹಾ ಪ್ರಸಾದ ವ್ಯವಸ್ಥೆಯನ್ನು ಕಲ್ಪಿಸಲಾಯಿತು.

ಈ ವೇಳೆ ಪೂಜಾ ಕಾರ್ಯಕ್ರಮದಲ್ಲಿ ಗ್ರಾಮದ ಭಕ್ತರು ಹಾಗೂ ಧಾರ್ಮಿಕ ಅಭಿಮಾನಿಗಳು ಭಾಗವಹಿಸಿ ಶ್ರೀ ವಾಸುಕಿ ದೇವರ ಆಶೀರ್ವಾದ ಪಡೆದುಕೊಂಡರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !