August 18, 2026
Tuesday, August 18, 2026
spot_img

ಬಿಜೆಪಿ ಹೊಸ ರಾಷ್ಟ್ರೀಯ ತಂಡ ಪ್ರಕಟ: ಸ್ಮೃತಿ ಇರಾನಿ, ಪಿಯೂಷ್ ಗೋಯಲ್‌ಗೆ ಬಿಗ್ ಪವರ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಭಾರತೀಯ ಜನತಾ ಪಕ್ಷವು (ಬಿಜೆಪಿ) ಸೋಮವಾರ ತನ್ನ ಹೊಸ ರಾಷ್ಟ್ರೀಯ ಪದಾಧಿಕಾರಿಗಳ ತಂಡವನ್ನು ಅಧಿಕೃತವಾಗಿ ಪ್ರಕಟಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲಿ ‘ವಿಕಸಿತ ಭಾರತ’ದ ಸಂಕಲ್ಪವನ್ನು ಸಾಕಾರಗೊಳಿಸಲು ಅನುಭವ ಮತ್ತು ಯುವ ಶಕ್ತಿಯ ಮಿಶ್ರಣದೊಂದಿಗೆ ಈ ಹೊಸ ತಂಡವನ್ನು ರಚಿಸಲಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ತಿಳಿಸಿದ್ದಾರೆ.

ಈ ಹೊಸ ಸಾಂಸ್ಥಿಕ ಬದಲಾವಣೆಯಲ್ಲಿ ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರನ್ನು ಬಿಜೆಪಿಯ ಹೊಸ ರಾಷ್ಟ್ರೀಯ ಖಜಾಂಚಿಯಾಗಿ ನೇಮಕ ಮಾಡಲಾಗಿದೆ. ಇನ್ನು ಇತ್ತೀಚಿನ ಲೋಕಸಭೆ ಚುನಾವಣೆಯಲ್ಲಿ ಹಿನ್ನೆಡೆ ಅನುಭವಿಸಿದ್ದ ಪ್ರಭಾವಿ ನಾಯಕಿ ಸ್ಮೃತಿ ಇರಾನಿ ಅವರಿಗೆ ಉತ್ತರ ಪ್ರದೇಶದ ಉಸ್ತುವಾರಿಯೊಂದಿಗೆ ‘ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ’ ಹುದ್ದೆಯನ್ನು ನೀಡಿ ಹೈಕಮಾಂಡ್ ದೊಡ್ಡ ಜವಾಬ್ದಾರಿ ವಹಿಸಿದೆ.

ಮಹಿಳಾ ಶಕ್ತಿ ಹಾಗೂ ಪ್ರಾದೇಶಿಕ ಸಮತೋಲನ:

ಬಿಜೆಪಿಯ ಹೊಸ ತಂಡದಲ್ಲಿ ಮಹಿಳಾ ನಾಯಕಿಯರಿಗೆ ಭಾರಿ ಪ್ರಾಮುಖ್ಯತೆ ನೀಡಲಾಗಿದೆ. ಪ್ರಕಟಿಸಲಾದ 13 ರಾಷ್ಟ್ರೀಯ ಉಪಾಧ್ಯಕ್ಷರ ಪೈಕಿ ವಸುಂಧರಾ ರಾಜೇ, ಡಿ. ಪುರಂದೇಶ್ವರಿ ಸೇರಿದಂತೆ 6 ಮಂದಿ ಮಹಿಳೆಯರಾಗಿದ್ದಾರೆ. ಇದರೊಂದಿಗೆ ನಾಲ್ವರು ಮಹಿಳಾ ಕಾರ್ಯದರ್ಶಿಗಳು ಮತ್ತು ಒಬ್ಬರು ಮಹಿಳಾ ಪ್ರಧಾನ ಕಾರ್ಯದರ್ಶಿ ತಂಡದಲ್ಲಿದ್ದಾರೆ. ಅಲ್ಪಸಂಖ್ಯಾತ ಸಮುದಾಯವನ್ನು ಸೆಳೆಯಲು ಮುಸ್ಲಿಂ ಸಮುದಾಯದ ಇಬ್ಬರು ನಾಯಕರಿಗೂ ಸ್ಥಾನ ನೀಡಲಾಗಿದೆ.

ದಕ್ಷಿಣ ಮತ್ತು ಪೂರ್ವ ಭಾರತದ ರಾಜ್ಯಗಳಲ್ಲಿ ಪಕ್ಷವನ್ನು ಬಲಪಡಿಸಲು ಕೇರಳ, ಪಶ್ಚಿಮ ಬಂಗಾಳ, ಒಡಿಶಾ ಮತ್ತು ಈಶಾನ್ಯ ರಾಜ್ಯಗಳ ನಾಯಕರಿಗೆ ಪ್ರಮುಖ ಜವಾಬ್ದಾರಿಗಳನ್ನು ನೀಡಲಾಗಿದೆ. ಆಮ್ ಆದ್ಮಿ ಪಕ್ಷ ತೊರೆದಿದ್ದ ಸಂದೀಪ್ ಪಾಠಕ್ ಅವರಿಗೆ ರಾಷ್ಟ್ರೀಯ ಕಾರ್ಯದರ್ಶಿ ಹುದ್ದೆ ನೀಡಲಾಗಿದ್ದರೆ, ಸಂಬಿತ್ ಪಾತ್ರ ಅವರನ್ನು ಈಶಾನ್ಯ ಪ್ರದೇಶದ ಸಂಯೋಜಕರನ್ನಾಗಿ ನೇಮಿಸಲಾಗಿದೆ.

ಬಿ.ಎಲ್. ಸಂತೋಷ್ ಹುದ್ದೆ ಭದ್ರ:

ಕನ್ನಡಿಗ ಬಿ.ಎಲ್. ಸಂತೋಷ್ ಅವರು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿ ಮುಂದುವರಿದಿದ್ದು, ಅವರಿಗೆ ಸಹಾಯಕರಾಗಿ ಜಂಟಿ ಪ್ರಧಾನ ಕಾರ್ಯದರ್ಶಿಗಳಾದ ಶಿವಪ್ರಕಾಶ್ ಮತ್ತು ಸೌದನ್ ಸಿಂಗ್ ಕಾರ್ಯನಿರ್ವಹಿಸಲಿದ್ದಾರೆ.

ಇದನ್ನೂ ಓದಿ:

ಡಿಜಿಟಲ್ ಮತ್ತು ಮೀಡಿಯಾ ವಾರ್‌ಗೆ ಹೊಸ ಟೀಮ್:

ಮತದಾರರನ್ನು ನೇರವಾಗಿ ತಲುಪಲು ಡಿಜಿಟಲ್ ವೇದಿಕೆಗಳು ಅತಿ ಮುಖ್ಯವಾಗಿರುವುದರಿಂದ, ಬಿಜೆಪಿ ತನ್ನ ಮಾಧ್ಯಮ ವಿಭಾಗಕ್ಕೂ ಭಾರೀ ಸರ್ಜರಿ ಮಾಡಿದೆ. ಅನಿಲ್ ಬಲೂನಿ ಅವರನ್ನು ಮುಖ್ಯ ಮಾಧ್ಯಮ ಸಂಯೋಜಕರನ್ನಾಗಿ ನೇಮಿಸಲಾಗಿದೆ. ಇವರಿಗೆ ಸಹಾಯ ಮಾಡಲು ಆಶಿಶ್ ಉಷಾ ಅಗರ್ವಾಲ್, ಪ್ರದೀಪ್ ಭಂಡಾರಿ ಮತ್ತು ಸಿದ್ಧಾರ್ಥ್ ಯಾದವ್ ಅವರನ್ನು ಜಂಟಿ ಸಂಯೋಜಕರನ್ನಾಗಿ ಮಾಡಲಾಗಿದೆ. ಸಾಮಾಜಿಕ ಜಾಲತಾಣದ ಸಂಪೂರ್ಣ ಜವಾಬ್ದಾರಿಯನ್ನು ದೀಪಕ್ ಮ್ಹಾಸ್ಕಿ ಅವರಿಗೆ ನೀಡಲಾಗಿದ್ದು, ಪ್ರೀತಿ ಗಾಂಧಿ, ಅರುಣ್ ಯಾದವ್ ಸೇರಿದಂತೆ ಪ್ರಮುಖರು ಇವರಿಗೆ ಸಾಥ್ ನೀಡಲಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !