October 11, 2026
Sunday, October 11, 2026
spot_img

ಬೆಂಗಳೂರು ಫುಟ್‌ಪಾತ್‌ಗಳಿಗೆ ಮತ್ತೆ ಕಂಟಕ: ಒತ್ತುವರಿ ಮಾಡಿದ್ರೆ ಡಬಲ್ ದಂಡ, ಸಚಿವರ ಖಡಕ್ ವಾರ್ನಿಂಗ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಪಾದಚಾರಿಗಳ ಸುರಕ್ಷತೆಗಾಗಿ ಕೈಗೊಂಡಿರುವ ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆಗೆ ಮತ್ತಷ್ಟು ವೇಗ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. ತೆರವುಗೊಳಿಸಿದ ಸ್ಥಳಗಳಲ್ಲೇ ಮತ್ತೆ ಅಂಗಡಿಗಳು ಹಾಗೂ ತಾತ್ಕಾಲಿಕ ವ್ಯಾಪಾರ ಆರಂಭಿಸುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

964 ಕಿ.ಮೀ. ಫುಟ್‌ಪಾತ್ ತೆರವು

ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯ ಸುಮಾರು 1,500 ಕಿ.ಮೀ. ಆರ್ಟಿರಿಯಲ್ ಮತ್ತು ಸಬ್-ಆರ್ಟಿರಿಯಲ್ ರಸ್ತೆಗಳಲ್ಲಿ ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಈವರೆಗೆ 964 ಕಿ.ಮೀ. ಪಾದಚಾರಿ ಮಾರ್ಗಗಳನ್ನು ಒತ್ತುವರಿಯಿಂದ ಮುಕ್ತಗೊಳಿಸಲಾಗಿದೆ. ಉಳಿದ ಪ್ರದೇಶಗಳಲ್ಲಿನ ಅತಿಕ್ರಮಣವನ್ನು ಆಗಸ್ಟ್ ಅಂತ್ಯದೊಳಗೆ ತೆರವುಗೊಳಿಸುವಂತೆ ಸಚಿವರು ಅಧಿಕಾರಿಗಳಿಗೆ ಗಡುವು ನೀಡಿದ್ದಾರೆ.

ಮತ್ತೆ ಒತ್ತುವರಿ ಮಾಡಿದರೆ ಕಠಿಣ ಕ್ರಮ

ತೆರವುಗೊಳಿಸಿದ ಫುಟ್‌ಪಾತ್‌ಗಳ ಮೇಲೆ ಮತ್ತೆ ವ್ಯಾಪಾರ ನಡೆಸುತ್ತಿರುವುದು ಕಂಡುಬಂದರೆ, ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಮರು ಒತ್ತುವರಿ ಮಾಡುವವರ ಸಾಮಗ್ರಿಗಳನ್ನು ಜಪ್ತಿ ಮಾಡುವುದರ ಜೊತೆಗೆ ದುಪ್ಪಟ್ಟು ದಂಡ ವಿಧಿಸುವಂತೆ ಕೃಷ್ಣ ಬೈರೇಗೌಡ ಸೂಚಿಸಿದ್ದಾರೆ.

ಇದನ್ನೂ ಓದಿ:

ಅಧಿಕಾರಿಗಳ ನಿರಂತರ ನಿಗಾ

ಫುಟ್‌ಪಾತ್ ತೆರವು ಮಾಡಿದ ಬಳಿಕ ಅದೇ ಸ್ಥಳದಲ್ಲಿ ಮತ್ತೆ ಅತಿಕ್ರಮಣವಾಗದಂತೆ ಅಧಿಕಾರಿಗಳು ನಿರಂತರವಾಗಿ ಪರಿಶೀಲನೆ ನಡೆಸಬೇಕು ಎಂದು ಸಚಿವರು ಹೇಳಿದ್ದಾರೆ. ಈ ಕಾರ್ಯಾಚರಣೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಪಾಲಿಕೆ ಮತ್ತು ಪೊಲೀಸ್ ಅಧಿಕಾರಿಗಳ ಜಂಟಿ ಸಭೆ ಶೀಘ್ರದಲ್ಲೇ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

ಪಾದಚಾರಿಗಳ ಸುರಕ್ಷತೆಗೆ ಆದ್ಯತೆ

ಫುಟ್‌ಪಾತ್‌ಗಳು ಸಾರ್ವಜನಿಕರ ಸುಗಮ ಹಾಗೂ ಸುರಕ್ಷಿತ ಸಂಚಾರಕ್ಕೆ ಮೀಸಲಾಗಿದ್ದು, ಅವುಗಳನ್ನು ಮತ್ತೆ ಒತ್ತುವರಿಗೆ ಒಳಪಡದಂತೆ ನೋಡಿಕೊಳ್ಳುವುದು ಅಧಿಕಾರಿಗಳ ಜವಾಬ್ದಾರಿಯಾಗಿದೆ. ಬೆಂಗಳೂರಿನ ರಸ್ತೆಗಳಲ್ಲಿ ಪಾದಚಾರಿಗಳು ಸುರಕ್ಷಿತವಾಗಿ ಸಂಚರಿಸುವ ಉದ್ದೇಶದಿಂದ ತೆರವು ಕಾರ್ಯಾಚರಣೆಯನ್ನು ಮುಂದುವರಿಸಲಾಗುತ್ತಿದೆ.

Must Read