ಹೊಸದಿಗಂತ ವರದಿ ತುಮಕೂರು:
ಒಂದೇ ಮನೆಯಲ್ಲಿ ವಾಸವಾಗಿದ್ದ ಅಣ್ಣನನ್ನು ತಮ್ಮನೇ ಕೊಲೆ ಮಾಡಿ ಶೌಚಾಲಯದ ಪಿಟ್ ಗುಂಡಿಯಲ್ಲಿ ಶವ ಹಾಕಿ ಮುಚ್ಚಿರುವ ಘಟನೆ ಕುಣಿಗಲ್ ತಾಲೂಕಿನ ಹುಲಿಯೂರುದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯ ಬೆನವಾರ ಗ್ರಾಮದಲ್ಲಿ ನಡೆದಿದೆ.
ಕುಣಿಗಲ್ ತಾಲೂಕಿನ ಅಮೃತೂರು ಹೋಬಳಿ ಬೆನವಾರ ಗ್ರಾಮದ ರಾಜಣ್ಣ ಅಲಿಯಾಸ್ ಬಾಂಬೆ ರಾಜಣ್ಣ (70) ಕೊಲೆಯಾದವರು. ಮಾಜಿ ಗ್ರಾಮ ಪಂಚಾಯಿತಿ ಸದಸ್ಯರಾಗಿದ್ದ ಅವರ ತಮ್ಮ ರಾಮದಾಸ್ (65) ಮೇಲೆ ಕೊಲೆ ಆರೋಪ ಕೇಳಿಬಂದಿದೆ. ಶನಿವಾರವೇ ಕೊಲೆ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ರಾಜಣ್ಣ ಅವರು ಈ ಹಿಂದೆ ಬಾಂಬೆ ಹಾಗೂ ಬೆಂಗಳೂರಿನಲ್ಲಿ ವಾಸವಾಗಿದ್ದರು. ಬಳಿಕ ಹುಲಿಯೂರುದುರ್ಗದ ಬಾರ್‌ನಲ್ಲಿ ಕೆಲಸ ಮಾಡುತ್ತಿದ್ದಾಗ ಬಿದ್ದು ಕಾಲು ಮುರಿದುಕೊಂಡಿದ್ದರು. ಕಳೆದ ಎರಡು ತಿಂಗಳಿಂದ ತಮ್ಮ ರಾಮದಾಸ್ ಜೊತೆ ಒಂದೇ ಮನೆಯಲ್ಲಿ ವಾಸವಾಗಿದ್ದರು.
ಇದನ್ನೂ ಓದಿ:
ಇಬ್ಬರ ಕುಟುಂಬದವರು ಬೇರೆಡೆ ವಾಸವಾಗಿದ್ದು, ಊರಿನಲ್ಲಿದ್ದ ತಂಗಿ ಪದ್ಮ ಇಬ್ಬರಿಗೂ ಊಟ ನೀಡುತ್ತಿದ್ದರು. ಭಾನುವಾರ ಊಟ ನೀಡಲು ತೆರಳಿದ್ದ ಪದ್ಮ ಅವರಿಗೆ ರಾಮದಾಸ್, ರಾಜಣ್ಣ ಅವರನ್ನು ಬಸ್ ಹತ್ತಿಸಿ ಕಳುಹಿಸಿರುವುದಾಗಿ ತಿಳಿಸಿದ್ದಾನೆ. ಇದರಿಂದ ಅನುಮಾನಗೊಂಡ ಪದ್ಮ ಹಾಗೂ ಅವರ ಪತಿ ಕೃಷ್ಣಪ್ಪ, ಗ್ರಾಮದ ಮುಖಂಡರೊಂದಿಗೆ ಮಂಗಳವಾರ ಮನೆಗೆ ತೆರಳಿ ಪರಿಶೀಲಿಸಿದಾಗ ಶೌಚಾಲಯದ ಪಿಟ್ ಗುಂಡಿಯಲ್ಲಿ ಶವ ಮುಚ್ಚಿರುವುದು ಬೆಳಕಿಗೆ ಬಂದಿದೆ.
ಪದ್ಮ ನೀಡಿದ ದೂರಿನ ಮೇರೆಗೆ ಹುಲಿಯೂರುದುರ್ಗ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಆರೋಪ ಕೇಳಿಬಂದಿರುವ ರಾಮದಾಸ್ ಮಂಗಳವಾರ ಬೆಳಗ್ಗೆಯಿಂದ ಗ್ರಾಮದಿಂದ ಕಾಣೆಯಾಗಿದ್ದಾನೆ ಎಂದು ತಿಳಿದುಬಂದಿದೆ.



