ಹೊಸದಿಗಂತ ವರದಿ ದಾವಣಗೆರೆ:
ಬಡವರು ಮತ್ತು ಶೋಷಿತರ ಪರ ಎಂದು ಹೇಳಿಕೊಳ್ಳುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ಮೀಸಲಿಟ್ಟಿದ್ದ ಶೇ.18 ಮತ್ತು 24ರಷ್ಟು ನಿಧಿಯಲ್ಲಿ ಸುಮಾರು 35,000 ಕೋಟಿ ರೂ ಗೂ ಹೆಚ್ಚು ಹಣವನ್ನು ದುರ್ಬಳಕೆ ಮಾಡಿಕೊಂಡಿದೆ ಎಂದು ಬಿಜೆಪಿ ದಾವಣಗೆರೆ ವಿಭಾಗ ಪ್ರಭಾರಿ ಮೇಘರಾಜ್ ಆರೋಪಿಸಿದರು.
ಬಿಜೆಪಿ ಚಳ್ಳಕೆರೆ ಮಂಡಲದ ವತಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಹಮ್ಮಿಕೊಂಡಿದ್ದ ಮೂರನೇ ದಿನದ ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನೂರಾರು ಕೋಟಿ ರೂಪಾಯಿಗಳ ಅಕ್ರಮ ನಡೆದಿದೆ ಎಂದು ದೂರಿದರು. ದೆಹಲಿ ಹೈಕಮಾಂಡ್ ಹಾಗೂ ತೆಲಂಗಾಣ ಮತ್ತು ಆಂಧ್ರಪ್ರದೇಶದ ಚುನಾವಣೆಗಳಿಗೆ ಕರ್ನಾಟಕವನ್ನು ‘ಎಟಿಎಂ ಮಿಷನ್’ನಂತೆ ಬಳಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದರು.
ನಿಗಮದ ಹಣ ದುರ್ಬಳಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ನಾಗೇಂದ್ರ ಅವರನ್ನು ಕೂಡಲೇ ಸಚಿವ ಸಂಪುಟದಿಂದ ವಜಾಗೊಳಿಸಬೇಕು. ಅಲ್ಲದೆ, ರಾಜ್ಯದ ಪರಿಶಿಷ್ಟ ಪಂಗಡಗಳ ಸಮುದಾಯದ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು. ಕಾಂಗ್ರೆಸ್ ಸರ್ಕಾರದ ದುರಾಡಳಿತ, ಲೂಟಿ ಹಾಗೂ ಜನವಿರೋಧಿ ನೀತಿಗಳ ವಿರುದ್ಧ ಸಚಿವ ನಾಗೇಂದ್ರ ರಾಜೀನಾಮೆ ನೀಡುವವರೆಗೆ ಮತ್ತು ಸರ್ಕಾರ ಸೂಕ್ತ ಉತ್ತರ ನೀಡುವವರೆಗೆ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಬಿಜೆಪಿ ಹೋರಾಟ ಮುಂದುವರಿಯಲಿದೆ ಎಂದು ಎಚ್ಚರಿಸಿದರು.
ಇದನ್ನೂ ಓದಿ:
ರಾಜ್ಯದಲ್ಲಿ ಚಿತ್ರದುರ್ಗ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಬರದ ಪರಿಸ್ಥಿತಿ ಇದೆ. ಕಾವೇರಿ ಅಚ್ಚುಕಟ್ಟು ಪ್ರದೇಶದ ರೈತರ ಹಿತವನ್ನು ಬಲಿಕೊಟ್ಟು ತಮಿಳುನಾಡಿಗೆ ರಾತ್ರೋರಾತ್ರಿ ನೀರು ಹರಿಸಿರುವುದು ರೈತ ವಿರೋಧಿ ಧೋರಣೆ ಎಂದು ಆರೋಪಿಸಿದರು. ಚಿತ್ರದುರ್ಗವನ್ನು ತಕ್ಷಣ ಬರಪೀಡಿತ ಜಿಲ್ಲೆ ಎಂದು ಘೋಷಿಸಬೇಕು ಎಂದು ಒತ್ತಾಯಿಸಿದರು.
ಗುಟ್ಕಾ ನಿಷೇಧದ ನೆಪದಲ್ಲಿ ಅಡಿಕೆ ಬೆಳೆಗಾರರು ಹಾಗೂ ಕಂಪನಿಗಳಿಗೆ ತೊಂದರೆ ನೀಡಿ ಹಣ ವಸೂಲಿ ಮಾಡಲು ಸರ್ಕಾರ ಸಂಚು ರೂಪಿಸಿದೆ ಎಂದು ದೂರಿದರು. ಗೃಹಲಕ್ಷ್ಮಿ ಯೋಜನೆಯಡಿ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಸುಮಾರು ₹5,000 ಕೋಟಿ ಹಣವನ್ನು ಫಲಾನುಭವಿಗಳಿಗೆ ನೀಡದೆ ವಂಚಿಸಲಾಗಿದೆ ಎಂದು ಆರೋಪಿಸಿದರು.
ಕೆಪಿಎಸ್‌ಸಿ ಪರೀಕ್ಷೆ ಹಾಗೂ ನೇಮಕಾತಿ ಪ್ರಕ್ರಿಯೆಗಳಲ್ಲಿ ಭ್ರಷ್ಟಾಚಾರ ನಡೆದಿದೆ. ಇದರಿಂದ ರಾಜ್ಯದ ಯುವಕರ ಭವಿಷ್ಯದೊಂದಿಗೆ ಸರ್ಕಾರ ಚೆಲ್ಲಾಟವಾಡುತ್ತಿದೆ ಎಂದು ಬಿಜೆಪಿ ನಾಯಕರು ಆರೋಪಿಸಿದರು.
ಧರಣಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಕುಮಾರಸ್ವಾಮಿ, ಮಾಜಿ ಶಾಸಕ ತಿಪ್ಪೇಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಯಾದವ್, ಮೋಹನ್ ಕುಮಾರ್, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾದ ರಾಮದಾಸ್ ಬಾಳೆಕಾಯಿ, ಚಳ್ಳಕೆರೆ ಮಂಡಲ ಅಧ್ಯಕ್ಷ ಸುರೇಶ್, ಪ್ರಧಾನ ಕಾರ್ಯದರ್ಶಿ ಓಬಳೇಶ್, ಸುರೇಶ್, ಮುಖಂಡರಾದ ಲಿಂಗರಾಜು, ಬಂಡೆ ರಂಗಪ್ಪ, ಶಶೀಧರ್ ರೆಡ್ಡಿ, ಪರಶುರಾಮ್, ಮಂಡಿ ಸೀನಪ್ಪ, ಜಗದಂಬಾ, ಲಕ್ಷ್ಮೀ, ಶಾಂತಮ್ಮ, ದೇವರಹಳ್ಳಿ ಶೋಭರಾಜ್, ದೊರೆ ನಾಗರಾಜ್, ಶ್ರೀನಿವಾಸ್, ರಂಗಸ್ವಾಮಿ ಸೇರಿದಂತೆ ಚಿತ್ರದುರ್ಗ ಮತ್ತು ಚಳ್ಳಕೆರೆಯ ಪ್ರಮುಖ ಮುಖಂಡರು ಉಪಸ್ಥಿತರಿದ್ದರು.



