August 20, 2026
Thursday, August 20, 2026
spot_img

ರಾಜ್ಯದ ರೈಲ್ವೆ ನಿಲ್ದಾಣಗಳಲ್ಲಿ ಕಳಪೆ ಆಹಾರ ದಂಧೆ: ಅವಧಿ ಮುಗಿದ ಹಾಲು, ಮೊಸರು ಜಪ್ತಿ ಮಾಡಿದ FDA ಅಧಿಕಾರಿಗಳು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ರಾಜ್ಯದ ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಇಲಾಖೆಯು (FDA) ಹಠಾತ್ ತಪಾಸಣೆ ನಡೆಸಿದೆ. ಈ ವೇಳೆ ಪ್ರಯಾಣಿಕರಿಗೆ ಮಾರಾಟ ಮಾಡಲಾಗುತ್ತಿದ್ದ ಅವಧಿ ಮುಗಿದ ಹಾಲು, ಮೊಸರು ಹಾಗೂ ಅತ್ಯಂತ ಕಳಪೆ ಗುಣಮಟ್ಟದ ಆಹಾರ ಪದಾರ್ಥಗಳನ್ನು ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.

36 ನಿಲ್ದಾಣಗಳ ಮೇಲೆ ಅಧಿಕಾರಿಗಳ ದಾಳಿ

ಆಹಾರ ಸುರಕ್ಷತೆ ಮತ್ತು ನಿಯಂತ್ರಣ ಕಾಯ್ದೆಯಡಿ ಒಟ್ಟು 36 ರೈಲ್ವೆ ನಿಲ್ದಾಣಗಳಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಅಲ್ಲಿನ ಹೋಟೆಲ್‌ಗಳು, ಕ್ಯಾಂಟೀನ್‌ಗಳು, ಪ್ಲಾಟ್‌ಫಾರ್ಮ್ ಸ್ಟಾಲ್‌ಗಳು ಹಾಗೂ ರೈಲಿನ ಒಳಗಿನ ಪ್ಯಾಂಟ್ರಿ ಕಾರ್‌ಗಳು ಸೇರಿದಂತೆ ಒಟ್ಟು 112 ಆಹಾರ ಘಟಕಗಳ ಮೇಲೆ ಈ ದಾಳಿ ನಡೆದಿದೆ.

ದಾಳಿಯ ವೇಳೆ ಬಯಲಾದ ಲೋಪದೋಷಗಳು:

ಹಾವೇರಿ ರೈಲ್ವೆ ನಿಲ್ದಾಣದ ಮಳಿಗೆಗಳಲ್ಲಿ ಅವಧಿ ಮುಗಿದಿದ್ದ ನಂದಿನಿ ಮೊಸರು ಹಾಗೂ ದೊಡ್ಲಾ ಹಾಲಿನ ಪ್ಯಾಕೆಟ್‌ಗಳನ್ನು ಜಪ್ತಿ ಮಾಡಲಾಗಿದೆ. ಬೆಂಗಳೂರಿನ ಕೆ.ಆರ್. ಪುರಂ ನಿಲ್ದಾಣದ ಹೋಟೆಲ್ ಒಂದರಲ್ಲಿ ತೀವ್ರ ಅನಾರೋಗ್ಯಕರ ವಾತಾವರಣ ಕಂಡುಬಂದಿದ್ದು, ಅಲ್ಲಿನ ಈರುಳ್ಳಿ ಹಾಗೂ ತರಕಾರಿಗಳ ಮೇಲೆ ಬೂಸ್ಟು ಬೆಳೆದಿತ್ತು.

ಇನ್ನು,ಗ್ರಾಹಕರಿಗೆ ತಿನ್ನಲು ಕೊಡುವ ಸಮೋಸಾ ಮತ್ತು ವಡೆಗಳನ್ನು ದಿನಪತ್ರಿಕೆಗಳಲ್ಲಿ ಸುತ್ತಿರುವ ಹಾಗೂ ಕಾರ್ಡ್‌ಬೋರ್ಡ್ ಬಾಕ್ಸ್‌ಗಳಲ್ಲಿ ಸಂಗ್ರಹಿಸಿಟ್ಟಿರುವ ದೃಶ್ಯಗಳು ಪತ್ತೆಯಾಗಿವೆ. ಮೈಸೂರು ರೈಲ್ವೆ ನಿಲ್ದಾಣದ ಕೆಲವು ಆಹಾರ ಘಟಕಗಳಲ್ಲಿ ಇಡ್ಲಿಗಳನ್ನು ಬೇಯಿಸಲು ಅಪಾಯಕಾರಿ ಪ್ಲಾಸ್ಟಿಕ್ ಕವರ್‌ಗಳನ್ನು ಬಳಸುತ್ತಿರುವುದು ಬೆಳಕಿಗೆ ಬಂದಿದೆ.

ಅಷ್ಟೇ ಅಲ್ಲದೆ, ಸಾರ್ವಜನಿಕರ ಆರೋಗ್ಯಕ್ಕೆ ಹಾನಿ ತರುವ ಕೃತಕ ಬಣ್ಣಗಳನ್ನು ಆಹಾರದಲ್ಲಿ ಬಳಸಲಾಗುತ್ತಿತ್ತು. ಜಿಲೇಬಿಗೆ ಕೆಮಿಕಲ್ ಹಳದಿ ಬಣ್ಣ ಹಾಗೂ ಖೋವಾ ಪೇಡಾಗೆ ಕೃತಕ ಗುಲಾಬಿ ಬಣ್ಣ ಬೆರೆಸಿರುವುದು ಪತ್ತೆಯಾಗಿದೆ. ಹೋಟೆಲ್‌ಗಳಲ್ಲಿ ಚಟ್ನಿಯನ್ನು ಆಹಾರ ಸಂಗ್ರಹಣೆಗೆ ಯೋಗ್ಯವಲ್ಲದ ಸಾಮಾನ್ಯ ಪ್ಲಾಸ್ಟಿಕ್ ಬಕೆಟ್‌ಗಳಲ್ಲಿ ತುಂಬಿಡಲಾಗಿತ್ತು.

ಇದನ್ನೂ ಓದಿ:

ಕಾನೂನು ಕ್ರಮಕ್ಕೆ ಅಧಿಕಾರಿಗಳ ಸೂಚನೆ

ಯಾವುದೇ ಲೇಬಲ್ ವಿವರಗಳಿಲ್ಲದೆ ಚಪಾತಿ ಹಾಗೂ ತಿಂಡಿಗಳನ್ನು ಮಾರುತ್ತಿದ್ದ ಮತ್ತು ಸೂಕ್ತ ಪರವಾನಗಿ ಪ್ರಮಾಣಪತ್ರ ಪ್ರದರ್ಶಿಸದ ಮಳಿಗೆಗಳ ಮಾಲೀಕರಿಗೆ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ನಿಯಮ ಉಲ್ಲಂಘಿಸಿದ ಎಲ್ಲಾ ಆಹಾರ ವ್ಯಾಪಾರಿಗಳ ವಿರುದ್ಧ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006 ರ ಅಡಿಯಲ್ಲಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ತಿಳಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !