ನಾಳೆ ಹೆಣ್ಣುಮಕ್ಕಳು ಸಂಭ್ರಮದಿಂದ ಆಚರಿಸುವ ವರಮಹಾಲಕ್ಷ್ಮೀ ವ್ರತ ಆರಂಭವಾಗಲಿದೆ. ಸಡಗರ ಸಂಭ್ರಮದಿಂದ ಬೆಳಗ್ಗೆ ಬೇಗನೆ ಎದ್ದು ಮನೆಯನ್ನೆಲ್ಲಾ ಸ್ವಚ್ಛಗೊಳಿಸಿ, ತಲೆಸ್ನಾನ ಮಾಡಿ ಅಂದದ ಉಡುಗೆಯುಟ್ಟು ದೇವಿಯನ್ನು ಕೂರಿಸಿ ಅಲಂಕಾರ ಮಾಡಲಾಗುತ್ತದೆ. ಈ ಹಿಂದೆ ಎಲ್ಲರೂ ತಮ್ಮ ತಮ್ಮ ಮನೆಯಲ್ಲ ವ್ರತವನ್ನು ಆಚರಣೆ ಮಾಡುತ್ತಿದ್ದರು. ಸಿಂಪಲ್ ಆದಂತಹ ಸೆಲಬ್ರೇಷನ್ ಅದಾಗಿತ್ತು. ಆದರೆ ಈಗ ಸಾಮಾಜಿಕ ಜಾಲತಾಣದಿಂದಾಗಿ ಹಬ್ಬಕ್ಕೆ ಯಾವ ರೀತಿ ಸೀರೆ, ಯಾವ ರೀತಿ ಡೆಕೋರೇಷನ್ ಮಾಡಬೇಕು ಎನ್ನಲು ಸಾಕಷ್ಟು ಐಡಿಯಾಗಳಿವೆ. ನಿಮ್ಮ ಮನೆಯ ದೇವಿ ಸಿಂಪಲ್ ಆದರೂ ಅದ್ಭುತವಾಗಿ ಕಾಣಿಸಬೇಕು. ದೇವಿಯ ಮೊಗದಲ್ಲಿ ಕಳೆ ಎದ್ದು ಕಾಣಬೇಕು ಎಂದಾದರೆ ಈ ಎಲ್ಲ ಟಿಪ್ಸ್ ಫಾಲೋ ಮಾಡಿ..

ಮೊದಲು ನೀವು ದೇವಿಗೆ ಉಡಿಸುವ ಸೀರೆ ಯಾವುದೆಂದು ಡಿಸೈಡ್ ಮಾಡಿಕೊಳ್ಳಿ. ಅದಕ್ಕೆ ತಕ್ಕಂತಹ ಬಣ್ಣಗಳನ್ನು ಮಾತ್ರ ಬಳಕೆ ಮಾಡಿ. ಉದಾಹರಣೆಗೆ ನೀವು ಈ ಬಾರಿ ದೇವಿಗೆ ಹಸಿರು ಬಣ್ಣದ ಸೀರೆ ಉಡಿಸುತ್ತಿದ್ದೀರಿ ಎಂದುಕೊಳ್ಳಿ. ಅದಕ್ಕೆ ಮ್ಯಾಚ್ ಆಗುವ ಬಣ್ಣಗಳ ಸುತ್ತ ಇಡೀ ಡೆಕೋರೇಷನ್ ಮಾಡಿ.
ದೇವಿಯನ್ನು ಕೂರಿಸುವ ಜಾಗದ ಹಿಂಬದಿಯಲ್ಲಿ ಕರ್ಟನ್ ಅಥವಾ ದೊಡ್ಡ ಬ್ಯಾಕ್‌ಡ್ರಾಪ್ ಹಾಕಿ. ಇದು ದೇವರ ಸೀರೆಯ ಕಲರ್‌ನ್ನು ಇನ್ನಷ್ಟು ಅಂದಗೊಳಿಸುವಂತೆಯೇ ಇರಲಿ. ಆನಂತರ ಸೀರೆ, ಬಳೆ ಇತರ ಡೆಕೋರೇಷನ್ ಆರಂಭಿಸಿ.

