ಹೊಸದಿಗಂತ ವರದಿ ಉಳ್ಳಾಲ:
ಉಳ್ಳಾಲ ಕೋಟೆಪುರ ಸಮುದ್ರ ತೀರದಲ್ಲಿ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದ ಘಟನೆಗೆ ಮೇಜರ್ ಟ್ವಿಸ್ಟ್ ಸಿಕ್ಕಿದೆ!
ಮೀನುಗಾರಿಕಾ ಬೋಟ್ ನಿಂದ ಸಮುದ್ರಕ್ಕೆ ಬಿದ್ದು ನಾಪತ್ತೆಯಾಗಿದ್ದ ಎನ್ನಲಾದ ವ್ಯಕ್ತಿಯನ್ನು ತಲೆಗೆ ಮತ್ತು ಹೊಟ್ಟೆಗೆ ಸುತ್ತಿಗೆ ಹಾಗೂ ಹರಿತ ಆಯುಧದಿಂದ ಪ್ರಹಾರ ನಡೆಸಿ ಕೊಲ್ಲಲಾಗಿದೆ ಎನ್ನುವ ವರದಿ ಮರಣೋತ್ತರ ಪರೀಕ್ಷೆಯಲ್ಲಿ ಲಭಿಸಿದ್ದು, ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ವ್ಯಕ್ತಿಯನ್ನು ಯಾರೋ ಕೊಲೆಗೈದು ಸಮುದ್ರಕ್ಕೆ ಎಸೆದಿರುವ ಶಂಕೆಯಲ್ಲಿ ಪ್ರಕರಣ ದಾಖಲಾಗಿದೆ.
ಆ.17ರಂದು ಕೋಟೆಪುರ ಮಸೀದಿ ಹಿಂಭಾಗದ ಕಡಲ ಕಿನಾರೆಯಲ್ಲಿ ವ್ಯಕ್ತಿಯೊಬ್ಬರ ಶವವು ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಸ್ಥಳಕ್ಕೆ ಭೇಟಿ ನೀಡಿದ್ದ ಉಳ್ಳಾಲ ಪೊಲೀಸರು ಪರಿಶೀಲನೆ ನಡೆಸಿದ್ದರು. ಈ ನಡುವೆ, ಪಾಂಡೇಶ್ವರ ಠಾಣೆಯಲ್ಲಿ ದಾಖಲಾಗಿದ್ದ ಉಡುಪಿ ಜಿಲ್ಲೆಯ ಮೂಲದ ಮೀನುಗಾರ ನಾರಾಯಣ ಎಂಬವರ ನಾಪತ್ತೆ ಪ್ರಕರಣದಲ್ಲಿ ದೂರುದಾರರಾದ ನಾರಾಯಣ ಅವರ ಸಹೋದರ ಕೃಷ್ಣಪ್ಪ ಅವರನ್ನ ಪೊಲೀಸರು ಸ್ಥಳಕ್ಕೆ ಕರೆಸಿದ್ದರು. ಮೃತದೇಹವು ತನ್ನ ತಮ್ಮನದ್ದೇ ಎಂದು ಕೃಷ್ಣಪ್ಪ ಗುರುತಿಸಿದ್ದರಿಂದ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ವೆನ್ಲಾಕ್ ಆಸ್ಪತ್ರೆಗೆ ಕಳುಹಿಸಿದ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿದ್ದರು.
ಇದೀಗ ಶವ ಮಹಜರು ಮಾಡಿದ ವೈದ್ಯರು ಮೃತದೇಹದ ತಲೆ ಬುರುಡೆಯು ಹರಿತ ಆಯುಧ ಮತ್ತು ಸುತ್ತಿಗೆಯಂತಹ ವಸ್ತುಗಳ ಪ್ರಹಾರದಿಂದ ಒಡೆದಿದ್ದು, ಹಲವು ರೀತಿಯ ಗಾಯಗಳಾಗಿರುವುದನ್ನು ಪತ್ತೆ ಮಾಡಿದ್ದಾರೆ. ಮುಖದ ಗದ್ದ (ಚಿನ್) ಭಾಗ ಮತ್ತು ಹೊಟ್ಟೆಯ ಭಾಗಗಳಲ್ಲೂ ಹರಿತವಾದ ಆಯುಧಗಳಿಂದ ಉಂಟಾದ ಗಾಯಗಳಿರುವುದನ್ನು ದೃಢಪಡಿಸಿದ್ದಾರೆ.
ತಮ್ಮನ ನಾಪತ್ತೆ ಬಗ್ಗೆ ದೂರು ನೀಡಿದ್ದ ಕೃಷ್ಣಪ್ಪ ಹಾಗೂ ವೈದ್ಯರ ಮಾಹಿತಿಗಳು ಪರಸ್ಪರ ತಾಳೆಯಾಗದೆ ವ್ಯತ್ಯಾಸ ಕಂಡು ಬಂದಿದೆ. ಕೋಟೆಪುರದಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಶವದಲ್ಲಿ ಗುರುತಿಸುವಂತಹ ಬಟ್ಟೆಯಾಗಲೀ, ಇನ್ನಿತರ ವಸ್ತುವಾಗಲೀ ಇರಲಿಲ್ಲ. ಹೀಗಾಗಿ ಕೊಳೆತ ಸ್ಥಿತಿಯಲ್ಲಿ ದೊರಕಿದ್ದ ಶವ ಯಾರದ್ದೆಂದು ಇನ್ನೂ ದೃಢಪಟ್ಟಿಲ್ಲ. ಹಾಗಾಗಿ ಮೃತರ ಡಿಎನ್ ಎ ಪರೀಕ್ಷೆಗೆ ಪೊಲೀಸರು ಮುಂದಾಗಿದ್ದಾರೆ. ಮೃತರನ್ನ ಯಾರೋ ದುಷ್ಕರ್ಮಿಗಳು ಎಲ್ಲಿಯೋ ಬರ್ಬರವಾಗಿ ಕೊಲೆ ಮಾಡಿ ತಂದು ಎಸೆದಿರುವ ಬಗ್ಗೆಯೂ ಸಂಶಯ ವ್ಯಕ್ತ ಪಡಿಸಿರುವ ಉಳ್ಳಾಲ ಪೊಲೀಸರು ಅಸಹಜ ಸಾವು ಪ್ರಕರಣವನ್ನು ಶಂಕಿತ ಕೊಲೆ ಕೇಸಾಗಿ ಪರಿವರ್ತಿಸಿದ್ದಾರೆ.
ಈ ಬಗ್ಗೆ ಉಳ್ಳಾಲ ಠಾಣೆ ಪಿಎಸ್‌ಐ ರೇವಣಸಿದ್ದಪ್ಪ ಸ್ವತಃ ದೂರು ದಾಖಲಿಸಿಕೊಂಡು ಬಿಎನ್‌ಎಸ್ 118(2) ಮತ್ತು 103(1) ಅಡಿ ಕೇಸು ದಾಖಲಿಸಿದ್ದಾರೆ. ಅಲ್ಲದೆ, ತನ್ನ ತಮ್ಮನದ್ದೇ ಶವ ಎಂದಿರುವ ಕೃಷ್ಣಪ್ಪ ಅವರ ಸ್ಯಾಂಪಲ್ ಪಡೆದು ಡಿಎನ್‌ಎ ಪರೀಕ್ಷೆಗೆ ಮುಂದಾಗಿದ್ದಾರೆ. ನಾರಾಯಣ ಅವರನ್ನು ಬೋಟಿನಲ್ಲಿ ಕರೆದೊಯ್ದಿದ್ದ ಇತರ ಸಿಬಂದಿಯನ್ನು ತನಿಖೆಗೆ ಒಳಪಡಿಸಲಿದ್ದಾರೆ.
ಏನಿದು ನಾಪತ್ತೆ ಪ್ರಕರಣ??
ಉಡುಪಿ ಜಿಲ್ಲೆಯ ಕಿರಿಮಂಜೇಶ್ವರ ನಿವಾಸಿ ನಾರಾಯಣ (31) ಎಂಬವರು ಆ.3ರಂದು ಮಂಗಳೂರಿನ ಮೀನುಗಾರರೊಂದಿಗೆ ಬೋಟಿನಲ್ಲಿ ಮೀನುಗಾರಿಕೆಗೆ ತೆರಳಿದ್ದು ಆ.9ರಂದು ವಾಪಾಸು ಬರುತ್ತಿದ್ದಾಗ ಅರಬ್ಬೀ ಸಮುದ್ರ ಹಾಗೂ ನೇತ್ರಾವತಿ ನದಿ ಸೇರುವ ಅಳಿವೆ ಬಾಗಿಲಿನಲ್ಲಿ ಅಲೆಯ ಹೊಡೆತಕ್ಕೆ ಸಿಲುಕಿ ಸಮುದ್ರಕ್ಕೆ ಬಿದ್ದು ನಾಪತ್ತೆಯಾಗಿರುವ ಬಗ್ಗೆ ಅವರ ಅಣ್ಣ ಕೃಷ್ಣಪ್ಪ ಆ.10ರಂದು ಮಂಗಳೂರಿನ ಪಾಂಡೇಶ್ವರ ಠಾಣೆಯಲ್ಲಿ ನಾಪತ್ತೆ ಕೇಸು ದಾಖಲಿಸಿದ್ದರು.



