August 18, 2026
Tuesday, August 18, 2026
spot_img

ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ವಿಜಯ್-ತ್ರಿಶಾ ಸಲ್ಯೂಟ್ ವಿವಾದ: ತಮಿಳುನಾಡು ಸಿಎಂ ವಿರುದ್ಧ ಡಿಎಂಕೆ ವ್ಯಂಗ್ಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರ ನೇತೃತ್ವದಲ್ಲಿ ನಡೆದ ಮೊದಲ ಅಧಿಕೃತ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮವು ಈಗ ದೊಡ್ಡ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಚೆನ್ನೈನ್‌ ಫೋರ್ಟ್ ಸೇಂಟ್ ಜಾರ್ಜ್‌ನಲ್ಲಿ ನಡೆದ ಧ್ವಜಾರೋಹಣದ ವೇಳೆ ಮುಂಭಾಗದ ಸಾಲಿನಲ್ಲಿ ನಟಿ ತ್ರಿಶಾ ಕೃಷ್ಣನ್ ಅವರಿಗೆ ಆಸನ ಕಲ್ಪಿಸಿದ್ದು ಮತ್ತು ಸಿಎಂ ವಿಜಯ್ ಹಾಗೂ ತ್ರಿಶಾ ಪರಸ್ಪರ ಸಲ್ಯೂಟ್ ಮಾಡಿಕೊಂಡಿದ್ದನ್ನು ವಿರೋಧ ಪಕ್ಷವಾದ ಡಿಎಂಕೆ ಖಂಡಿಸಿದೆ.

ಶಿಷ್ಟಾಚಾರ ಉಲ್ಲಂಘನೆ ಆರೋಪ

 ಡಿಎಂಕೆ ಪಕ್ಷವು ತಮ್ಮ ಅಧಿಕೃತ ಪತ್ರಿಕೆಯ ಸಂಪಾದಕೀಯದಲ್ಲಿ ಮುಖ್ಯಮಂತ್ರಿ ವಿಜಯ್ ವಿರುದ್ಧ ಭಾರಿ ಆಕ್ರೋಶ ಹೊರಹಾಕಿದೆ. ಸ್ವಾತಂತ್ರ್ಯ ದಿನಾಚರಣೆಯಂದು ಧ್ವಜಾರೋಹಣ ಮಾಡಿದ ಮುಖ್ಯಮಂತ್ರಿ ವಿಜಯ್ ಅವರ ಘನತೆ ಗಾಳಿಯಲ್ಲಿ ತೂರಲ್ಪಟ್ಟಿದೆ. ಯಾವುದೇ ನಾಚಿಕೆ ಅಥವಾ ಹಿಂಜರಿಕೆಯಿಲ್ಲದೆ ಅಧಿಕೃತ ಕಾರ್ಯಕ್ರಮದ ಮುಂಭಾಗದ ಸಾಲಿನಲ್ಲಿ ನಟಿಯೊಬ್ಬರನ್ನು ಕೂರಿಸಿ, ಇಬ್ಬರೂ ಸಲ್ಯೂಟ್ ವಿನಿಮಯ ಮಾಡಿಕೊಂಡ ದೃಶ್ಯವನ್ನು ಅವರಿಗೆ ವೋಟ್ ಹಾಕಿದ ಜನರೇ ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇಂತಹ ಅಸಭ್ಯತೆಯನ್ನು ಬಹಿರಂಗವಾಗಿ ಮಾಡಿ ಅದನ್ನೇ ಸಮರ್ಥಿಸಿಕೊಳ್ಳುವ ವರ್ಗಕ್ಕೆ ವಿಜಯ್ ಸೇರಿದ್ದಾರೆ ಎಂದು ಕಟುವಾಗಿ ಬರೆದಿದ್ದಾರೆ.

