ಹೊಸದಿಗಂತ ವರದಿ ಬೆಳಗಾವಿ:
ಬೆಳಗಾವಿ ಮಹಾನಗರ ಪಾಲಿಕೆಯ ನಾಲ್ಕು ಪ್ರಮುಖ ಸ್ಥಾಯಿ ಸಮಿತಿಗಳ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಸೋಮವಾರ ಪಾಲಿಕೆಯ ಪರಿಷತ್ ಸಭಾ ಭವನದಲ್ಲಿ ನಡೆಯಿತು. ಚುನಾವಣೆಯಲ್ಲಿ ನಾಲ್ಕು ಸಮಿತಿಗಳ ಅಧ್ಯಕ್ಷ ಸ್ಥಾನಗಳಿಗೆ ತಲಾ ಒಂದೊಂದು ನಾಮಪತ್ರ ಸಲ್ಲಿಕೆಯಾಗಿದ್ದರಿಂದ, ಎಲ್ಲಾ ನಾಲ್ವರು ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾದ್ದಾರೆ.
ಮೇಯರ್ ಪ್ರೀತಿ ಕಾಮಕರ ಅವರ ಅಧ್ಯಕ್ಷತೆಯಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ತೆರಿಗೆ, ಹಣಕಾಸು ಹಾಗೂ ಆಫೀಲುಗಳ ಸ್ಥಾಯಿ ಸಮಿತಿ, ಆರೋಗ್ಯ, ಶಿಕ್ಷಣ ಹಾಗೂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ, ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ ಹಾಗೂ ಲೆಕ್ಕಗಳ ಸ್ಥಾಯಿ ಸಮಿತಿಗಳಿಗೆ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡಲಾಯಿತು.

ದಕ್ಷಿಣ ಮತಕ್ಷೇತ್ರಕ್ಕೆ ಮೂರು ಹಾಗೂ ಉತ್ತರ ಮತಕ್ಷೇತ್ರಕ್ಕೆ ಒಂದು ಅಧ್ಯಕ್ಷ ಸ್ಥಾನ ಹಂಚಿಕೆಯಾಗಿದ್ದು, ಅದರಂತೆ ತೆರಿಗೆ, ಹಣಕಾಸು ಹಾಗೂ ಆಫೀಲುಗಳ ಸ್ಥಾಯಿ ಸಮಿತಿಗೆ ರಮೇಶ ಮೈಲುಗೋಳ, ಆರೋಗ್ಯ, ಶಿಕ್ಷಣ ಹಾಗೂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಗೆ ರಾಜು ಬಾತಕಾಂಡೆ, ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿಗೆ ಶ್ರೇಯಸ್ ನಾಕಾಡಿ ಹಾಗೂ ಲೆಕ್ಕಗಳ ಸ್ಥಾಯಿ ಸಮಿತಿಗೆ ಸಾರಿಕಾ ಪಾಟೀಲ ಅವರು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಾಲ್ಕೂ ಸ್ಥಾನಗಳಿಗೆ ಸ್ಪರ್ಧೆಯಿಲ್ಲದೆ ಆಯ್ಕೆ ನಡೆದ ಹಿನ್ನೆಲೆಯಲ್ಲಿ ಚುನಾವಣಾ ಪ್ರಕ್ರಿಯೆ ಸರಳವಾಗಿ ಪೂರ್ಣಗೊಂಡಿತು. ನಾಮಪತ್ರ ಸಲ್ಲಿಕೆ ಮತ್ತು ಪರಿಶೀಲನೆಯ ಬಳಿಕ ಬೇರೆ ಯಾವುದೇ ಅಭ್ಯರ್ಥಿಗಳು ಕಣದಲ್ಲಿರದಿರುವುದನ್ನು ಖಚಿತಪಡಿಸಿಕೊಂಡು ನಾಲ್ವರನ್ನು ಅವಿರೋಧವಾಗಿ ಆಯ್ಕೆ ಮಾಡಿರುವುದಾಗಿ ಘೋಷಿಸಲಾಯಿತು.
ಇದನ್ನೂ ಓದಿ:
ಸ್ಥಾಯಿ ಸಮಿತಿಗಳು ಮಹಾನಗರ ಪಾಲಿಕೆಯ ಆಡಳಿತದಲ್ಲಿ ಪ್ರಮುಖ ಪಾತ್ರ ವಹಿಸುವ ಹಿನ್ನೆಲೆಯಲ್ಲಿ ನೂತನ ಅಧ್ಯಕ್ಷರ ಆಯ್ಕೆಗೆ ಮಹತ್ವ ಬಂದಿದೆ. ತೆರಿಗೆ ಮತ್ತು ಹಣಕಾಸು ಸಂಬಂಧಿತ ವಿಚಾರಗಳು, ಸಾರ್ವಜನಿಕ ಆರೋಗ್ಯ, ಶಿಕ್ಷಣ ಹಾಗೂ ಸಾಮಾಜಿಕ ನ್ಯಾಯ, ನಗರ ಯೋಜನೆ ಮತ್ತು ಅಭಿವೃದ್ಧಿ ಹಾಗೂ ಪಾಲಿಕೆಯ ಲೆಕ್ಕಪತ್ರಗಳಿಗೆ ಸಂಬಂಧಿಸಿದ ವಿಷಯಗಳ ಪರಿಶೀಲನೆ ಮತ್ತು ನಿರ್ಣಯ ಪ್ರಕ್ರಿಯೆಯಲ್ಲಿ ಈ ಸಮಿತಿಗಳು ಪ್ರಮುಖ ಜವಾಬ್ದಾರಿ ಹೊಂದಿವೆ.
ಮೇಯರ್ ಪ್ರೀತಿ ಕಾಮಕರ ಅವರ ಅಧ್ಯಕ್ಷತೆಯಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಉಪ ಮೇಯರ್ ಹನಮಂತ ಕೊಂಗಾಲಿ, ಪಾಲಿಕೆ ಆಯುಕ್ತ ಕಾರ್ತಿಕ ಎಂ., ಪರಿಷತ್ ಕಾರ್ಯದರ್ಶಿ ರಮೇಶ್ ಬಡಿಗೇರ, ನಾಲ್ಕೂ ಸ್ಥಾಯಿ ಸಮಿತಿಗಳ ಸದಸ್ಯರು ಹಾಗೂ ಪಾಲಿಕೆ ಸಿಬ್ಬಂದಿ ಉಪಸ್ಥಿತರಿದ್ದರು.



