ಹೊಸದಿಗಂತ ಡಿಜಿಟಲ್ ಡೆಸ್ಕ್:
ಹನೂರು ಎನ್ಕೌಂಟರ್ಗೆ ಸಂಬಂಧಿಸಿದಂತೆ ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಇದು ತಮಿಳರ ಹತ್ಯಾಕಾಂಡ ಎಂದು ಹೇಳಿದ್ದರು. ಇದಕ್ಕೆ ಸಿಎಂ ಡಿ.ಕೆ. ಶಿವಕುಮಾರ್ ಉತ್ತರ ನೀಡಿದ್ದು, ನಮ್ಮ ರಾಜ್ಯದ ಆಡಳಿತ ಹಾಗೂ ಕಾನೂನು ಸುವ್ಯವಸ್ಥೆ ವಿಚಾರವಾಗಿ ಬೇರೆ ರಾಜ್ಯಗಳು ಮಾತನಾಡುವ ಅವಶ್ಯಕತೆ ಇಲ್ಲ. ಇತರರ ಮಧ್ಯಪ್ರವೇಶ ಅನಾವಶ್ಯಕ ಎಂದಿದ್ದಾರೆ.
ನಾನು ತಮಿಳುನಾಡಿನ ಯಾವುದೇ ವಿಚಾರಕ್ಕೆ ತಲೆ ಹಾಕಿಲ್ಲ. ಹಾಗೆಯೇ ತಮಿಳುನಾಡು ಸಿಎಂ ಕೂಡ ನಮ್ಮ ವಿಚಾರಕ್ಕೆ ತಲೆ ಹಾಕಬಾರದು. ರಾಜ್ಯದ ಮುಖ್ಯಮಂತ್ರಿಗೆ ರಾಜ್ಯವನ್ನು ಹೇಗೆ ನೋಡಿಕೊಳ್ಳಬೇಕು ಎನ್ನುವುದು ಗೊತ್ತಿರುತ್ತದೆ. ನಮ್ಮ ರಾಜ್ಯದ ರಕ್ಷಣೆ ಬಗ್ಗೆ ಇತರರ ಕಾಳಜಿ ಅನಾವಶ್ಯಕ. ಆಡಳಿತದ ಬಗ್ಗೆ ಹಸ್ತಕ್ಷೇಪ ಬೇಡ ಎಂದು ಖಡಕ್ ಆಗಿ ಹೇಳಿದ್ದಾರೆ.
ಸಿಎಂ ವಿಜಯ್ ಏನೆಲ್ಲಾ ಮಾತನಾಡಿದ್ದಾರೆ ಗೊತ್ತಿದೆ. ಇದಕ್ಕೆ ಪ್ರತಿಕ್ರಿಯೆ ನೀಡೋದಿಲ್ಲ. ತಮಿಳುನಾಡು ನಾಯಕರು ಅವರ ರಾಜ್ಯದ ಅಭಿವೃದ್ಧಿ ಕೆಲಸ ಮಾಡಲಿ. ನಮ್ಮ ರಾಜ್ಯದ ಕೆಲಸ ನಾವು ಮಾಡ್ತೇವೆ ಎಂದಿದ್ದಾರೆ.
ಹನೂರು ಘಟನೆ ಕುರಿತು ಭಾನುವಾರ ತಮಿಳುನಾಡು ಮುಖ್ಯಮಂತ್ರಿ ವಿಜಯ್ ಟ್ವೀಟ್ ಮಾಡಿದ್ದರು. ಕರ್ನಾಟಕದ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ತಮಿಳಿಗರೇ ವಾಸಿಸುವ ಗ್ರಾಮದ ಆ್ಯಂಟೋನಿ ಸಾಮಿ, ಜಾನ್ ರೋಸ್ ಪೀಟರ್ ಮತ್ತು ಕುಮಾರ್ ಆ.15ರಂದು ಅರಣ್ಯ ಅಧಿಕಾರಿಗಳ ಗುಂಡಿನ ದಾಳಿಗೆ ಬಲಿಯಾಗಿದ್ದು ಹೃದಯವಿದ್ರಾವಕ ಘಟನೆ. ಈ ಹತ್ಯಾಕಾಂಡವನ್ನ ನಾನು ಅತ್ಯಂತ ಬಲವಾಗಿ ಖಂಡಿಸುತ್ತೇನೆ. ಘಟನೆ ಕುರಿತು ಕರ್ನಾಟಕದ ಅರಣ್ಯ ಅಧಿಕಾರಿಗಳು ನೀಡಿರುವ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದು ವಿಜಯ್ ಪೋಸ್ಟ್ ಮಾಡಿದ್ರು.



