ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರಾವಳಿಯನ್ನೇ ಬೆಚ್ಚಿಬೀಳಿಸಿದ್ದ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಮುದರಂಗಡಿಯಲ್ಲಿ ನಡೆದ ಉದ್ಯಮಿ ಡೇವಿಡ್ ಡಿಸೋಜಾ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮತ್ತೊಬ್ಬ ಆರೋಪಿಯನ್ನು ಉತ್ತರಾಖಂಡದಲ್ಲಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಬಿಹಾರದ ಶೇಖ್‌ಪುರ ಜಿಲ್ಲೆಯ ಕಟ್ಟಾರಿ ನಿವಾಸಿ ಸೂರಜ್ ಕುಮಾರ್ (31) ಎಂದು ಗುರುತಿಸಲಾಗಿದೆ. ಈತ ಕೃತ್ಯಕ್ಕೆ ಹಣಕಾಸು ನೆರವು ನೀಡುವುದರ ಜೊತೆಗೆ ಹತ್ಯೆಯ ಸಂಚು ರೂಪಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಈ ಪ್ರಕರಣದಲ್ಲಿ ನೇರವಾಗಿ ಭಾಗಿಯಾಗಿರುವ ಆರೋಪದ ಮೇಲೆ ಅನ್ಮೋಲ್ ರಸ್ತೋಗಿ ಹಾಗೂ ಜಿಯಾಹುಲ್ ವಾಜುಲ್ ಶೇಖ್ ಅಲಿಯಾಸ್ ದೀಪಕ್ ಅವರನ್ನು ಪೊಲೀಸರು ಈ ಹಿಂದೆಯೇ ಬಂಧಿಸಿದ್ದರು. ಬಳಿಕ ಕೃತ್ಯಕ್ಕೆ ಒಳಸಂಚು ರೂಪಿಸಿ ಹಣಕಾಸು ಪೂರೈಸಿದ ಆರೋಪದ ಮೇಲೆ ಮೊಹಮ್ಮದ್ ಇರ್ಷಾದ್, ಚಿರಾಗ್ ಪೂಜಾರಿ, ಸದಾನಂದ ದೇವಾಡಿಗ ಮತ್ತು ಕಿಶೋರ್ ರಾಮ ಪೂಜಾರಿ ಅವರನ್ನು ಬಂಧಿಸಲಾಗಿತ್ತು.
ಈ ಪೈಕಿ ಬಂಧನದ ವೇಳೆ ಗುಂಡೇಟು ತಗುಲಿರುವ ರಾಜು, ಉಡುಪಿಯ ಅಜ್ಜರಕಾಡು ಜಿಲ್ಲಾ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕ ಅವರನ್ನು ಪೊಲೀಸರು ವಶಕ್ಕೆ ಪಡೆಯಲಿದ್ದಾರೆ.
ಕಚೇರಿಯಲ್ಲೇ ಗುಂಡಿಕ್ಕಿ ಹತ್ಯೆ
ಆಗಸ್ಟ್ 7ರಂದು ಮಧ್ಯಾಹ್ನ 3.45ರ ಸುಮಾರಿಗೆ ಮುದರಂಗಡಿಯ ಸೈಂಟ್ ಕ್ಸೇವಿಯರ್ ಚರ್ಚ್ ಕಾಂಪ್ಲೆಕ್ಸ್‌ನಲ್ಲಿರುವ ಪ್ರಿನ್ಸ್ ಎಂಟರ್‌ಪ್ರೈಸಸ್ ಕಚೇರಿಯಲ್ಲಿ ಅದರ ಮಾಲೀಕ ಡೇವಿಡ್ ಡಿಸೋಜಾ ಅವರನ್ನು ತಲೆಗೆ ಗುಂಡು ಹಾರಿಸಿ ಹತ್ಯೆ ಮಾಡಲಾಗಿತ್ತು. ಈ ಸಂಬಂಧ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಘಟನೆ ನಡೆದ 24 ಗಂಟೆಗಳ ಒಳಗಾಗಿ ಪೊಲೀಸರು ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿದ್ದರು. ಇದೀಗ ಪ್ರಕರಣದ ತನಿಖೆಯನ್ನು ಮುಂದುವರಿಸಿರುವ ಪೊಲೀಸರು ಉತ್ತರಾಖಂಡದಲ್ಲಿ ಮತ್ತೊಬ್ಬ ಪ್ರಮುಖ ಆರೋಪಿಯನ್ನು ಬಂಧಿಸಿದ್ದಾರೆ.



