ಹೊಸದಿಗಂತ ವರದಿ ಯಲ್ಲಾಪುರ:
ಅರಬೈಲ್ ಘಟ್ಟದ ರಸ್ತೆ ಬದಿಯ ಚರಂಡಿಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾದ ಪ್ರಕರಣವನ್ನು ಯಲ್ಲಾಪುರ ಪೊಲೀಸರು ಭೇದಿಸಿದ್ದು, ಮೃತನೊಂದಿಗೆ ಕೆಲಸ ಮಾಡುತ್ತಿದ್ದ ವಾಹನದ ಚಾಲಕನನ್ನೇ ಕೊಲೆ ಆರೋಪದಡಿ ಬಂಧಿಸಿದ್ದಾರೆ.
ಮಹಾರಾಷ್ಟ್ರದ ಅಹಮದ್‌ನಗರ ಜಿಲ್ಲೆಯ ಕೆಲ್ವಾಡ ಖುರ್ದ ಗ್ರಾಮದ ಆಕಾಶ ದಶರಥ ರಜಪೂತ (23) ಕೊಲೆಯಾದ ಯುವಕ. ಲಾರಿ ಚಾಲಕ ಹಾಗೂ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದ ಆಕಾಶನ ಮೃತದೇಹ ಆ.13ರಂದು ಯಲ್ಲಾಪುರ ತಾಲೂಕಿನ ಮೂಲೆಪಾಲ ವ್ಯಾಪ್ತಿಯ ಅರಬೈಲ್ ಘಟ್ಟದ ಡಾಂಬರು ರಸ್ತೆಯ ಪಕ್ಕದ ಚರಂಡಿಯಲ್ಲಿ ಪತ್ತೆಯಾಗಿತ್ತು.
ಅಪರಿಚಿತ ವ್ಯಕ್ತಿಯನ್ನು ಕೊಲೆ ಮಾಡಿ ಸಾಕ್ಷ್ಯನಾಶಪಡಿಸುವ ಉದ್ದೇಶದಿಂದ ಮೃತದೇಹವನ್ನು ಅಲ್ಲಿ ತಂದು ಹಾಕಿರುವ ಶಂಕೆ ವ್ಯಕ್ತಪಡಿಸಿ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ:
ಪ್ರಕರಣದ ತನಿಖೆ ನಡೆಯುತ್ತಿರುವ ಸಂದರ್ಭದಲ್ಲೇ ಈಚರ್ ವಾಹನದ ಚಾಲಕ ಹಾಗೂ ಮಾಲೀಕ ಮಹಾರಾಷ್ಟ್ರದ ಪ್ರಕಾಶ ಗಣಪತ ವಿಘೆ ಎಂಬಾತ ಠಾಣೆಗೆ ಬಂದು, ತನ್ನ ವಾಹನದಲ್ಲಿ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದ ಆಕಾಶ ತನ್ನ ಕುತ್ತಿಗೆಯಲ್ಲಿದ್ದ ಚೈನ್ ಕಿತ್ತುಕೊಂಡು ಹೋಗಿದ್ದಾನೆ ಎಂದು ದೂರು ನೀಡಲು ಬಂದಿದ್ದ. ಪೊಲೀಸರು ಆತನನ್ನು ಕರೆದುಕೊಂಡು ಅರಬೈಲ್ ಘಟ್ಟದ ಬಳಿ ತೆರಳಿ ಪರಿಶೀಲಿಸಿದಾಗ, ಆತ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದ ಆಕಾಶನೇ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದ.
ಇದರಿಂದ ಪ್ರಕರಣದ ತನಿಖೆ ಮತ್ತಷ್ಟು ತೀವ್ರಗೊಳಿಸಿದಾಗ ಚಾಲಕ ಪ್ರಕಾಶನ ಹೇಳಿಕೆಗಳು ಹಾಗೂ ಆತನ ನಡೆ-ನುಡಿಗಳ ಕುರಿತು ಪೊಲೀಸರು ಕೂಲಂಕಷ ವಿಚಾರಣೆ ನಡೆಸಿದ್ದಾರೆ. ತಾಲೂಕು ಸೇರಿದಂತೆ ವಿವಿಧ ಪ್ರದೇಶಗಳ ಸಿಸಿಟಿವಿ ದೃಶ್ಯಗಳು ಹಾಗೂ ಇತರೆ ಸಾಂದರ್ಭಿಕ ಸಾಕ್ಷ್ಯಗಳನ್ನು ಪರಿಶೀಲಿಸಿದ ವೇಳೆ ಆಕಾಶನ ಸಾವಿನ ಹಿಂದೆ ಪ್ರಕಾಶನ ಕೈವಾಡವಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಆ.16ರಂದು ಶಿರಸಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಕೊಲೆ ಕೃತ್ಯಕ್ಕೆ ಬಳಸಿದ್ದ ಎನ್ನಲಾದ ಆಯುಧಗಳು ಹಾಗೂ ಈಚರ್ ವಾಹನವನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿ ಪ್ರಕಾಶನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.



