ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದಿನ ಆಧುನಿಕ ಯುಗದಲ್ಲೂ ಭಾರತದ ಗ್ರಾಮೀಣ ಭಾಗಗಳಲ್ಲಿ ಕೋಟ್ಯಂತರ ಕುಟುಂಬಗಳು ಅಡುಗೆಗಾಗಿ ಮಣ್ಣಿನ ಒಲೆಗಳನ್ನೇ ಅವಲಂಬಿಸಿವೆ. ಇದರಿಂದ ಹೊರಬರುವ ದಟ್ಟವಾದ ಹೊಗೆ ಗ್ರಾಮೀಣ ಮಹಿಳೆಯರು ಮತ್ತು ಮಕ್ಕಳ ಶ್ವಾಸಕೋಶದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಈ ಸಮಸ್ಯೆಗೆ ಒಡಿಶಾದ ಯುವ ಉದ್ಯಮಿ ಅನುಪ್ ಪೈಕರೇ ಅವರು ತಮ್ಮ ‘ನ್ಯೂರಪ್ ಟೆಕ್ ಸೊಲ್ಯೂಷನ್ಸ್’ (Newrup Tech Solutions) ಸಂಸ್ಥೆಯ ಮೂಲಕ ‘ಚುಲಿವ್’ (Chuliv) ಎಂಬ ಅದ್ಭುತ ಸ್ಮಾರ್ಟ್ ಸಾಧನವನ್ನು ಕಂಡುಹಿಡಿದಿದ್ದಾರೆ. ಈ ವಿಶಿಷ್ಟ ಆವಿಷ್ಕಾರವು ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ಪ್ರದರ್ಶನಗೊಂಡು ದೇಶದ ಗಮನ ಸೆಳೆದಿದೆ.
ರಾಷ್ಟ್ರಪತಿ ಭವನದಲ್ಲಿ ಗೌರವ
ದೇಶಾದ್ಯಂತ ಆಯ್ಕೆಯಾದ 26 ಅತ್ಯುತ್ತಮ ಆವಿಷ್ಕಾರಗಳಲ್ಲಿ ‘ಚುಲಿವ್’ ಒಂದಾಗಿದ್ದು, ವೇದಿಕೆಯ ಮೇಲೆ ಪ್ರದರ್ಶಿಸಲು ಆಯ್ಕೆಯಾದ ಕೇವಲ ಇಬ್ಬರಲ್ಲಿ ಅನುಪ್ ಒಬ್ಬರಾಗಿದ್ದಾರೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಅಜ್ಜಿಯ ನೆನಪಿನಲ್ಲಿ ಆವಿಷ್ಕಾರ
ಅನುಪ್ ಅವರ ಅಜ್ಜಿ ಚಿಕ್ಕ ವಯಸ್ಸಿನಲ್ಲೇ ಒಲೆಯ ಹೊಗೆಯಿಂದಾಗಿ ಶ್ವಾಸಕೋಶದ ಕಾಯಿಲೆಗೆ ತುತ್ತಾಗಿ ಮೃತಪಟ್ಟಿದ್ದರು. ಈ ವೈಯಕ್ತಿಕ ನಷ್ಟವೇ ಅನುಪ್ ಅವರಿಗೆ ಈ ಸಂಶೋಧನೆ ಮಾಡಲು ಪ್ರೇರಣೆಯಾಯಿತು ಈ ವೇಳೆ ಎಂದು ಸ್ಮರಿಸಿದ್ದಾರೆ.
ಇದು ಹೇಗೆ ಕೆಲಸ ಮಾಡುತ್ತದೆ?
ಚುಲಿವ್ ಎಂಬುದು ಮಣ್ಣಿನ ಒಲೆಗೆ ಸುಲಭವಾಗಿ ಅಳವಡಿಸಬಹುದಾದ ಒಂದು ಸಣ್ಣ ಏರ್ ಬ್ಲೋವರ್. ಒಲೆ ಉರಿಯುವಾಗ ಉಂಟಾಗುವ ತಾಪವನ್ನು ಇದು ಯಾಂತ್ರಿಕ ಶಕ್ತಿಯಾಗಿ ಪರಿವರ್ತಿಸುತ್ತದೆ. ಇದರಿಂದ ಸಾಧನದ ಒಳಗಿರುವ ಸಣ್ಣ ಫ್ಯಾನ್ ತಾನಾಗಿಯೇ ತಿರುಗಲು ಪ್ರಾರಂಭಿಸಿ, ಒಲೆಯೊಳಗೆ ಸಮಾನವಾಗಿ ಗಾಳಿಯನ್ನು ಪಂಪ್ ಮಾಡುತ್ತದೆ. ಪರಿಣಾಮವಾಗಿ, ಮಹಿಳೆಯರು ಒಲೆಗೆ ಬಾಯಿಂದ ಅಥವಾ ಕೊಳವೆಯಿಂದ ಗಾಳಿ ಊದುವ ಶ್ರಮ ತಪ್ಪುತ್ತದೆ.
ಅಂತಾರಾಷ್ಟ್ರೀಯ ಮನ್ನಣೆ
ಚುಲಿವ್ ಕೇವಲ ಭಾರತದಲ್ಲಷ್ಟೇ ಅಲ್ಲದೆ ಅಮೆರಿಕದ ಬೋಸ್ಟನ್‌ನಲ್ಲಿ ನಡೆದ ಬಿಜಿನೆಸ್ ಪಿಚ್-ಎ-ಥಾನ್‌ನಲ್ಲೂ ಪ್ರದರ್ಶನಗೊಂಡು ವಿದೇಶಿ ಹೂಡಿಕೆದಾರರ ಗಮನ ಸೆಳೆದಿದೆ. ಅಮೆರಿಕದಲ್ಲಿ ಬಾರ್ಬೆಕ್ಯೂ ಮತ್ತು ಗ್ರಿಲ್ಲಿಂಗ್ ವಲಯದಲ್ಲಿ ಇದಕ್ಕೆ ಭಾರಿ ಬೇಡಿಕೆ ವ್ಯಕ್ತವಾಗಿದೆ. ಇದರೊಂದಿಗೆ, ಕಾರ್ಖಾನೆಗಳ ಚಿಮಣಿಗಳಿಂದ ವ್ಯರ್ಥವಾಗುವ ಶಾಖವನ್ನು ಬಳಸಿ ವಿದ್ಯುತ್ ಉತ್ಪಾದಿಸುವ ದೊಡ್ಡ ತಂತ್ರಜ್ಞಾನದ ಮೇಲೂ ಅನುಪ್ ತಂಡ ಕೆಲಸ ಮಾಡುತ್ತಿದೆ.
ಇದನ್ನೂ ಓದಿ:
ಬೆಲೆ ಮತ್ತು ಲಭ್ಯತೆ
ಸದ್ಯ ಚುಲಿವ್‌ನ ಶೇ. 90 ರಷ್ಟು ಬಿಡಿಭಾಗಗಳನ್ನು ಭಾರತದಲ್ಲೇ ತಯಾರಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಸಂಪೂರ್ಣ ‘ಮೇಡ್ ಇನ್ ಇಂಡಿಯಾ’ ಉತ್ಪನ್ನವಾಗಿಸಲು ಸಿದ್ಧತೆ ನಡೆದಿದೆ. ಪ್ರಸ್ತುತ ಇದರ ಬೆಲೆ ಸುಮಾರು 900 ರೂಪಾಯಿಗಳಾಗಿದ್ದು, ಸರ್ಕಾರದ ಸಿಎಸ್‌ಆರ್ (CSR) ಯೋಜನೆಗಳ ಸಹಾಯದಿಂದ ಕೇವಲ 300 ರೂಪಾಯಿಗಳಿಗೆ ಗ್ರಾಮೀಣ ಮಹಿಳೆಯರಿಗೆ ತಲುಪಿಸುವ ಗುರಿ ಹೊಂದಲಾಗಿದೆ. ತೀವ್ರ ತರಹದ ಬಿಸಿಲು, ಮಳೆ ಮತ್ತು ಧೂಳನ್ನು ತಡೆದುಕೊಳ್ಳುವಂತೆ ವಿನ್ಯಾಸಗೊಳಿಸಲಾದ ಈ ಸಾಧನವು 2026ರ ಕೊನೆಯ ವೇಳೆಗೆ ಮಾರುಕಟ್ಟೆಗೆ ಅಧಿಕೃತವಾಗಿ ಲಗ್ಗೆ ಇಡಲಿದೆ.



