August 19, 2026
Wednesday, August 19, 2026
spot_img

ಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಅಹೋರಾತ್ರಿ ಧರಣಿ: ವೇದಿಕೆಯಲ್ಲೇ ರಾತ್ರಿ ಕಳೆದ ಮುಖಂಡರು

ಹೊಸದಿಗಂತ ವರದಿ ಬೆಳಗಾವಿ:

ಸಚಿವ ಬಿ. ನಾಗೇಂದ್ರ ಅವರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ನಡೆಸುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಅಹೋರಾತ್ರಿ ಧರಣಿ ಮುಂದುವರಿದಿದೆ. ಹಗಲು-ರಾತ್ರಿ ಎನ್ನದೆ ಪ್ರತಿಭಟನೆಯಲ್ಲಿ ಭಾಗವಹಿಸಿರುವ ಬಿಜೆಪಿ ಜಿಲ್ಲಾ ಅಧ್ಯಕ್ಷ ಸುಭಾಷ್ ಪಾಟೀಲ ಹಾಗೂ ಮುಖಂಡರು, ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಬೆಳಗಾವಿ ಜಿಲ್ಲಾಧಿಕಾರಿಗಳ ಕಚೇರಿಯ ಮುಂಭಾಗದಲ್ಲಿ ಬೃಹತ್ ಮಟ್ಟದ ಪ್ರತಿಭಟನಾ ವೇದಿಕೆಯನ್ನು ನಿರ್ಮಿಸಲಾಗಿದ್ದು, ಸಂಜೆಯ ಬಳಿಕವೂ ಜಾನಪದ ಭಜನೆಗಳ ಮೂಲಕ ಪ್ರತಿಭಟನೆ ಮುಂದುವರಿಯಿತು. ಧರಣಿ ಸ್ಥಳದಲ್ಲಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ರಾತ್ರಿ ವೇಳೆ ವೇದಿಕೆಯ ಮೇಲೆಯೇ ಮಲಗಿ ಪ್ರತಿಭಟನೆ ನಡೆಸಿದರು. ಸಚಿವ ಬಿ. ನಾಗೇಂದ್ರ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಹಾಗೂ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ರಾತ್ರಿ ವೇಳೆಯಲ್ಲಿಯೂ ಪ್ರತಿಭಟನಾ ವೇದಿಕೆಯಲ್ಲಿ ಮುಖಂಡರು ಹಾಗೂ ಕಾರ್ಯಕರ್ತರು ಜಮಾಯಿಸಿದ್ದು, ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ತಮ್ಮ ಬೇಡಿಕೆ ಈಡೇರುವವರೆಗೂ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ಜಿಲ್ಲಾ ಅಧ್ಯಕ್ಷ ಸುಭಾಷ್ ಫಾಟೀಲ ಹಾಗೂ ಬಿಜೆಪಿ ಮುಖಂಡರು ಧರಣಿ ಪ್ರತಿಭಟನೆಯಲ್ಲಿ ತಿಳಿಸಿದರು.

ಇದನ್ನೂ ಓದಿ:

ಪ್ರತಿಭಟನಾ ಸ್ಥಳದಲ್ಲಿ ಮುಖಂಡರು ಹಾಗೂ ಕಾರ್ಯಕರ್ತರು ಸರದಿಯಲ್ಲಿ ಧರಣಿ ಮುಂದುವರಿಸಿದ್ದು, ರಾತ್ರಿ ವೇಳೆ ವೇದಿಕೆಯ ಮೇಲೆಯೇ ವಿಶ್ರಾಂತಿ ಪಡೆದು ಬೆಳಗ್ಗೆಯೂ ಮತ್ತೆ ಹೋರಾಟ ಮುಂದುವರಿಸುವ ನಿರ್ಧಾರ ಕೈಗೊಂಡಿದ್ದಾರೆ. ಇದರಿಂದ ಪ್ರತಿಭಟನಾ ಸ್ಥಳದಲ್ಲಿ ರಾಜಕೀಯ ಚಟುವಟಿಕೆ ಮತ್ತಷ್ಟು ಚುರುಕುಗೊಂಡಿದೆ.

ಸಚಿವರ ರಾಜೀನಾಮೆ ವಿಚಾರವನ್ನು ಮುಂದಿಟ್ಟುಕೊಂಡು ಬಿಜೆಪಿ ನಡೆಸುತ್ತಿರುವ ಈ ಅಹೋರಾತ್ರಿ ಧರಣಿ ರಾಜ್ಯ ರಾಜಕೀಯದಲ್ಲಿ ಮತ್ತಷ್ಟು ಚರ್ಚೆಗೆ ಕಾರಣವಾಗಿದ್ದು, ಸರ್ಕಾರ ಹಾಗೂ ಪ್ರತಿಪಕ್ಷಗಳ ನಡುವೆ ವಾಗ್ವಾದ ತೀವ್ರಗೊಳ್ಳುವ ಸಾಧ್ಯತೆ ಇದೆ. ಪ್ರತಿಭಟನೆಗೆ ಸಂಬಂಧಿಸಿದಂತೆ ಮುಂದಿನ ದಿನಗಳಲ್ಲಿ ಬಿಜೆಪಿ ಯಾವ ರೀತಿಯ ಹೋರಾಟ ರೂಪಿಸಲಿದೆ ಎಂಬುದು ಕುತೂಹಲ ಮೂಡಿಸಿದೆ.

ಪ್ರತಿಭಟನೆಯಲ್ಲಿ ಪಾಲ್ಗೊಂಡಿರುವ ಬಿಜೆಪಿ ಮುಖಂಡರು, ತಮ್ಮ ಬೇಡಿಕೆಗೆ ಸರ್ಕಾರ ಸ್ಪಂದಿಸುವವರೆಗೆ ಧರಣಿ ಮುಂದುವರಿಸುವುದಾಗಿ ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !