August 20, 2026
Thursday, August 20, 2026
spot_img

ಅನ್ನಂ‌ ಬ್ರಹ್ಮ ಮಾಲಿಕೆ | ಸಿಹಿ ಸಂತೋಷ, ಖಾರ ಕೋಪ, ಕಹಿ ದುಃಖ… ಆಹಾರ-ಭಾವದ ನಂಟು ತೆರೆದಿಟ್ಟ ರಾಘವೇಶ್ವರ ಶ್ರೀ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆಹಾರವೆಂದರೆ ಕೇವಲ ಹಸಿವು ನೀಗಿಸುವ ವಸ್ತುವಲ್ಲ, ಅದರ ರುಚಿಗೂ ಮನುಷ್ಯನ ಭಾವನೆಗಳಿಗೂ ನಿಕಟ ಸಂಬಂಧವಿದೆ. ನಾವು ಸೇವಿಸುವ ಆಹಾರದ ರಸಗಳು ದೇಹದ ಮೇಲೆ ಮಾತ್ರವಲ್ಲ, ಮನಸ್ಸಿನ ಭಾವಗಳ ಮೇಲೂ ಪರಿಣಾಮ ಬೀರುತ್ತವೆ. ಸಿಹಿ ಸಂತೋಷದ ಭಾವವನ್ನು, ಖಾರ ಕೋಪವನ್ನು, ಕಹಿ ದುಃಖವನ್ನು ಹಾಗೂ ಹುಳಿ ಗರ್ವದ ಭಾವನೆಯನ್ನು ಉಂಟುಮಾಡುತ್ತದೆ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.

ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ ‘ಅನ್ನಬ್ರಹ್ಮ ಚಾತುರ್ಮಾಸ್ಯ’ದ ಗುರುವಾರದ ಧರ್ಮಸಭೆಯ ‘ಅನ್ನಂ ಬ್ರಹ್ಮ’ ಮಾಲಿಕೆಯಲ್ಲಿ ಪ್ರವಚನ ಅನುಗ್ರಹಿಸಿದರು.

ಪೂರ್ವಜರ ಜ್ಞಾನ ಮರೆತಿದ್ದೇವೆ

ಆಯುರ್ವೇದ ಮತ್ತು ಯೋಗಶಾಸ್ತ್ರದಲ್ಲಿ ದೇಹ ಹಾಗೂ ಜೀರ್ಣಕ್ರಿಯೆಯ ಕುರಿತು ಅತ್ಯಂತ ಸೂಕ್ಷ್ಮವಾದ ವಿಚಾರಗಳನ್ನು ನಮ್ಮ ಪೂರ್ವಜರು ಸಂಶೋಧಿಸಿದ್ದಾರೆ. ಯಾವುದೇ ಆಧುನಿಕ ಯಂತ್ರಗಳ ಸಹಾಯವಿಲ್ಲದೆ ಅವರು ನಡೆಸಿದ ಅಧ್ಯಯನಗಳು ಅಪೂರ್ವವಾಗಿವೆ. ಸಾಮಾನ್ಯವಾಗಿ ಆಹಾರ ಜೀರ್ಣವಾಗಲು ಸುಮಾರು ನಾಲ್ಕು ಗಂಟೆಗಳು ಬೇಕಾಗುತ್ತವೆ ಮತ್ತು ಅದು ಮೂರು ಹಂತಗಳಲ್ಲಿ ಪಚನಗೊಳ್ಳುತ್ತದೆ. ವಿವಿಧ ಹಂತಗಳಲ್ಲಿ ಉತ್ಪತ್ತಿಯಾಗುವ ರಸಗಳನ್ನೂ ಆಯುರ್ವೇದ ವಿವರಿಸಿದೆ. ಆದರೆ ಈ ಅಪಾರ ಜ್ಞಾನ ನಮ್ಮ ತಲೆಮಾರಿಗೆ ‘ಮಂಗನ ಕೈಯಲ್ಲಿನ ಮಾಣಿಕ್ಯ’ದಂತಾಗಿದೆ ಎಂದು ಶ್ರೀಗಳು ಬೇಸರ ವ್ಯಕ್ತಪಡಿಸಿದರು.

ಪ್ರಬಲ ಅಗ್ನಿ ಇದ್ದರೆ ವಿಷವೂ ಜೀರ್ಣ

ದೇಹದ ಅಗ್ನಿ ಪ್ರಬಲವಾಗಿದ್ದರೆ ಅತ್ಯಂತ ಕಠಿಣವಾದ ವಸ್ತುವನ್ನೂ ಜೀರ್ಣಿಸಿಕೊಳ್ಳುವ ಸಾಮರ್ಥ್ಯ ಇರುತ್ತದೆ ಎಂದು ಶ್ರೀಗಳು ಹೇಳಿದರು. ಇದಕ್ಕೆ ನಳ ಮಹಾರಾಜನ ಉದಾಹರಣೆಯನ್ನು ನೀಡಿದ ಅವರು, ನಳನು ಕಾರ್ಕೋಟಕ ಸರ್ಪದ ವಿಷವನ್ನೂ ಜೀರ್ಣಿಸಿಕೊಂಡಿದ್ದಾನೆ ಎಂಬ ಪೌರಾಣಿಕ ಪ್ರಸಂಗವನ್ನು ಉಲ್ಲೇಖಿಸಿದರು.

ಆಹಾರವು ದೇಹದ ಧಾತುಗಳಾಗಿ ಪರಿವರ್ತನೆಯಾಗಲು ಊಷ್ಮಾ, ವಾಯು, ಕ್ಲೇದ, ಸ್ನೇಹ, ಕಾಲ ಮತ್ತು ಸಮಯೋಗ ಎಂಬ ಆರು ಅಂಶಗಳು ಕಾರ್ಯನಿರ್ವಹಿಸುತ್ತವೆ. ಇವು ಸಮತೋಲನದಿಂದ ಕೆಲಸ ಮಾಡಿದಾಗ ಜೀರ್ಣಕ್ರಿಯೆ ಸರಿಯಾಗಿ ನಡೆಯುತ್ತದೆ. ಆಹಾರವನ್ನು ಚೆನ್ನಾಗಿ ಅಗಿದು ರಸವಾಗುವಂತೆ ಮಾಡಿ ಸೇವಿಸಬೇಕು. ನೀರನ್ನೂ ಗುಟುಕು ಗುಟುಕಾಗಿ ಕುಡಿಯಬೇಕು ಎಂದು ಸಲಹೆ ನೀಡಿದರು.

ತಡರಾತ್ರಿ ನಿದ್ದೆ ಮಾಡಿದರೆ ಪೂರ್ಣ ಪ್ರಯೋಜನವಿಲ್ಲ

ರಾತ್ರಿಯ ನಿದ್ದೆಯ ಬಗ್ಗೆಯೂ ಶ್ರೀಗಳು ವಿವರಿಸಿದರು. ರಾತ್ರಿ ಸಮಯವನ್ನು ಕಫ, ಪಿತ್ತ ಮತ್ತು ವಾತ ಎಂದು ವಿಭಾಗಿಸಲಾಗಿದ್ದು, ಕಫ ಕಾಲದಲ್ಲಿ ನಿದ್ದೆಗೆ ಹೋದರೆ ನಿದ್ದೆಯ ಸಂಪೂರ್ಣ ಪ್ರಯೋಜನ ಪಡೆಯಬಹುದು ಎಂದರು. ಊಟ ಮಾಡಿದ ಸುಮಾರು ಒಂದೂವರೆ ಗಂಟೆಯ ಬಳಿಕ ನಿದ್ರಿಸುವುದು ಸೂಕ್ತ. ತಡರಾತ್ರಿಯ ಪಿತ್ತ ಮತ್ತು ವಾತ ಸಮಯದಲ್ಲಿ ನಿದ್ರಿಸುವುದರಿಂದ ನಿದ್ದೆಯ ನಿಜವಾದ ಪ್ರಯೋಜನ ದೊರೆಯುವುದಿಲ್ಲ ಎಂದು ಹೇಳಿದರು.

ಗುರುಭಿಕ್ಷಾ ಸೇವೆ

ಈ ಸಂದರ್ಭದಲ್ಲಿ ಹೊನ್ನಾವರ ಹವ್ಯಕ ಮಂಡಲದ ಕರ್ಕಿ, ಅಪ್ಸರಕೊಂಡ, ಭಟ್ಕಳ, ಮರವಂತೆ ಹಾಗೂ ಭವತಾರಿಣೀ ಹವ್ಯಕ ವಲಯಗಳ ಪರವಾಗಿ ಉದಯ ಭಟ್ ಕುಟುಂಬದವರು ಗುರುಭಿಕ್ಷಾ ಸೇವೆ ಸಮರ್ಪಿಸಿದರು. ನಾಗರಾಜ ಮತ್ತಿಗಾರ, ರಾಧಾಕೃಷ್ಣ ಭಟ್ ಭಟ್ಕಳ, ಹರಿಪ್ರಸಾದ ಪೆರಿಯಪ್ಪು, ಜಿ.ಎಸ್. ಹೆಗಡೆ, ಸುಧಾಕರ ಬಡಗಣಿ, ವಿಷ್ಣು ಭಟ್ ಕವಲಕ್ಕಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ದಿನಪ್ರಧಾನರಾಗಿ ರಾಮ ಭಟ್ ರಾಮಕುಂಜ ದಂಪತಿಗಳು ಭಾಗವಹಿಸಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !