ಹೊಸದಿಗಂತ ವರದಿ ದಾವಣಗೆರೆ:
ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣದ ಆರೋಪ ಹೊತ್ತಿರುವ ಸಚಿವ ಬಿ.ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ಜಿಲ್ಲಾ ಘಟಕ ಹಾಗೂ ಎಸ್ಟಿ ಮೋರ್ಚಾದಿಂದ ನಗರದಲ್ಲಿ ಸೋಮವಾರ ಧರಣಿ ಸತ್ಯಾಗ್ರಹ ನಡೆಸಲಾಯಿತು.
ನಗರದ ಪಾಲಿಕೆ ಮುಂಭಾಗದ ಉಪ ವಿಭಾಗಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಪಕ್ಷದ ಮುಖಂಡರು, ಕಾರ್ಯಕರ್ತರು ಹಗರಣದ ಪ್ರಮುಖ ರೂವಾರಿಯನ್ನು ಸಚಿವ ಸಂಪುಟದಲ್ಲಿ ಸೇರಿಸಿಕೊಂಡಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಮಾತನಾಡಿ, ಅಧಿಕಾರಕ್ಕೆ ಬಂದು ಮೂರೂವರೆ ವರ್ಷವಾಗುತ್ತಿದ್ದರೂ, ಈವರೆಗೆ ರಾಜ್ಯವನ್ನು ಲೂಟಿ ಮಾಡಿದ್ದೇ ಕಾಂಗ್ರೆಸ್ ಸರ್ಕಾರದ ಸಾಧನೆಯಾಗಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ, ಮೈಸೂರಿನ ಮುಡಾ ನಿವೇಶನ ಹಗರಣ ಹೀಗೆ ಬರೀ ಭ್ರಷ್ಟಾಚಾರ, ಹಗರಣದಲ್ಲೇ ಕಾಂಗ್ರೆಸ್ ಸರ್ಕಾರ ಮಿಂದೇಳುತ್ತಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮವನ್ನು ಬಿ.ಎಸ್.ಯಡಿಯೂರಪ್ಪ ಸಿಎಂ ಆಗಿದ್ದಾಗ ಸ್ಥಾಪಿಸಿದ್ದರು. ಪರಿಶಿಷ್ಟ ಪಂಗಡದ ಜನರ ಅನುಕೂಲ, ಅಭ್ಯುದಯಕ್ಕಾಗಿ ಸ್ಥಾಪಿಸಿದ ನಿಗಮದ ಹಣವನ್ನು ಕಾಂಗ್ರೆಸ್ ಸರ್ಕಾರ ಹೇಗೆಲ್ಲಾ ದುರ್ಬಳಕೆ ಮಾಡಿಕೊಂಡಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ತುಳಿತಕ್ಕೊಳಗಾದ ಜನರ ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ಲೂಟಿ ಹೊಡೆದ ಬಿ.ನಾಗೇಂದ್ರರನ್ನು ಸಚಿವ ಸಂಪುಟದಿಂದ ತಕ್ಷಣ ಕೈಬಿಡಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ:
ಜಗಳೂರು ಮಾಜಿ ಶಾಸಕ ಹೆಚ್.ಪಿ.ರಾಜೇಶ, ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ಲೋಕಿಕೆರೆ ನಾಗರಾಜ, ಪಕ್ಷದ ಜಿಲ್ಲಾಧ್ಯಕ್ಷ ಮೆಳ್ಳೆಕಟ್ಟೆ ನಾಗರಾಜ, ಬಿಜೆಪಿ ಎಸ್ಟಿ ಮೋರ್ಚಾ ಜಿಲ್ಲಾಧ್ಯಕ್ಷ ಚನ್ನಗಿರಿ ಲೋಹಿತಕುಮಾರ, ಮುಖಂಡರಾದ ಮಾಡಾಳ ಮಲ್ಲಿಕಾರ್ಜುನ, ಚಂದ್ರಶೇಖರ ಪೂಜಾರ, ಎನ್.ರಾಜಶೇಖರ, ಬಿ.ಎಂ.ಸತೀಶ ಕೊಳೇನಹಳ್ಳಿ, ಆರ್.ಲಕ್ಷ್ಮಣ, ಐರಣಿ ಅಣ್ಣೇಶ, ಆರ್.ಎಲ್.ಶಿವಪ್ರಕಾಶ, ಧನಂಜಯ ಕಡ್ಲೇಬಾಳು, ಬಿ.ಜಿ.ಅಜಯಕುಮಾರ, ಆಲೂರು ನಿಂಗರಾಜ, ಅಶ್ವಿನಿ ಕೃಷ್ಣ, ರಾಕೇಶ ಬಜರಂಗಿ, ಹೆಚ್.ಪಿ.ವಿಶ್ವಾಸ, ತಾರೇಶ ನಾಯ್ಕ, ಶಂಕರಗೌಡ ಬಿರಾದಾರ, ಕರಿಬಸಪ್ಪ ಮಟ್ಟಿಕಲ್ಲು, ಸಂತೋಷ ಪೈಲ್ವಾನ, ಡಿ.ಹನುಮಂತಪ್ಪ, ಅಕ್ಕಿ ಪ್ರಭು ಕಲ್ಬುರ್ಗಿ, ಟಿಪ್ಪು ಸುಲ್ತಾನ್, ನಾಸಿರ್, ರಾಜು ನೀಲಗುಂದ, ಆನಂದ, ಗುರುರಾಜ, ಅಕ್ಕಿ ಬಸಣ್ಣ, ಸಚಿನ್, ಶೇಖರ್, ಬೆಳ್ಳೂಡಿ ಮಂಜುನಾಥ, ಸಚಿನ್ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.



