ಹೊಸದಿಗಂತ ಡಿಜಿಟಲ್ ಡೆಸ್ಕ್:
ಜುಲೈ 20ರಂದು ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿ ಪ್ರತಿಭಟನೆ ವೇಳೆ ಸಾಹಿಲ್ ಲೋಚಾಬ್ ಎಂಬ ವಿದ್ಯಾರ್ಥಿಗೆ ಪೆಲ್ಲೆಟ್ ಗನ್‌ನಿಂದ ಗಾಯವಾಗಿರುವ ಘಟನೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಶುಕ್ರವಾರ ಅಧಿಕೃತವಾಗಿ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಗಾಯಾಳು ವಿದ್ಯಾರ್ಥಿಯೊಂದಿಗೆ ಡಿಸಿಪಿ ಕಚೇರಿಗೆ ಭೇಟಿ ನೀಡಿ, ಪೊಲೀಸರ ಬಲಪ್ರಯೋಗದ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕೆ ಒತ್ತಾಯಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ಪೊಲೀಸರು ದೂರು ದಾಖಲಿಸಿಕೊಳ್ಳಲು ನಿರಾಕರಿಸುತ್ತಿದ್ದಾರೆ ಎಂದು ಆರೋಪಿಸಿ ರಾಹುಲ್ ಗಾಂಧಿ ಅವರು ಪೊಲೀಸ್ ಠಾಣೆ ಹೊರಗೆ ಧರಣಿ ಕುಳಿತಿದ್ದರು. ಈ ವೇಳೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ಧರಣಿಯಲ್ಲಿ ಪಾಲ್ಗೊಂಡಿದ್ದರು.

‘ದೇಹದಲ್ಲಿ 200ಕ್ಕೂ ಹೆಚ್ಚು ಪೆಲ್ಲೆಟ್‌ಗಳು ಇವೆ’: ರಾಹುಲ್ ಗಾಂಧಿ ಆರೋಪ
ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್ ಗಾಂಧಿ ಅವರು, ಪ್ರತಿಭಟನಾಕಾರರ ದೇಹದಿಂದ ತೆಗೆಯಲಾದ ಪೆಲ್ಲೆಟ್‌ಗಳನ್ನು ಪ್ರದರ್ಶಿಸಿದರು. ವಿದ್ಯಾರ್ಥಿ ಸಾಹಿಲ್ ದೇಹದಲ್ಲಿ 200 ಕ್ಕೂ ಹೆಚ್ಚು ಪೆಲ್ಲೆಟ್‌ಗಳು ಸಿಲುಕಿಕೊಂಡಿವೆ. ಈ ಪೆಲ್ಲೆಟ್‌ಗಳು ಎಲ್ಲಿಂದ ಬಂದವು? ಶಾಂತಿಯುತ ಪ್ರತಿಭಟನೆಯ ವಿರುದ್ಧ ಇಂತಹ ಕ್ರೂರತೆ ನಡೆಸಿರುವುದು ಗಂಭೀರ ಅಪರಾಧ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಲ್ಲದೆ, ವಿದ್ಯಾರ್ಥಿಯ ಒಂದು ಕಣ್ಣಿನಲ್ಲಿ ಮೂರು ಪೆಲ್ಲೆಟ್‌ಗಳು ಸಿಲುಕಿದ್ದರಿಂದ ಆತ ದೃಷ್ಟಿ ಕಳೆದುಕೊಂಡಿದ್ದಾನೆ ಮತ್ತು ಕೆಲವು ಪೆಲ್ಲೆಟ್‌ಗಳು ಹೃದಯದ ಹತ್ತಿರ ಇರುವುದರಿಂದ ಅವುಗಳನ್ನು ಹೊರತೆಗೆಯಲು ಸಾಧ್ಯವಾಗಿಲ್ಲ ಎಂದು ರಾಹುಲ್ ಆತಂಕ ವ್ಯಕ್ತಪಡಿಸಿದರು. ನಾವು ಪೆಲ್ಲೆಟ್ ಫೈರಿಂಗ್ ಮಾಡಿಲ್ಲ ಎಂದು ದೆಹಲಿ ಪೊಲೀಸರು ಹೇಳುತ್ತಿದ್ದಾರೆ. ಹಾಗಿದ್ದರೆ ಈ ಪೆಲ್ಲೆಟ್‌ಗಳನ್ನು ಶೂಟ್ ಮಾಡಿದವರು ಯಾರು? ಎಂದು ಅವರು ಪ್ರಶ್ನಿಸಿದರು.

ಗೃಹ ಸಚಿವ ಅಮಿತ್ ಶಾ ವಿರುದ್ಧ ವಾಗ್ದಾಳಿ
ದೆಹಲಿ ಪೊಲೀಸ್ ಇಲಾಖೆಯ ಉಸ್ತುವಾರಿ ಹೊಂದಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್, ಅಮಿತ್ ಶಾ ಅವರೇ, ನೀವು ನ್ಯಾಯಕ್ಕೆ ಯಾಕೆ ಇಷ್ಟು ಹೆದರುತ್ತಿದ್ದೀರಾ? ಈ ಭಯವೇ ನೀವು ಅಪರಾಧ ಒಪ್ಪಿಕೊಂಡಿರುವುದಕ್ಕೆ ಸಾಕ್ಷಿ ಎಂದು ಟೀಕಿಸಿದರು. ಈ ಇಡೀ ಘಟನೆಯ ಕುರಿತು ನ್ಯಾಯಾಂಗ ತನಿಖೆಯಾಗಬೇಕು ಮತ್ತು ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಅವರು ಒತ್ತಾಯಿಸಿದರು.
ದೃಷ್ಟಿ ಇನ್ನು ಸ್ಪಷ್ಟವಾಗಿಲ್ಲ ಎಂದ ವಿದ್ಯಾರ್ಥಿ
ಗಾಯಾಳು ವಿದ್ಯಾರ್ಥಿ ಸಾಹಿಲ್ ಲೋಚಾಬ್ ಮಾತನಾಡಿ, ಜುಲೈ 20 ರಂದು ನನ್ನ ಮೇಲೆ ಪೆಲ್ಲೆಟ್ ಗನ್‌ನಿಂದ ದಾಳಿ ಮಾಡಲಾಯಿತು. ಮೊದಲು ಲೇಡಿ ಹಾರ್ಡಿಂಜ್ ಆಸ್ಪತ್ರೆಗೆ ದಾಖಲಿಸಿ, ನಂತರ ಏಮ್ಸ್ (AIIMS) ಆಸ್ಪತ್ರೆಗೆ ರವಾನಿಸಲಾಯಿತು. ಅಲ್ಲಿ ಶಸ್ತ್ರಚಿಕಿತ್ಸೆ ನಡೆದಿದ್ದರೂ ನನ್ನ ಕಣ್ಣಿನ ದೃಷ್ಟಿ ಇನ್ನು ಸ್ಪಷ್ಟವಾಗಿಲ್ಲ ಎಂದು ಅಳಲು ತೋಡಿಕೊಂಡರು. ಆಗಸ್ಟ್ 14 ರಂದೇ ತಮ್ಮ ವಕೀಲರ ಮೂಲಕ 7 ಪುಟಗಳ ಸುದೀರ್ಘ ದೂರು ನೀಡಿದ್ದರೂ ಪೊಲೀಸರು ಸ್ವೀಕೃತಿ ರಶೀದಿ ನೀಡಿರಲಿಲ್ಲ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಇದನ್ನೂ ಓದಿ:
ಘಟನೆಯ ಹಿನ್ನೆಲೆ
ನೀಟ್ ಪತ್ರಿಕೆ ಸೋರಿಕೆ ಹಗರಣ ಮತ್ತು ಪರೀಕ್ಷಾ ಅಕ್ರಮಗಳನ್ನು ವಿರೋಧಿಸಿ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ʼಸಂಸದ್ ಚಲೋʼ ಪ್ರತಿಭಟನಾ ಮೆರವಣಿಗೆಯ ವೇಳೆ ಪೊಲೀಸರು ಬಲಪ್ರಯೋಗ ಮಾಡಿದ್ದರು. ಈ ಘಟನೆಯು ಸದ್ಯ ದೇಶದ ರಾಜಕೀಯ ವಲಯದಲ್ಲಿ ತೀವ್ರ ಸಂಘರ್ಷಕ್ಕೆ ಕಾರಣವಾಗಿದೆ.



