ತೂಕ ಇಳಿಸಿಕೊಳ್ಳಬೇಕು ಅಂತ ಯೋಚನೆ ಮಾಡ್ತಿದ್ದೀರಾ? ಹಾಗಿದ್ರೆ ದಿನಕ್ಕೆ ಒಂದೇ ಸಲ ಊಟ ಮಾಡಿದ್ರೆ ಬೇಗ ತೂಕ ಇಳಿಯುತ್ತೆ ಅನ್ನೋ ಮಾತು ನಿಮ್ಮ ಕಿವಿಗೂ ಬಿದ್ದಿರಬಹುದು ಅಲ್ವಾ?. ಇದಕ್ಕೆ OMAD ಡಯೆಟ್ – One Meal A Day ಅಂತಾರೆ. ಇದರಲ್ಲಿ ದಿನದಲ್ಲಿ ಒಂದೇ ಸಲ ಊಟ ಮಾಡ್ಬಹುದು. ಕೇಳೋಕೆ ಸುಲಭ ಅನಿಸಿದ್ರೂ, ಇದನ್ನು ಶುರು ಮಾಡುವ ಮುನ್ನ ಕೆಲವು ವಿಷಯ ತಿಳಿದುಕೊಳ್ಳೋದು ತುಂಬಾ ಮುಖ್ಯ.
OMAD ಡಯೆಟ್ ಅಂದ್ರೆ ಏನು?
ಸರಳವಾಗಿ ಹೇಳೋದಾದ್ರೆ, 24 ಗಂಟೆಯಲ್ಲಿ ಒಂದು ಬಾರಿ ಮಾತ್ರ ಊಟ ಮಾಡೋದು. ಉಳಿದ ಸಮಯದಲ್ಲಿ ಉಪವಾಸ ಇರುತ್ತೆ. ಸಾಮಾನ್ಯವಾಗಿ ಸುಮಾರು 23 ಗಂಟೆ ಉಪವಾಸ, ಒಂದು ಗಂಟೆಯೊಳಗೆ ಊಟ ಮಾಡುವ ರೀತಿಯನ್ನು OMAD ಎಂದು ಕರೆಯಲಾಗುತ್ತದೆ.

ಇದರಿಂದ ತೂಕ ಇಳಿಯೋದಕ್ಕೆ ಹೇಗೆ ಸಹಾಯವಾಗುತ್ತೆ?
ದಿನಕ್ಕೆ ಒಂದೇ ಬಾರಿ ಊಟ ಮಾಡಿದಾಗ ಒಟ್ಟಾರೆ ಕ್ಯಾಲೊರಿ ಕಡಿಮೆಯಾಗುವ ಸಾಧ್ಯತೆ ಇದೆ. ಅದರಿಂದ ತೂಕ ಇಳಿಯಬಹುದು. ಆದರೆ ಇಲ್ಲಿ ಮುಖ್ಯವಾದ ವಿಷಯ ಏನೆಂದರೆ ಒಂದೇ ಬಾರಿ ಊಟ ಮಾಡಿದ್ದಕ್ಕೆ ತೂಕ ಇಳಿಯುವುದಿಲ್ಲ; ದೇಹಕ್ಕೆ ಬೇಕಾದುದಕ್ಕಿಂತ ಕಡಿಮೆ ಕ್ಯಾಲೊರಿ ಸೇವಿಸಿದಾಗ ತೂಕ ಇಳಿಯುತ್ತದೆ ಅನ್ನೋದು ನೆನಪಿರಲಿ.
ಒಂದೇ ಊಟವಾದರೂ ಪೌಷ್ಟಿಕವಾಗಿರಬೇಕು
“ಒಂದೇ ಊಟ ಅಲ್ವಾ, ಏನು ಬೇಕಾದರೂ ತಿನ್ನಬಹುದು” ಅಂತ ಅಂದುಕೊಳ್ಳಬೇಡಿ. ಆ ಒಂದು ಊಟದಲ್ಲೇ ಪ್ರೋಟೀನ್, ತರಕಾರಿ, ಬೇಳೆ, ಮೊಸರು, ಪನೀರ್ ಅಥವಾ ಮೊಟ್ಟೆ, ಆರೋಗ್ಯಕರ ಕೊಬ್ಬು ಮತ್ತು ಅಗತ್ಯ ಪೋಷಕಾಂಶಗಳು ಸಿಗುವಂತೆ ನೋಡಿಕೊಳ್ಳಬೇಕು.

ಎಲ್ಲರಿಗೂ ಇದು ವರ್ಕ್ ಆಗುತ್ತಾ?
ಇಲ್ಲ. ಕೆಲವರಿಗೆ ದೀರ್ಘ ಸಮಯ ಊಟ ಮಾಡದೇ ಇದ್ದಾಗ ತಲೆನೋವು, ದೌರ್ಬಲ್ಯ, ಕಿರಿಕಿರಿ ಅಥವಾ ತುಂಬಾ ಹಸಿವು ಆಗಬಹುದು. ಕೆಲವರು ಒಂದೇ ಊಟದ ಸಮಯದಲ್ಲಿ ಅಗತ್ಯಕ್ಕಿಂತ ಹೆಚ್ಚು ತಿನ್ನುವ ಸಾಧ್ಯತೆಯೂ ಇದೆ.
ಹಾಗಾದ್ರೆ OMAD ಮಾಡಬೇಕಾ?
ತೂಕ ಇಳಿಸಿಕೊಳ್ಳಲು OMAD ಮಾಡಲೇಬೇಕು ಅನ್ನೋ ನಿಯಮ ಇಲ್ಲ. ದಿನಕ್ಕೆ 2–3 ಸಮತೋಲಿತ ಊಟಗಳ ಜೊತೆಗೆ ಕ್ಯಾಲೊರಿ ನಿಯಂತ್ರಣ, ಸಾಕಷ್ಟು ಪ್ರೋಟೀನ್, ವ್ಯಾಯಾಮ ಮತ್ತು ಉತ್ತಮ ನಿದ್ರೆ ಇಟ್ಟುಕೊಂಡರೂ ಆರೋಗ್ಯಕರವಾಗಿ ತೂಕ ಇಳಿಸಬಹುದು.

ಹೀಗಾಗಿ OMAD ಎಲ್ಲರಿಗೂ ಸೂಕ್ತವಾದ “ಮ್ಯಾಜಿಕ್ ಡಯೆಟ್” ಅಲ್ಲ. ನಿಮ್ಮ ದೇಹಕ್ಕೆ ಯಾವ ಆಹಾರ ಪದ್ಧತಿ ಸುಲಭವಾಗಿ ಮತ್ತು ದೀರ್ಘಕಾಲ ಪಾಲಿಸಲು ಸಾಧ್ಯವೋ ಅದೇ ಉತ್ತಮ.



