August 21, 2026
Friday, August 21, 2026
spot_img

ಹಿರಿಯ ನಟಿ ಸಾಹುಕಾರ್ ಜಾನಕಿ ವಿಧಿವಶ: ಚೆನ್ನೈನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಬಹುಭಾಷಾ ತಾರೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ದಕ್ಷಿಣ ಭಾರತ ಚಿತ್ರರಂಗದ ಹಿರಿಯ ಕೊಂಡಿ, ಬಹುಭಾಷಾ ನಟಿ ಸಾಹುಕಾರ್ ಜಾನಕಿ (94) ಅವರು ಇಂದು ಮಧ್ಯಾಹ್ನ 1:59 ಕ್ಕೆ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ವಯೋಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ (ICU) ಇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.

‘ಶಾವುಕಾರು’ ಚಿತ್ರದಿಂದ ‘ಸಾಹುಕಾರ್’ ಆದ ಜಾನಕಿ

1931 ರಲ್ಲಿ ಜನಿಸಿದ ಸಂಕರಮಂಚಿ ಜಾನಕಿ ಅವರು ಚಿತ್ರರಂಗಕ್ಕೆ ಕಾಲಿಟ್ಟಾಗ ‘ಸಾಹುಕಾರ್ ಜಾನಕಿ’ ಎಂದು ಮರುನಾಮಕರಣಗೊಂಡರು. ಪ್ರಸಿದ್ಧ ನಿರ್ದೇಶಕ ಎಲ್.ವಿ. ಪ್ರಸಾದ್ ನಿರ್ದೇಶನದ ‘ಶಾವುಕಾರು’ ಎಂಬ ತೆಲುಗು ಚಿತ್ರದ ಮೂಲಕ ಅವರು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಈ ಚಿತ್ರದ ಭರ್ಜರಿ ಯಶಸ್ಸು ಅವರಿಗೆ ‘ಸಾಹುಕಾರ್’ ಎಂಬ ಶಾಶ್ವತ ಹೆಸರನ್ನು ತಂದುಕೊಟ್ಟಿತು.

ಏಳು ದಶಕಗಳ ಸುದೀರ್ಘ ಸಿನಿಮಾ ಜರ್ನಿ

1952 ರಲ್ಲಿ ‘ವಲಾಯಪತಿ’ ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ ಪ್ರವೇಶಿಸಿದ ಅವರು, ಅತಿ ಕಡಿಮೆ ಅವಧಿಯಲ್ಲಿ ಸ್ಟಾರ್ ನಟಿಯಾಗಿ ಗುರುತಿಸಿಕೊಂಡರು. ನಾಯಕಿಯರು ಸಾಂಪ್ರದಾಯಿಕ ಪಾತ್ರಗಳಿಗಷ್ಟೇ ಸೀಮಿತವಾಗಿದ್ದ ಕಾಲದಲ್ಲಿ, ಜಾನಕಿ ಅವರು ವೈವಿಧ್ಯಮಯ ಮತ್ತು ಸವಾಲಿನ ಪಾತ್ರಗಳ ಮೂಲಕ ತಮ್ಮ ನಟನಾ ಕೌಶಲ್ಯವನ್ನು ಸಾಬೀತುಪಡಿಸಿದರು. ಅಂದಿನ ಕಾಲದ ಎಲ್ಲಾ ಪ್ರಮುಖ ಸ್ಟಾರ್ ನಟರ ಜೊತೆ ನಾಯಕಿಯಾಗಿ ನಟಿಸಿದ್ದ ಅವರು, ನಂತರದ ದಿನಗಳಲ್ಲಿ ಪೋಷಕ ಪಾತ್ರಗಳಿಗೂ ಯಶಸ್ವಿಯಾಗಿ ತಮ್ಮನ್ನು ಒಗ್ಗಿಸಿಕೊಂಡರು.

ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಸೇರಿದಂತೆ ನಾಲ್ಕೂ ಭಾಷೆಗಳಲ್ಲಿ ಏಳು ದಶಕಗಳ ಕಾಲ ಸಕ್ರಿಯರಾಗಿದ್ದ ಅವರು 400 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ೨2023 ರಲ್ಲಿ ತೆರೆಕಂಡ ತೆಲುಗಿನ ‘ಅನ್ನಿ ಮಂಚಿ ಶಕುನಮುಲೇ’ ಅವರ ಕೊನೆಯ ಚಿತ್ರವಾಗಿತ್ತು. ಕೇವಲ ಸಿನಿಮಾ ಮಾತ್ರವಲ್ಲದೆ, ಅವರು 300 ಕ್ಕೂ ಹೆಚ್ಚು ರಂಗಭೂಮಿ ಪ್ರದರ್ಶನಗಳು ಮತ್ತು ಹಲವಾರು ದೂರದರ್ಶನ ಕಾರ್ಯಕ್ರಮಗಳಲ್ಲೂ ಭಾಗವಹಿಸಿದ್ದರು.

ಇದನ್ನೂ ಓದಿ:

ಹುಡುಕಿ ಬಂದ ಗೌರವಗಳು

ಭಾರತೀಯ ಚಿತ್ರರಂಗಕ್ಕೆ ಸಾಹುಕಾರ್ ಜಾನಕಿ ಅವರು ನೀಡಿದ ಅತ್ಯಮೂಲ್ಯ ಕೊಡುಗೆಯನ್ನು ಪರಿಗಣಿಸಿ ಸರ್ಕಾರ ಮತ್ತು ಸಂಘಸಂಸ್ಥೆಗಳು ಅನೇಕ ಪ್ರಶಸ್ತಿಗಳನ್ನು ನೀಡಿ ಗೌರವಿಸಿವೆ. ತಮಿಳುನಾಡು ಸರ್ಕಾರದ ಪ್ರತಿಷ್ಠಿತ ‘ಕಲೈಮಾಮಣಿ’ ಪ್ರಶಸ್ತಿ ಹಾಗೂ 2022ರಲ್ಲಿ ಭಾರತ ಸರ್ಕಾರ ನೀಡುವ ದೇಶದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಪದ್ಮಶ್ರೀ’ ನೀಡಿ ಗೌರವಿಸಲಾಗಿತ್ತು.

ಸಾಹುಕಾರ್ ಜಾನಕಿ ಅವರ ನಿಧನದಿಂದಾಗಿ ದಕ್ಷಿಣ ಭಾರತ ಚಿತ್ರರಂಗದ ಬೆಳವಣಿಗೆಯನ್ನು ಕಣ್ಣಾರೆ ಕಂಡಿದ್ದ ಹಾಗೂ ಅದಕ್ಕೆ ಸಾಕ್ಷಿಯಾಗಿದ್ದ ಒಬ್ಬ ಶ್ರೇಷ್ಠ ನಟಿಯನ್ನು ಭಾರತೀಯ ಚಿತ್ರರಂಗ ಕಳೆದುಕೊಂಡಂತಾಗಿದೆ. ಅವರ ನಿಧನಕ್ಕೆ ಚಿತ್ರರಂಗದ ಗಣ್ಯರು ತೀವ್ರ ಕಂಬನಿ ಮಿಡಿದಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !