ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕದ ಸಿಂಗಂ ಎಂದೇ ಖ್ಯಾತರಾಗಿದ್ದ ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ಅವರು ಭಾರತೀಯ ಜನತಾ ಪಕ್ಷದ (BJP) ಜತೆಗಿನ ತಮ್ಮ ಆರು ವರ್ಷಗಳ ಸುದೀರ್ಘ ರಾಜಕೀಯ ನಂಟನ್ನು ಕಳಚಿಕೊಂಡಿರುವುದು ದಕ್ಷಿಣ ಭಾರತದ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿದೆ. 2020 ರಲ್ಲಿ ಅಧಿಕೃತವಾಗಿ ಕಮಲ ಪಾಳಯಕ್ಕೆ ಸೇರ್ಪಡೆಗೊಂಡು, ತಮಿಳುನಾಡು ಬಿಜೆಪಿಯ ಅಧ್ಯಕ್ಷರಾಗಿ ಪಕ್ಷದ ಬಲವರ್ಧನೆಗೆ ತಳಮಟ್ಟದಿಂದ ಶ್ರಮಿಸಿದ್ದ ಅಣ್ಣಾಮಲೈ, ಈಗ ಪಕ್ಷದಿಂದ ಹೊರಬಂದ ಬೆನ್ನಲ್ಲೇ ಬಿಜೆಪಿಯ ತಪ್ಪು-ಒಪ್ಪುಗಳನ್ನು ಜಗಜ್ಜಾಹೀರು ಮಾಡುತ್ತಿದ್ದಾರೆ.
ಅಮಿತ್ ಶಾ ನಿವಾಸದಲ್ಲಿ ಮೀಟಿಂಗ್ ಮಾಡಿದ್ದಕ್ಕೆ ಬೇಸರ
ಬಿಜೆಪಿಯ ದೆಹಲಿ ಕೇಂದ್ರಿತ ನಿರ್ಧಾರಗಳನ್ನು ತೀವ್ರವಾಗಿ ಖಂಡಿಸಿದ ಅಣ್ಣಾಮಲೈ, ತಮಿಳುನಾಡು ಬಿಜೆಪಿಯ ಕೋರ್ ಕಮಿಟಿ ಸಭೆಯನ್ನು ದೆಹಲಿಯಲ್ಲಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ನಿವಾಸದಲ್ಲಿ ನಡೆಸಲಾಯಿತು. ಇದು ನನಗೆ ತೀವ್ರ ಬೇಸರ ತರಿಸಿತು. ತಮಿಳುನಾಡಿನ ಮಣ್ಣಿನ ನಿರ್ಧಾರಗಳು ಇದೇ ಮಣ್ಣಿನಲ್ಲಿ ಆಗಬೇಕೇ ಹೊರತು, ದೆಹಲಿಯ ನಾಯಕರ ಮನೆಯಲ್ಲಲ್ಲ, ಎಂದು ಗುಡುಗಿದ್ದಾರೆ.
ಎಲ್ಲವೂ ಗುಜರಾತ್‌ಗೇ ಹೋದರೆ ಹೇಗೆ?
ಕೇಂದ್ರ ಸರ್ಕಾರದ ಅಭಿವೃದ್ಧಿ ಮಾದರಿಯನ್ನು ಪ್ರಶ್ನಿಸಿದ ಅಣ್ಣಾಮಲೈ, ದೆಹಲಿ ನಾಯಕರ ಆಡಳಿತ ಕೇವಲ ಗುಜರಾತ್ ಕೇಂದ್ರಿತವಾಗಿದೆ. ದೇಶದ ಎಲ್ಲಾ ದೊಡ್ಡ ಬಂಡವಾಳಗಳು, ಎಐ ಕಂಪನಿಗಳು ಗುಜರಾತ್‌ಗೆ ಹೋಗುತ್ತಿವೆ. ಅಷ್ಟೇ ಅಲ್ಲದೆ, 2030ರ ಕಾಮನ್‌ವೆಲ್ತ್ ಗೇಮ್ಸ್, ಒಲಿಂಪಿಕ್ ಗೇಮ್ಸ್ ಎಲ್ಲವೂ ಅಹಮದಾಬಾದ್‌ಗೇ ಹೋಗುತ್ತಿವೆ. ಇಡೀ ದೇಶದ ಅಭಿವೃದ್ಧಿಯನ್ನು ಕೇವಲ ಗುಜರಾತ್ ಮಾದರಿಯನ್ನಾಗಿ ಮಾಡಲು ಸಾಧ್ಯವಿಲ್ಲ, ಜನರು ಇದನ್ನು ಗಮನಿಸುತ್ತಿದ್ದಾರೆ, ಎಂದು ನೇರವಾಗಿ ಟೀಕಿಸಿದ್ದಾರೆ.
ಮೇಕೆದಾಟು ವಿಷಯದಲ್ಲಿ ಕೇಂದ್ರದ ದ್ವಂದ್ವ ನೀತಿ:
ಮೇಕೆದಾಟು ಅಣೆಕಟ್ಟು ಯೋಜನೆಯ ವಿಷಯದಲ್ಲಿ ಕೇಂದ್ರದ ಬಿಜೆಪಿ ಸರ್ಕಾರ ತನ್ನ ನಿಲುವನ್ನು ಬದಲಾಯಿಸಿದ್ದನ್ನು ಅಣ್ಣಾಮಲೈ ಪ್ರಶ್ನಿಸಿದ್ದಾರೆ. 2021ರಲ್ಲಿ ಇದೇ ಕೇಂದ್ರ ಸರ್ಕಾರ ಮೇಕೆದಾಟು ಕಟ್ಟಲು ಕರ್ನಾಟಕಕ್ಕೆ ಹಕ್ಕಿಲ್ಲ ಎಂದಿತ್ತು. ಆದರೆ 2026ರಲ್ಲಿ ಪಾರ್ಲಿಮೆಂಟ್‌ನಲ್ಲಿ ನಿಂತು ಕರ್ನಾಟಕ ಅಣೆಕಟ್ಟು ಕಟ್ಟಬಹುದು, ಕೇಂದ್ರದ ಅನುಮತಿ ಬೇಕಿಲ್ಲ ಎನ್ನುತ್ತಿದೆ. ಕರ್ನಾಟಕದ ಚುನಾವಣೆ ಮೊದಲು ಬರುತ್ತದೆ ಎಂಬ ಕಾರಣಕ್ಕೆ ಇಂತಹ ರಾಜಕೀಯ ತಂತ್ರ ಮಾಡಲಾಗುತ್ತಿದೆ, ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ:
ಕೂಟ ರಾಜಕೀಯಕ್ಕೆ ವಿರೋಧ ಇತ್ತು:
2026ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಎಐಎಡಿಎಂಕೆ ಜತೆ ಮೈತ್ರಿ ಮಾಡಿಕೊಳ್ಳುವ ಹೈಕಮಾಂಡ್ ನಿರ್ಧಾರಕ್ಕೆ ಅಣ್ಣಾಮಲೈ ಅವರ ತೀವ್ರ ವಿರೋಧವಿತ್ತು. ಅವರು ಒಂಟಿಯಾಗಿ ಸ್ಪರ್ಧಿಸಲು ಬಯಸಿದ್ದರು. ಮೈತ್ರಿ ಮಾಡಿಕೊಂಡಿದ್ದರಿಂದಲೇ ಬಿಜೆಪಿಯ ವೋಟ್ ಶೇರ್ ಶೇಕಡಾ 11 ರಿಂದ 2.9 ಕ್ಕೆ ಕುಸಿಯಿತು ಎಂದು ಅವರು ನೆನಪಿಸಿದ್ದಾರೆ.
ಇದೀಗ ಬಿಜೆಪಿಯಿಂದ ಸಂಪೂರ್ಣವಾಗಿ ಹೊರಬಂದಿರುವ ಅವರು, ತಮಿಳುನಾಡಿನ ಪ್ರಾದೇಶಿಕ ಆಕಾಂಕ್ಷೆಗಳಿಗಾಗಿ ‘ವಿ ದಿ ಲೀಡರ್ಸ್’ (We the Leaders) ಎಂಬ ಹೊಸ ಸಂಘಟನೆಯನ್ನು ಆರಂಭಿಸಿ ತಳಮಟ್ಟದಿಂದ ಹೋರಾಟ ಮುಂದುವರಿಸಿದ್ದಾರೆ. ಆದರೆ, ತಮಗೆ ಪ್ರಧಾನಿ ಮೋದಿ ಅವರ ಮೇಲೆ ಸದಾ ಗೌರವ ಇರಲಿದ್ದು, ತಮ್ಮ ಸಂಘಟನೆ ಎಂದಿಗೂ ರಾಷ್ಟ್ರೀಯವಾದಿ ಚಿಂತನೆಯನ್ನೇ ಹೊಂದಿರುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.