ಹಿಂದಿನ ದಿನ ಸಂಜೆ, ಅಂದರೆ ಇಂದು ಸಂಜೆಯೇ ಮನೆಯನ್ನು ಸ್ವಚ್ಛಗೊಳಿಸಿ, ಸ್ನಾನ ಮಾಡಿ ದೇವಿಗೆ ಸೀರೆ ಉಡಿಸಿ ತಯಾರಿಸಿ. ಬೆಳಗ್ಗೆ ಇನ್ನುಳಿದ ಕೆಲಸ,ಅಡುಗೆ ತಯಾರು ಮಾಡಬಹುದು. ಅಡುಗೆಗೆ ಬೇಕಾದ ತರಕಾರಿಗಳನ್ನು ಕೂಡ ಕತ್ತರಿಸಿ ಫ್ರಿಡ್ಜ್‌ನಲ್ಲಿಡೋದು ಉತ್ತಮ.
ದೇವಿಗೆ ಉಡಿಸಿರುವ ಸೀರೆಯ ಜೊತೆ ಮೂರು ಕಲರ್ ಮಾತ್ರ ಬಳಕೆ ಮಾಡಿ. ಅಂದರೆ ಈಗ ದೇವಿಯ ಸೀರೆ ಬಣ್ಣ ಹಸಿರು ಇದಕ್ಕೆ ಬಿಳಿ, ಮರೂನ್ ಹಳದಿ ಬಣ್ಣ ಮ್ಯಾಚ್ ಆಗುತ್ತದೆ ಎಂದುಕೊಳ್ಳಿ. ಬಿಳಿ ಬಣ್ಣದ ಬ್ಯಾಕ್‌ಡ್ರಾಪ್, ಹಸಿರು ಸೀರೆ, ಮರೂನ್ ಆಭರಣಗಳು ಹಾಗೂ ಹಳದಿ ಹೂವುಗಳನ್ನು ಬಳಕೆ ಮಾಡಬಹುದು.

ಈಗ ಆನ್‌ಲೈನ್‌ನಲ್ಲಿ ಮನೆಗೆ ಬರುವ ಮುತ್ತೈದೆಯರಿಗೆ ಬಾಗಿನ ನೀಡಲು ಬೇಕಾದ ಪದಾರ್ಥಗಳು ಸಿಗುತ್ತವೆ. ಅವುಗಳನ್ನು ಮೊದಲೇ ರೆಡಿ ಮಾಡಿ ಇಟ್ಟುಕೊಳ್ಳಿ. ಬಂದವರಿಗೆ ಸಿಹಿ ನೀಡುವುದನ್ನು ಮರೆಯಬೇಡಿ. ದೇವಿಗೆ ತಯಾರು ಮಾಡಿದಂತೆ ನೀವು ಸಿಂಗಾರ ಮಾಡಿಕೊಳ್ಳುವುದನ್ನು ಮರೆಯಬೇಡಿ. ಮನೆಯಲ್ಲಿ ಮಕ್ಕಳು ಇದ್ದರೆ ಅವರನ್ನೂ ಬೊಂಬೆಯಂತೆ ಅಲಂಕರಿಸಿ.
ಒಂದೊಳ್ಳೆ ಸ್ತ್ರೋತ್ರ, ಧೂಮದ ಘಮ ಇಡೀ ಮನೆಯ ವಾತಾವರಣವನ್ನು ಬದಲಾಯಿಸಿ ಲಕ್ಷ್ಮೀ ತಾಯಿ ನಿಮ್ಮ ಮನೆಯ ಒಳಕ್ಕೆ ಬರಲು ಅವಕಾಶ ಮಾಡಿಕೊಡುತ್ತದೆ. ಡೆಕೋರೇಷನ್, ಅಂದ ಚಂದ ಎಲ್ಲವೂ ನಿಮ್ಮ ಖುಷಿಗೆ. ಆದರೆ ಮನೆಮಂದಿಯೆಲ್ಲಾ ಭಕ್ತಿಯಿಂದ ಕೈಮುಗಿದು ಎಲ್ಲ ಕಷ್ಟಗಳನ್ನು ನಿವಾರಣೆ ಮಾಡಿ ಎಂದು ತಾಯಿಯಲ್ಲಿ ಬೇಡಿಕೊಳ್ಳುವುದು. ಭಕ್ತಿ ಸಾರುವುದು ಮೊದಲ ಉದ್ದೇಶವಾಗಿರಲಿ.




