ಹೊಸದಿಗಂತ ವರದಿ ದಾವಣಗೆರೆ:
ಅನೈತಿಕ ಸಂಬಂಧಕ್ಕೆ ಪತಿ ಅಡ್ಡಿಯಾಗಿದ್ದಾನೆಂದು ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಕೊಲೆಗೈದು, ಬಳಿಕ ಆತ ನಾಪತ್ತೆಯಾಗಿದ್ದಾನೆಂದು ನಾಟಕವಾಡಿದ್ದ ಮಹಿಳೆ ಇದೀಗ ಪೊಲೀಸರ ಅತಿಥಿಯಾಗಿದ್ದಾಳೆ.
ಸಮೀಪದ ಪಾಮೇನಹಳ್ಳಿ ಗ್ರಾಮದ ರಘು (36) ಎಂಬಾತನನ್ನು ಆತನ ಪತ್ನಿ ಶೃತಿ ಕೊಲೆ ಮಾಡಿಸಿರುವುದು ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿದೆ. 12 ವರ್ಷಗಳ ಹಿಂದೆ ರಘುವನ್ನು ವಿವಾಹವಾಗಿದ್ದ ಶೃತಿ, ಕಳೆದ ಎರಡು ವರ್ಷಗಳಿಂದ ಉಬೇದುಲ್ಲಾ ಅಲಿಯಾಸ್ ಮುನ್ನಾ ಎಂಬಾತನೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದಳು ಎನ್ನಲಾಗಿದೆ. ಹೀಗಾಗಿ ಪ್ರಿಯಕರನೊಂದಿಗೆ ಸೇರಿ ಪತಿಯ ಕೊಲೆಗೆ ಸಂಚು ರೂಪಿಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಕುಡಿತದ ಚಟ ಹೊಂದಿದ್ದ ರಘುವನ್ನು ದಾವಣಗೆರೆಯ ಬಾರ್‌ವೊಂದಕ್ಕೆ ಕರೆದುಕೊಂಡು ಹೋಗಿ ಮದ್ಯಪಾನ ಮಾಡಿಸಿದ ಬಳಿಕ ಹರಿಹರದ ತುಂಗಭದ್ರಾ ನದಿ ಬಳಿಗೆ ಕರೆದೊಯ್ದಿದ್ದಾರೆ. ಅಲ್ಲಿ ರಘುವಿನ ಕತ್ತು ಹಿಸುಕಿ ಕೊಲೆ ಮಾಡಿ, ಮೃತದೇಹವನ್ನು ನದಿಗೆ ಎಸೆದಿರುವುದು ತನಿಖೆಯಿಂದ ತಿಳಿದುಬಂದಿದೆ.
ಇದನ್ನೂ ಓದಿ:
ಉಬೇದುಲ್ಲಾ ಹಾಗೂ ಆತನ ಸ್ನೇಹಿತ ಸುರೇಶ್ ಈ ಕೃತ್ಯದಲ್ಲಿ ಭಾಗಿಯಾಗಿದ್ದು, ಶೃತಿ ಇಬ್ಬರಿಗೂ ಸಹಕಾರ ನೀಡಿದ್ದಾಳೆ ಎನ್ನಲಾಗಿದೆ. ಪತಿಯನ್ನು ಕೊಲೆ ಮಾಡಿಸಿದ ಬಳಿಕ ಆತ ಕಾಣೆಯಾಗಿದ್ದಾನೆ ಎಂದು ಶೃತಿ ಪೊಲೀಸರಿಗೆ ದೂರು ನೀಡಿದ್ದಳು.
ಆದರೆ ಶೃತಿಯ ಸಹೋದರಿಯನ್ನು ವಿಚಾರಣೆ ನಡೆಸಿದ ವೇಳೆ ಪ್ರಕರಣದ ಹಲವು ಸಂಗತಿಗಳು ಬಯಲಾಗಿವೆ. ಬಳಿಕ ಪೊಲೀಸರು ಶೃತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಶೃತಿ ಸೇರಿದಂತೆ ಮೃತದೇಹ ಸಾಗಿಸಲು ನೆರವಾದ ಮೂವರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಕೊಲೆಯಾದ ರಘುವಿನ ಮೃತದೇಹಕ್ಕಾಗಿ ತುಂಗಭದ್ರಾ ನದಿಯಲ್ಲಿ ಶೋಧ ಕಾರ್ಯ ಮುಂದುವರಿದಿದೆ. ಈ ಸಂಬಂಧ ಹದಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.