ಒಂದು ಪವಿತ್ರವಾದ ರಾಷ್ಟ್ರೀಯ ಹಬ್ಬದ ದಿನದಂದು ನಟಿಯೊಬ್ಬರನ್ನು ಕರೆತಂದು ಸಲ್ಯೂಟ್ ಹೊಡೆಯುವ ನಾಟಕವನ್ನು ಸ್ವತಃ ವಿಜಯ್ ಅವರ ಟಿವಿಕೆ ಪಕ್ಷದ ಮತದಾರರೇ ಒಪ್ಪುತ್ತಿಲ್ಲ, ಇನ್ನು ಸಾರ್ವಜನಿಕರು ಹೇಗೆ ಒಪ್ಪುತ್ತಾರೆ? ಎಂದು ಡಿಎಂಕೆ ಪ್ರಶ್ನಿಸಿದೆ. ಅಲ್ಲದೆ, ಕೇವಲ ಮೂರೇ ತಿಂಗಳಲ್ಲಿ ವಿಜಯ್ ಅವರಿಗೆ ತಮ್ಮ ಜನಪ್ರಿಯತೆ ಕುಸಿಯುವ ಭಯ ಶುರುವಾಗಿದೆ ಎಂದು ವ್ಯಂಗ್ಯವಾಡಿದೆ.

ಟ್ವಿಟರ್‌ನಲ್ಲಿ ವೈರಲ್ ಆಗಿದ್ದ ವಿಡಿಯೋ

ಆಗಸ್ಟ್ 15 ರಂದು ನಡೆದ ಈ ಕಾರ್ಯಕ್ರಮದಲ್ಲಿ ನಟಿ ತ್ರಿಶಾ ಅವರು ಹಳದಿ ಬಣ್ಣದ ಸೀರೆ ಧರಿಸಿ ಸಿಎಂ ವಿಜಯ್ ಅವರ ತಂದೆ ಎಸ್‌ಎ ಚಂದ್ರಶೇಖರ್ ಮತ್ತು ತಾಯಿ ಶೋಭಾ ಚಂದ್ರಶೇಖರ್ ಅವರ ಪಕ್ಕದಲ್ಲೇ ಕುಳಿತಿದ್ದರು. ಸಿಎಂ ವಿಜಯ್ ಅವರು ಜೀಪ್‌ನಲ್ಲಿ ಪರೇಡ್ ವೀಕ್ಷಣೆ ಮಾಡುತ್ತಾ ಸಾಗುವಾಗ, ತ್ರಿಶಾ ಗೌರವಪೂರ್ವಕವಾಗಿ ಸಲ್ಯೂಟ್ ಮಾಡಿದ್ದರು ಮತ್ತು ಸಿಎಂ ಕೂಡ ನಗುಮೊಗದಿಂದಲೇ ಮರಳಿ ಸಲ್ಯೂಟ್ ಮಾಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿತ್ತು.

ಇದನ್ನೂ ಓದಿ:

ವಿಜಯ್ ಭಾಷಣದ ವಿವರ

ಇದೇ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಸಿಎಂ ವಿಜಯ್, ತಮಿಳುನಾಡನ್ನು ಲಂಚ ಮತ್ತು ಭ್ರಷ್ಟಾಚಾರದಿಂದ ಮುಕ್ತಗೊಳಿಸುವುದು ನಮ್ಮ ಸರ್ಕಾರದ ಮೊದಲ ಆದ್ಯತೆಯಾಗಿದೆ. ಈ 376 ವರ್ಷಗಳ ಹಳೆಯ ಕೋಟೆಯ ಮೇಲೆ 80ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ಮಾಡಲು ಅವಕಾಶ ನೀಡಿದ ತಮಿಳುನಾಡಿನ ಜನತೆಗೆ ಧನ್ಯವಾದಗಳು ಎಂದು ಹೇಳಿದ್ದರು. ಪ್ರಸ್ತುತ ಈ ಸಲ್ಯೂಟ್ ವಿವಾದ ಇಡೀ ತಮಿಳುನಾಡು ರಾಜಕೀಯದಲ್ಲಿ ಭಾರಿ ಸಂಚಲನ ಮೂಡಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !