ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಫಿಲಿಪೈನ್ಸ್‌ನ ಬಂದರು ನಗರಿ ಜಾಂಬೋಂಗಾದಲ್ಲಿರುವ ಪ್ರತಿಷ್ಠಿತ ಅಟೆನಿಯೊ ಡಿ ಜಾಂಬೋಂಗಾ ವಿಶ್ವವಿದ್ಯಾಲಯದ ಪ್ರೌಢಶಾಲಾ ಆವರಣದಲ್ಲಿ ಮಂಗಳವಾರ ಭೀಕರ ದುರಂತವೊಂದು ಸಂಭವಿಸಿದೆ. 9ನೇ ತರಗತಿಯ ವಿದ್ಯಾರ್ಥಿಯೊಬ್ಬ ತನ್ನ ಇಬ್ಬರು ಸಹಪಾಠಿಗಳ ಮೇಲೆ ಗುಂಡಿನ ದಾಳಿ ನಡೆಸಿ, ಒಬ್ಬನನ್ನು ಕೊಂದ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅತ್ಯಂತ ಆಘಾತಕಾರಿ ವಿಷಯವೆಂದರೆ, ಆರೋಪಿ ವಿದ್ಯಾರ್ಥಿಯು ತನ್ನ ದೇಹದ ಮೇಲೆ ಧರಿಸಿದ್ದ ಕ್ಯಾಮೆರಾ ಮೂಲಕ ಈ ಇಡೀ ಭೀಕರ ಕೃತ್ಯವನ್ನು ಫೇಸ್‌ಬುಕ್ ಲೈವ್‌ನಲ್ಲಿ ನೇರ ಪ್ರಸಾರ ಮಾಡಿದ್ದಾನೆ.
ಘಟನೆಯ ವಿವರ
ಪೊಲೀಸರು ನೀಡಿರುವ ಪ್ರಾಥಮಿಕ ವರದಿಯ ಪ್ರಕಾರ, ಮೊಹಮ್ಮದ್ ಮಾಯೆಲ್ ಜಲಾನಿ ಎಂಬ 9ನೇ ತರಗತಿಯ ವಿದ್ಯಾರ್ಥಿ ಎರಡು ಪಿಸ್ತೂಲ್‌ಗಳೊಂದಿಗೆ ಶಾಲಾ ಆವರಣಕ್ಕೆ ನುಗ್ಗಿದ್ದನು. ಮೊದಲು ತರಗತಿಯಲ್ಲಿದ್ದ ಶಿಕ್ಷಕರೊಬ್ಬರ ಮೇಲೆ ಗುಂಡು ಹಾರಿಸಿದನಾದರೂ ಅವರು ಅದೃಷ್ಟವಶಾತ್ ಪಾರಾಗಿದ್ದಾರೆ. ನಂತರ ಕಟ್ಟಡದ 4ನೇ ಮಹಡಿಗೆ ತೆರಳಿ 10ನೇ ತರಗತಿಯ ವಿದ್ಯಾರ್ಥಿಯೊಬ್ಬನಿಗೆ ಗುಂಡಿಕ್ಕಿ ಕೊಂದಿದ್ದಾನೆ. ಈ ಘಟನೆಯಲ್ಲಿ ಇತರ ಇಬ್ಬರು ಗಾಯಗೊಂಡಿದ್ದಾರೆ. ಕೃತ್ಯ ಎಸಗಿದ ತಕ್ಷಣ 5ನೇ ಮಹಡಿಗೆ ಓಡಿಹೋದ ವಿದ್ಯಾರ್ಥಿ, ಅಲ್ಲಿಂದ ಕೆಳಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಗೇಮಿಂಗ್ ಇತಿಹಾಸದ ತನಿಖೆ
ಆಂತರಿಕ ಸಚಿವ ಜೊನ್ವಿಕ್ ರೆಮುಲ್ಲಾ ಅವರು ಈ ಬಗ್ಗೆ ಮಾತನಾಡಿ, ವಿದ್ಯಾರ್ಥಿಯು ಮೆಟ್ಟಿಲು ಹತ್ತುವ ಸಮಯದಿಂದಲೇ ಫೇಸ್‌ಬುಕ್ ಲೈವ್ ಆರಂಭಿಸಿದ್ದನು, ಆದರೆ ಅದರ ಕೆಲವು ತುಣುಕುಗಳು ಮಾತ್ರ ಲಭ್ಯವಾಗಿವೆ. ಅವನು ಈ ನಿರ್ಧಾರ ತೆಗೆದುಕೊಳ್ಳಲು ಕಾರಣವೇನು ಎಂಬುದನ್ನು ಪತ್ತೆಹಚ್ಚಲು ಆತನ ಆನ್‌ಲೈನ್ ಗೇಮಿಂಗ್ ಇತಿಹಾಸ ಮತ್ತು ಚಾಟ್ ಹಿಸ್ಟರಿಯನ್ನು ಸೈಬರ್ ವಿಭಾಗದ ಮೂಲಕ ಸೂಕ್ಷ್ಮವಾಗಿ ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:
ತಂದೆಯ ವಿರುದ್ಧ ಕ್ರಮ:
ಆರೋಪಿ ವಿದ್ಯಾರ್ಥಿ ಬಳಸಿದ ಒಂದು ಪಿಸ್ತೂಲ್ ಆತನ ತಂದೆಗೆ ಸೇರಿದ್ದಾಗಿದೆ. ಆತನ ತಂದೆ ಜಾಂಬೋಂಗಾದಲ್ಲಿ ಕಸ್ಟಮ್ಸ್ ಬ್ಯೂರೋ ಪೊಲೀಸ್ ಕಮಾಂಡರ್ ಆಗಿ ಕೆಲಸ ಮಾಡುತ್ತಿದ್ದಾರೆ. ಸರ್ಕಾರ ನೀಡಿದ ಪಿಸ್ತೂಲನ್ನು ಸುರಕ್ಷಿತವಾಗಿ ಇಡದ ಕಾರಣಕ್ಕಾಗಿ ತಂದೆಯನ್ನು ಸದ್ಯ ಅಮಾನತುಗೊಳಿಸಲಾಗಿದೆ. ಘಟನೆಯ ನಂತರ ಶಾಲೆಯಲ್ಲಿ ಭೀತಿಯ ವಾತಾವರಣ ನಿರ್ಮಾಣವಾಗಿದ್ದು, ನೂರಾರು ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ ಮತ್ತು ನಾಳೆ ಬುಧವಾರದವರೆಗೆ ಶಾಲೆಯ ಎಲ್ಲಾ ತರಗತಿಗಳನ್ನು ರದ್ದುಗೊಳಿಸಲಾಗಿದೆ.



