ಹೊಸದಿಗಂತ ಡಿಜಿಟಲ್ ಡೆಸ್ಕ್:
ವರ್ಣಮಾಲೆಯ ಮಹಾಪ್ರಾಣ ಅಕ್ಷರಗಳನ್ನು ಸಮರ್ಪಕವಾಗಿ ಉಚ್ಚರಿಸುವುದರಿಂದ ದೇಹದಲ್ಲಿ ಅಗ್ನಿ ಜಾಗೃತಿಯಾಗಿ ಜಠರಾಗ್ನಿಯ ಬಲವರ್ಧನೆಯಾಗುತ್ತದೆ ಹೀಗಾಗಿ ಅಕ್ಷರಗಳ ಸರಿಯಾದ ಉಚ್ಚಾರಣೆಯ ಮೂಲಕ ಅಪ್ರತ್ಯಕ್ಷವಾಗಿ ದೇಹದ ಅಗ್ನಿಯನ್ನು ಪ್ರಚೋದಿಸಬಹುದು ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.
ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ ‘ಅನ್ನಬ್ರಹ್ಮ ಚಾತುರ್ಮಾಸ್ಯ’ದ ಬುಧವಾರದ ಧರ್ಮಸಭೆಯ ‘ಅನ್ನಂ ಬ್ರಹ್ಮ’ ಮಾಲಿಕೆಯಲ್ಲಿ ‘ಜೀರ್ಣಕ್ರಿಯೆಯ ಮಹತ್ವ’ದ ಕುರಿತಾಗಿ ಅವರು ಪ್ರವಚನ ಅನುಗ್ರಹಿಸಿದರು.

ದೇಹದಲ್ಲಿರುವ ಪ್ರಮುಖ 18 ಅಗ್ನಿಗಳು ಜಠರಾಗ್ನಿಯನ್ನು ಅವಲಂಬಿಸಿವೆ. ಜಠರಾಗ್ನಿಯಲ್ಲಿ ಉಂಟಾಗುವ ಬದಲಾವಣೆಗಳು ಇತರ ಅಗ್ನಿಗಳ ಮೇಲೂ ಪರಿಣಾಮ ಬೀರುತ್ತವೆ. ಹಿತ, ಮಿತ ಮತ್ತು ಯುಕ್ತವಾದ ಆಹಾರ ಹಾಗೂ ಪಾನೀಯಗಳೇ ಜಠರಾಗ್ನಿಗೆ ಸೂಕ್ತ ಇಂಧನವಾಗಿದ್ದು, ದೇಹಕ್ಕೆ ಶಕ್ತಿ ಮತ್ತು ಆಯುಷ್ಯ ದೊರೆಯಲು ಜಠರಾಗ್ನಿ ಪ್ರಮುಖ ಕಾರಣವಾಗಿದೆ ಎಂದರು.
ಐದು ಪ್ರಾಣಗಳಿಂದ ನಡೆಯುವ ಜೀರ್ಣಕ್ರಿಯೆ
ಹೊಟ್ಟೆಯೊಳಗೆ ಐದು ಪ್ರಾಣಗಳು ಅಡುಗೆಮನೆಯಂತೆ ಕಾರ್ಯನಿರ್ವಹಿಸುತ್ತವೆ. ಕೃಕರ ಪ್ರಾಣ ಹಸಿವಿನ ಸೂಚನೆ ನೀಡಿದ ಬಳಿಕ ಆಹಾರ ಸೇವನೆಯ ಪ್ರಕ್ರಿಯೆ ಆರಂಭವಾಗುತ್ತದೆ. ಪ್ರಾಣವು ಆಹಾರವನ್ನು ಬಾಯಿಯಿಂದ ಜಠರಕ್ಕೆ ತಲುಪಿಸುತ್ತದೆ. ಸಮಾನ ವಾಯು ಆಹಾರವನ್ನು ಪಾಕಗೊಳಿಸಿ ಸಾರ ಮತ್ತು ಕಲ್ಮಷಗಳನ್ನು ಪ್ರತ್ಯೇಕಿಸುತ್ತದೆ. ವ್ಯಾನ ವಾಯು ಪೋಷಕಾಂಶಗಳನ್ನು ದೇಹದ ವಿವಿಧ ಅಂಗಾಂಗಗಳಿಗೆ ತಲುಪಿಸಿದರೆ, ಅಪಾನ ವಾಯು ಜೀರ್ಣವಾಗದ ಅಂಶ ಹಾಗೂ ಕಲ್ಮಷಗಳನ್ನು ದೇಹದಿಂದ ಹೊರಹಾಕುತ್ತದೆ. ಉದಾನ ವಾಯು ಆಹಾರದ ಸಾರದಿಂದ ದೇಹಕ್ಕೆ ಬಲ ಮತ್ತು ಕಾಂತಿ ನೀಡುತ್ತದೆ ಎಂದು ಶ್ರೀಗಳು ವಿವರಿಸಿದರು.

ದೇಹದ ಸೂಚನೆಗಳನ್ನು ನಿರ್ಲಕ್ಷಿಸಬೇಡಿ
ಊಟ ಮಾಡುವ ಸಂದರ್ಭದಲ್ಲಿ ದೇಹ ನೀಡುವ ಸೂಚನೆಗಳನ್ನು ಗಮನಿಸುವುದು ಅತ್ಯಂತ ಮುಖ್ಯ. ಹೊಟ್ಟೆ ತುಂಬಿದಾಗ ನಾಗ ಪ್ರಾಣದ ಮೂಲಕ ತೇಗು ಬರುವಂತಹ ಸೂಚನೆಗಳು ದೊರೆಯುತ್ತವೆ. ತೇಗು ಬಂದ ನಂತರವೂ ಆಹಾರ ಸೇವನೆಯನ್ನು ಮುಂದುವರಿಸದೆ ಊಟ ನಿಲ್ಲಿಸುವುದು ಸೂಕ್ತ. ದೇಹದ ಸಹಜ ಸೂಚನೆಗಳನ್ನು ನಿರ್ಲಕ್ಷಿಸಿ ಅತಿಯಾಗಿ ಆಹಾರ ಸೇವಿಸುವುದರಿಂದ ಮುಂದೆ ಸಮಸ್ಯೆಗಳು ಎದುರಾಗಬಹುದು ಎಂದು ರಾಘವೇಶ್ವರ ಶ್ರೀ ಎಚ್ಚರಿಸಿದರು.
ಕಾರ್ಯಕ್ರಮದಲ್ಲಿ ವಿದ್ವಾನ್ ಉಮಾಕಾಂತ ಭಟ್ಟ ಕೆರೆಕೈ, ಮಾಜಿ ಸಚಿವ ಹರತಾಳು ಹಾಲಪ್ಪ, ಬಿಜೆಪಿ ಮುಖಂಡ ಮಲ್ಲಿಕಾರ್ಜುನ ಹಕ್ರೆ ಸೇರಿದಂತೆ ಹಲವರು ಭಾಗವಹಿಸಿ ಶ್ರೀಗಳ ಆಶೀರ್ವಾದ ಪಡೆದರು.

ಹೊನ್ನಾವರ ಹವ್ಯಕ ಮಂಡಲದ ಗೇರುಸೊಪ್ಪ, ಹೊನ್ನಾವರ, ಕಡ್ಲೆ, ಮುಗ್ವಾ, ಹೊಸಾಕುಳಿ ಹವ್ಯಕ ವಲಯಗಳ ಪರವಾಗಿ ಲಕ್ಷ್ಮೀನಾರಾಯಣ ಹೆಗಡೆ ಕುಟುಂಬದವರು ಗುರುಭಿಕ್ಷಾ ಸೇವೆಯನ್ನು ನೆರವೇರಿಸಿದರು. ವೇ.ಮೂ. ಸುಬ್ರಹ್ಮಣ್ಯ ಭಟ್ಟ ಅಮ್ಮನವರಮನೆ, ಆರ್. ಜಿ. ಹೆಗಡೆ ಹೊಸಾಕುಳಿ, ಪರಮೇಶ್ವರ ಎನ್. ಭಟ್ಟ, ಕೃಷ್ಣ ಹೆಗಡೆ ಚಿಟ್ಟಾಣಿ, ರೇಷ್ಮಾ ಭಟ್, ದಿನೇಶ ಹೆಗಡೆ, ಮಹೇಶ ಎಮ್. ಎನ್, ದಿನ ಪ್ರಧಾನರಾಗಿ ವಿಶ್ವೇಶ್ವರ ಭಟ್ ಎಲಿಯೂರು ಉಪಸ್ಥಿತರಿದ್ದರು.




