ಹೊಸದಿಗಂತ ವರದಿ ವಿಜಯಪುರ:
ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಚೌಡಿಹಾಳ ರಸ್ತೆಯ ಪೂಜಾರಿ ವಸ್ತಿ ತೋಟದ ಬಳಿ ಇತ್ತೀಚೆಗೆ ನಡೆದಿದ್ದ ನಿವೃತ್ತ ಶಿಕ್ಷಕನ ಭೀಕರ ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಹೆತ್ತ ತಂದೆಯನ್ನೇ ಸ್ವಂತ ಮಗಳು ತನ್ನ ಪ್ರಿಯಕರನೊಂದಿಗೆ ಸೇರಿ ಹತ್ಯೆ ಮಾಡಿರುವ ಆಘಾತಕಾರಿ ಸತ್ಯ ಬಯಲಾಗಿದ್ದು, ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಪ್ರಿಯಾಂಕ ಸುರೇಶ ಮಸಳಿ (35) ಹಾಗೂ ಸಂತೋಷ ಸಿಂಧೆ (32) ಬಂಧಿತ ಆರೋಪಿಗಳು. 62 ವರ್ಷದ ನಿವೃತ್ತ ಶಿಕ್ಷಕ ಸಿದ್ದಪ್ಪ ಅಂಜುಟಗಿ ಅವರ ಮೃತದೇಹ ಚೌಡಿಹಾಳ ರಸ್ತೆಯ ಪಕ್ಕದಲ್ಲಿ ಪತ್ತೆಯಾಗಿತ್ತು. ಆರಂಭದಲ್ಲಿ ಅಪರಿಚಿತ ದುಷ್ಕರ್ಮಿಗಳು ಹತ್ಯೆ ನಡೆಸಿ ಪರಾರಿಯಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದರು. ಆದರೆ ಸಿದ್ದಪ್ಪ ಅವರ ಹಿರಿಯ ಪುತ್ರಿ ನಿಖಿತಾ ನೀಡಿದ ದೂರಿನ ಆಧಾರದ ಮೇಲೆ ತನಿಖೆ ಕೈಗೊಂಡಾಗ ಪ್ರಕರಣದ ಹಿಂದಿನ ಸತ್ಯ ಬಯಲಾಗಿದೆ.
ಸಿದ್ದಪ್ಪ ಅವರು ಎರಡು ವರ್ಷಗಳ ಹಿಂದೆ ನಿವೃತ್ತರಾಗಿದ್ದು, ನಿವೃತ್ತಿ ವೇತನದ ಹಣದ ಜತೆಗೆ ಗ್ರಾಮದಲ್ಲಿ ಆಸ್ತಿಯನ್ನೂ ಹೊಂದಿದ್ದರು. ಈ ಆಸ್ತಿ ವಿಚಾರವಾಗಿ ತಂದೆ-ಮಗಳ ನಡುವೆ ಆಗಾಗ್ಗೆ ಗಲಾಟೆ ನಡೆಯುತ್ತಿತ್ತು ಎನ್ನಲಾಗಿದೆ. ಮತ್ತೊಂದೆಡೆ, ಸಿದ್ದಪ್ಪ ಅವರ ಪುತ್ರಿ ಪ್ರಿಯಾಂಕಾ ಅವರ ಪತಿ ಸುರೇಶ್ ಮಸಳಿ ಕೊರೋನಾ ಅವಧಿಯಲ್ಲಿ ಮೃತಪಟ್ಟಿದ್ದರು. ಬಳಿಕ ಕೆಲಕಾಲ ವಿಜಯಪುರದಲ್ಲಿ ವಾಸವಿದ್ದ ಪ್ರಿಯಾಂಕಾಗೆ ಆಟೋ ಚಾಲಕ ಸಂತೋಷ ಸಿಂಧೆ ಎಂಬಾತನೊಂದಿಗೆ ಸಂಬಂಧ ಬೆಳೆದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಿಯಾಂಕಾ ಮತ್ತು ಸಂತೋಷ ನಡುವಿನ ಸಂಬಂಧಕ್ಕೆ ಸಿದ್ದಪ್ಪ ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೆ, ಆಸ್ತಿಯಲ್ಲಿ ಪಾಲು ನೀಡುವುದಿಲ್ಲ ಎಂದು ಹೇಳಿದ್ದರೆನ್ನಲಾಗಿದೆ. ಇದರಿಂದ ಪ್ರಿಯಾಂಕಾ ತಂದೆಯ ಮೇಲೆ ಆಕ್ರೋಶಗೊಂಡಿದ್ದಳು ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಆಗಸ್ಟ್ 15ರಂದು ಆಸ್ತಿ ವಿಚಾರವಾಗಿ ಪ್ರಿಯಾಂಕಾ ಮತ್ತು ಸಿದ್ದಪ್ಪ ನಡುವೆ ಗಲಾಟೆ ನಡೆದಿದ್ದು, ಅದು ವಿಕೋಪಕ್ಕೆ ತಿರುಗಿದೆ. ಬಳಿಕ ಪ್ರಿಯಾಂಕಾ ತನ್ನ ಪ್ರಿಯಕರ ಸಂತೋಷನಿಗೆ ಮನೆಗೆ ಬರುವಂತೆ ಕರೆ ಮಾಡಿದ್ದಾಳೆ. ರಾತ್ರಿ ಸಂತೋಷ ತನ್ನ ಸ್ನೇಹಿತ ಗುರುರಾಜ ಬಿರಾದಾರ್ ಜೊತೆ ಪ್ರಿಯಾಂಕಾ ಮನೆಗೆ ಬಂದಿದ್ದಾನೆ ಎನ್ನಲಾಗಿದೆ.
ಪೊಲೀಸರ ಪ್ರಕಾರ, ಸಂತೋಷ ಹಾಗೂ ಗುರುರಾಜ ಸೇರಿ ಸಿದ್ದಪ್ಪ ಅವರನ್ನು ಮೊದಲು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ಬಳಿಕ ದೊಡ್ಡ ಕಲ್ಲಿನಿಂದ ಹಲ್ಲೆ ನಡೆಸಿ ಹತ್ಯೆ ಮಾಡಲಾಗಿದೆ. ನಂತರ ಮೃತದೇಹವನ್ನು ರಸ್ತೆ ಬದಿಯಲ್ಲಿ ಬಿಸಾಕಿ ಆರೋಪಿಗಳು ಪರಾರಿಯಾಗಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ.
ಇದನ್ನೂ ಓದಿ:
ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ರಿ ಪ್ರಿಯಾಂಕಾ ಹಾಗೂ ಆಕೆಯ ಪ್ರಿಯಕರ ಸಂತೋಷ ಸಿಂಧೆ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಮತ್ತೋರ್ವ ಆರೋಪಿ ಗುರುರಾಜ ಬಿರಾದಾರ್ ನಾಪತ್ತೆಯಾಗಿದ್ದು, ಆತನ ಬಂಧನಕ್ಕಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.
ಆಸ್ತಿ ವಿವಾದ ಹಾಗೂ ಅನೈತಿಕ ಸಂಬಂಧಕ್ಕೆ ತಂದೆ ವಿರೋಧವೇ ಕೊಲೆಗೆ ಪ್ರಮುಖ ಕಾರಣಗಳಾಗಿವೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಮಾಹಿತಿ ನೀಡಿದ್ದಾರೆ.



