ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆ ಚುರುಕುಗೊಂಡಿದೆ. ಮತದಾರರ ವಿವರಗಳನ್ನು ಪರಿಶೀಲಿಸುವ ಸಂದರ್ಭದಲ್ಲಿ ಹೆಸರು ಅಥವಾ ಇತರ ಮಾಹಿತಿಯಲ್ಲಿ ಹೊಂದಾಣಿಕೆ ಕಾಣದ 43.80 ಲಕ್ಷ ಮತದಾರರನ್ನು ಚುನಾವಣಾ ಆಯೋಗ ಗುರುತಿಸಿದೆ. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಮತದಾರರಿಗೆ ಪರಿಶೀಲನೆಗಾಗಿ ನೋಟಿಸ್ ನೀಡಲು ಸಿದ್ಧತೆ ನಡೆದಿದೆ.
43.80 ಲಕ್ಷ ಮತದಾರರಿಗೆ ನೋಟಿಸ್
SIR ಪರಿಶೀಲನೆಯಲ್ಲಿ 23.45 ಲಕ್ಷ ಮತದಾರರ ವಿವರಗಳು 2002ರ ಮತದಾರರ ಪಟ್ಟಿಯೊಂದಿಗೆ ಮ್ಯಾಪಿಂಗ್ ಆಗಿಲ್ಲ. ಮತ್ತೊಂದೆಡೆ, ಸುಮಾರು 20.35 ಲಕ್ಷ ಮತದಾರರ ಹೆಸರು, ವಯಸ್ಸು, ತಂದೆಯ ಹೆಸರು ಸೇರಿದಂತೆ ವಿವಿಧ ವಿವರಗಳಲ್ಲಿ ವ್ಯತ್ಯಾಸಗಳು ಕಂಡುಬಂದಿವೆ. ಹೀಗಾಗಿ ಒಟ್ಟು 43.80 ಲಕ್ಷ ಮಂದಿಗೆ ನೋಟಿಸ್ ನೀಡಲಾಗುತ್ತಿದೆ.
ನೋಟಿಸ್ ಬಂದರೆ ಗಾಬರಿ ಬೇಡ
ನೋಟಿಸ್ ಬಂದ ಮಾತ್ರಕ್ಕೆ ಮತದಾರರ ಹೆಸರನ್ನು ತಕ್ಷಣವೇ ಪಟ್ಟಿಯಿಂದ ತೆಗೆದುಹಾಕಲಾಗುವುದಿಲ್ಲ. ಸಂಬಂಧಪಟ್ಟ ವ್ಯಕ್ತಿಗೆ ತನ್ನ ದಾಖಲೆಗಳನ್ನು ನೀಡಿ ವಿವರಗಳನ್ನು ಸರಿಪಡಿಸಿಕೊಳ್ಳಲು ಅವಕಾಶವಿರುತ್ತದೆ. ಹೀಗಾಗಿ ನೋಟಿಸ್ ಸ್ವೀಕರಿಸಿದವರು ಆತಂಕಪಡುವ ಅಗತ್ಯವಿಲ್ಲ.
ಆಗಸ್ಟ್ 24ರಿಂದ ಪ್ರಕ್ರಿಯೆ ಆರಂಭ
ಕರಡು ಮತದಾರರ ಪಟ್ಟಿ ಆಗಸ್ಟ್ 24ರಂದು ಪ್ರಕಟವಾಗಲಿದೆ. ಅದೇ ದಿನದಿಂದ ಅಕ್ಟೋಬರ್ 22ರವರೆಗೆ ನೋಟಿಸ್ ನೀಡುವುದು, ದಾಖಲೆ ಪರಿಶೀಲನೆ ಹಾಗೂ ಆಕ್ಷೇಪಣೆಗಳ ವಿಲೇವಾರಿ ಪ್ರಕ್ರಿಯೆ ನಡೆಯಲಿದೆ.
ಇದನ್ನೂ ಓದಿ:
ಬೆಂಗಳೂರಿಗರಿಗೆ ಹೆಚ್ಚು ನೋಟಿಸ್
ರಾಜ್ಯದಲ್ಲಿ ಅತಿ ಹೆಚ್ಚಿನ ಸಂಖ್ಯೆಯ ನೋಟಿಸ್‌ಗಳು ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಜಾರಿಯಾಗುವ ಸಾಧ್ಯತೆಯಿದೆ. ಬೆಂಗಳೂರು ನಗರ ಜಿಲ್ಲೆ ಹಾಗೂ ಬಿಬಿಎಂಪಿಯ ವಿವಿಧ ವಲಯಗಳ ವ್ಯಾಪ್ತಿಯಲ್ಲಿ 24 ಲಕ್ಷಕ್ಕೂ ಹೆಚ್ಚು ಮತದಾರರಿಗೆ ನೋಟಿಸ್ ತಲುಪುವ ನಿರೀಕ್ಷೆಯಿದೆ.
ನೋಟಿಸ್ ಬಂದಾಗ ಏನು ಮಾಡಬೇಕು?
ಬೂತ್ ಮಟ್ಟದ ಅಧಿಕಾರಿಗಳು (BLO) ಮತದಾರರ ಮನೆಗೆ ಭೇಟಿ ನೀಡಿ ನೋಟಿಸ್ ನೀಡಲಿದ್ದಾರೆ. ನೋಟಿಸ್‌ನಲ್ಲಿರುವ QR ಕೋಡ್ ಬಳಸಿ ಅಗತ್ಯ ದಾಖಲೆಗಳನ್ನು ಆನ್‌ಲೈನ್ ಮೂಲಕ ಸಲ್ಲಿಸುವ ಅವಕಾಶವೂ ಇರಲಿದೆ. ಅಗತ್ಯವಿದ್ದರೆ ಸೂಚಿಸಿರುವ ಸ್ಥಳಕ್ಕೆ ತೆರಳಿ ದಾಖಲೆಗಳೊಂದಿಗೆ ವಿಚಾರಣೆಗೆ ಹಾಜರಾಗಬೇಕಾಗುತ್ತದೆ.
ಗೈರಾದರೆ ಮತದಾನದ ಹಕ್ಕು ಕಳೆದುಕೊಳ್ಳುತ್ತೀರಾ?
ಮೊದಲ ವಿಚಾರಣೆಗೆ ಹಾಜರಾಗಲು ಸಾಧ್ಯವಾಗದಿದ್ದರೆ ಮತ್ತೊಂದು ಅವಕಾಶ ನೀಡಲಾಗುತ್ತದೆ. ಆದರೆ ಎರಡನೇ ಅವಕಾಶದಲ್ಲೂ ಹಾಜರಾಗದಿದ್ದರೆ ಮುಂದಿನ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ. ಆದ್ದರಿಂದ ನೋಟಿಸ್ ಬಂದವರು ನೀಡಿರುವ ದಿನಾಂಕ ಮತ್ತು ಸೂಚನೆಗಳನ್ನು ನಿರ್ಲಕ್ಷಿಸದೆ, ಅಗತ್ಯ ದಾಖಲೆಗಳೊಂದಿಗೆ ಪ್ರಕ್ರಿಯೆ ಪೂರ್ಣಗೊಳಿಸುವುದು ಮುಖ್ಯವಾಗಿದೆ.



