ಹೊಸದಿಗಂತ ವರದಿ ಬೆಳಗಾವಿ:
ಬೆಳಗಾವಿ ನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ಮಾಳಮಾರುತಿ ಪೊಲೀಸ್ ಠಾಣೆಯ ʼಆ್ಯಂಟಿ ಸ್ಟಾಬಿಂಗ್ ಸ್ಕ್ವಾಡ್ʼ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ಅಕ್ರಮವಾಗಿ ಆಯುಧಗಳನ್ನು ಹೊಂದಿದ್ದ ಯುವಕನೊಬ್ಬನನ್ನು ಬಂಧಿಸಲಾಗಿದೆ.
ಗಾಂಧಿನಗರದ ಅಮಿನಗಲ್ಲಿಯಲ್ಲಿ ಪೊಲೀಸರು ಪರಿಶೀಲನೆ ನಡೆಸುತ್ತಿದ್ದ ವೇಳೆ ರಹಾನ ಇಸ್ಮಾಯಿಲ್ ನದಾಫ (20) ಎಂಬಾತನ ಬಳಿ ಕಾನೂನುಬಾಹಿರವಾಗಿ ಕಬ್ಬಿಣದ ಕೊಡಲಿ, ಚಾಕು ಹಾಗೂ ಕೊಯ್ತಾ ಸೇರಿದಂತೆ ವಿವಿಧ ಆಯುಧಗಳು ಪತ್ತೆಯಾಗಿವೆ.
ಮಾಳಮಾರುತಿ ಠಾಣೆಯ ಪಿಎಸ್ಐ ಆನಂದ ಆದಗೊಂಡ ಹಾಗೂ ಸಿಬ್ಬಂದಿ ಆರೋಪಿಯನ್ನು ಬೈಕ್ ಮತ್ತು ಆಯುಧಗಳ ಸಮೇತ ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಭಾರತೀಯ ಶಸ್ತ್ರಾಸ್ತ್ರ ಕಾಯ್ದೆ, 1959ರ ಕಲಂ 27(1) ಹಾಗೂ ಕರ್ನಾಟಕ ಪೊಲೀಸ್ ಕಾಯ್ದೆ, 1963ರ ಕಲಂ 97ರ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.
ಇದನ್ನೂ ಓದಿ:
ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಪಿಎಸ್ಐ ಆನಂದ ಆದಗೊಂಡ ಹಾಗೂ ಪೊಲೀಸ್ ಸಿಬ್ಬಂದಿಯ ಕಾರ್ಯವನ್ನು ಪೊಲೀಸ್ ಆಯುಕ್ತರು ಮತ್ತು ಡಿಸಿಪಿಗಳು ಶ್ಲಾಘಿಸಿದ್ದಾರೆ.



